ತಮ್ಮನ್ನು ಹಾಗೂ ತಮ್ಮ ಬೆಂಬಲಿಗರನ್ನು ಜೆಡಿಎಸ್ ಕಡೆಗಣಿಸಿದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಕಡೆ ಬಚ್ಚೇಗೌಡ ಒಲವು ತೋರಿದ್ದು, ತಮ್ಮ ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ಈ ತಿಂಗಳ 27 ಅಥವಾ ಫೆಬ್ರವರಿ 1 ರಂದು ಹೊಸಕೋಟೆಯಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸುವುದರ ಮೂಲಕ ಬಿಜೆಪಿಗೆ ವಿಧ್ಯುಕ್ತವಾಗಿ ಸೇರಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಜೆಡಿಎಸ್ ಪಾಳೆಯದ ಒಂದೊಂದೇ ಘಟಾನುಘಟಿಯನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದ್ದು, ಆದಷ್ಟೂ ಒಕ್ಕಲಿಗ ನಾಯಕರಿಗೇ ಬಲೆ ಬೀಸುತ್ತಿರುವ ಬಿಜೆಪಿ, ಜೆಡಿಎಸ್ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳುವ ಮೂಲಕ ಆಯಕಟ್ಟಿನ ಸ್ಥಳಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದೆ. ಇದರ ಇತ್ತೀಚಿನ ಫಲಶೃತಿ ಮಾಜಿ ಸಚಿವ ಬಚ್ಚೇಗೌಡ.
ಬೆಂಗಳೂರು ಗ್ರಾಮಾಂತರ ಪ್ರದೇಶ ಹಾಗೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುವುದು ಬಿಜೆಪಿಗೆ ಹಿಂದೆಂದಿಗಿಂತ ಈಗ ಅಗತ್ಯವಾಗಿತ್ತು. ಈಗಾಗಲೇ ಜಿ.ಟಿ.ದೇವೇಗೌಡ, ಉತ್ತರಹಳ್ಳಿ ಶ್ರೀನಿವಾಸ್‌ರವರುಗಳು ಬಿಜೆಪಿಗೆ ಸೇರಿದ್ದು, ಎರಡು ದಿನಗಳ ಹಿಂದಷ್ಟೇ ಜೆಡಿಎಸ್ ತೊರೆದಿರುವ ತಿಪ್ಪೇಸ್ವಾಮಿ ಸದ್ಯದಲ್ಲಿಯೇ ಬಿಜೆಪಿಯನ್ನು ಸೇರಲಿದ್ದಾರೆ.
ಅರಮನೆ ಮೈದಾನದಲ್ಲಿ ಇತ್ತೀಚೆಗಷ್ಟೇ ಜೆಡಿಎಸ್ ಪದಾಧಿಕಾರಿಗಳ ಸಭೆ ನಡೆದಾಗ ಬೆಂಗಳೂರು ಗ್ರಾಮಾಂತರ ಪ್ರದೇಶದವರಾದ ಎಂ.ನಾರಾಯಣ ಸ್ವಾಮಿಯವರನ್ನು ಜೆಡಿಎಸ್ ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ದೇವೇಗೌಡರು ತಂತ್ರ ಹೆಣೆದಿದ್ದರು. ಆದರೆ ಅದೇ ಒಕ್ಕಲಿಗ ಸಮುದಾಯಕ್ಕೆ ಸೇರಿದ, ಅದೂ ಬೆಂಗಳೂರು ಗ್ರಾಮಾಂತರ ಪ್ರದೇಶದವರಾದ ಬಚ್ಚೇಗೌಡರನ್ನೇ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಬಿಜೆಪಿ ಜಾಣತನ ಮೆರೆದಿದೆ.
ಆದರೆ, ಪಕ್ಷಕ್ಕೆ ಸೇರಿದ ನಂತರ ಬಚ್ಚೇಗೌಡರಿಗೆ ಹಾಗೂ ಅವರ ಬೆಂಬಲಿಗರಿಗೆ ನೀಡಲಾಗುವ ಸ್ಥಾನಮಾನಗಳೇನು ಎಂಬುದರ ಕುರಿತು ನಿರ್ದಿಷ್ಟ ಮಾಹಿತಿಯನ್ನು ಪಕ್ಷ ಹೊರಗೆಡಹಿಲ್ಲವಾದರೂ, ಮುಂಬರುವ ಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಲು ಬಚ್ಚೇಗೌಡರಿಗೆ ಪಕ್ಷದ ಟಿಕೆಟ್ ದೊರೆಯಲಿದೆ ಎಂದು ತಿಳಿದುಬಂದಿದೆ.
|