ಮಂಗಳೂರು ಮತ್ತು ಬೆಂಗಳೂರು ನಡುವಿನ ಶಿರಾಡಿಘಾಟ್ ರಸ್ತೆಯ ಕಳಪೆ ಕಾಮಗಾರಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.ಶಿರಾಡಿಘಾಟ್ ರಸ್ತೆಯ ಕಳೆಪೆ ಕಾಮಗಾರಿ ವಿರುದ್ಧ ಮಂಗಳೂರಿನ ಸದಾಶಿವರಾವ್ ಹಾಗೂ ಬೆಂಗಳೂರಿನ ಬಿ.ಕೃಷ್ಣಭಟ್ ಅವರು ಸಲ್ಲಿಸಿದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.ಅಲ್ಲದೇ ಪ್ರಕರಣದ ತನಿಖೆ ನಡೆಸಿ ಶೀಘ್ರವೇ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದು, ವರದಿಯನ್ನು ಆಧರಿಸಿ ಆರೋಪಿತರ ವಿರುದ್ಧ ಕ್ರಮಕೈಗೊಳ್ಳುವಂತೆ ನ್ಯಾಯಪೀಠ ನಿರ್ದೇಶನ ನೀಡಿದೆ.ಮಂಗಳೂರು-ಬೆಂಗಳೂರು ನಡುವಿನ ಶಿರಾಡಿಘಾಟ್ ರಸ್ತೆಯನ್ನು 34.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ನಡೆದ ಕೆಲವೇ ತಿಂಗಳಿನಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಳಪೆ ಕಾಮಗಾರಿ ವಿರುದ್ಧ ತನಿಖೆ ನಡೆಸಿ, ಭ್ರಷ್ಟರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿದಾರರಿಬ್ಬರು ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದರು.ವಿನ್ಯಾಸವೇ ಸರಿ ಇಲ್ಲ !ಆದರೆ, ಗುತ್ತಿಗೆದಾರರ ಪರ ವಾದಿಸಿದ ವಕೀಲರು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ರೂಪಿಸಿರುವ ರಸ್ತೆ ವಿನ್ಯಾಸದಲ್ಲೇ ದೋಷವಿದೆ. ಇದನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ ರಸ್ತೆ ಕಾಮಗಾರಿಯ ಗುಣಮಟ್ಟದ ಕುರಿತು ಸಿಬಿಐ ತನಿಖೆಗೆ ಹೈಕೋರ್ಟ್ ಅದೇಶಿಸಿರುವುದು ಎಲ್ಲರ ಗಮನ ಸೆಳೆದಿದೆ. |
|