ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ
53ನೇ ರಾಜ್ಯೋತ್ಸವಕ್ಕೆ ಬಂಪರ್ ಕೊಡುಗೆ ಎಂಬಂತೆ ಕೇಂದ್ರ ಸರ್ಕಾರ ಶುಕ್ರವಾರ ಸಂಜೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕುರಿತು ಘೋಷಣೆ ಹೊರಡಿಸಿದೆ.

ಕೇಂದ್ರ ಸಚಿವೆ ಅಂಬಿಕಾ ಸೋನಿಯವರು ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದಾಗಿ ತಿಳಿಸಿದ್ದಾರೆ.

ಕಳೆದ ಕೆಲವು ದಶಕಗಳಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ಕೂಗಿಗೆ ಕೊನೆಗೂ ಜಯ ದೊರೆತಂತಾಗಿದೆ. ಆ ನಿಟ್ಟಿನಲ್ಲಿ 53ನೇ ರಾಜ್ಯೋತ್ಸವ ಕರ್ನಾಟಕದ ಪಾಲಿಗೆ ಮರೆಯದ ದಿನವಾಗಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಕೇಂದ್ರವನ್ನು ಆಗ್ರಹಿಸಲು ಆಡಳಿತರೂಢ ಬಿಜೆಪಿ ನ.5ರಂದು ದೆಹಲಿಯ ರಾಜ್‌ಘಾಟ್‌ನಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಧರಣಿ ನಡೆಸಲು ನಿರ್ಧರಿಸಿತ್ತು.

ಆದರೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ವಪಕ್ಷ ನಿಯೋಗದ ಜತೆ ತೆರಳುವುದಿಲ್ಲ ಎಂಬುದಾಗಿ ಅಪಸ್ವರ ಎತ್ತಿದ್ದವು. ಶಾಸ್ತ್ರೀಯ ಸ್ಥಾನಮಾನ ನೀಡಿಕೆ ವಿಚಾರದಲ್ಲಿ ರಾಜಕೀಯ ತಿಕ್ಕಾಟ ನಡೆಯುತ್ತಿರುವ ಮಧ್ಯೆಯೂ ಕೇಂದ್ರ ಸರ್ಕಾರ ದಿಢೀರನೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದೆ.

ಕರ್ನಾಟಕಕ್ಕೆ ಸಂದ ಜಯ: ಮಲ್ಲಿಕಾರ್ಜುನ ಖರ್ಗೆ:

ಶಾಸ್ತ್ರೀಯ ಸ್ಥಾನಮಾನ ದೊರೆತ ಬಗ್ಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಜನತೆಯ ಗೆಲುವು ಇದಾಗಿದ್ದು, ಕೇಂದ್ರ ನಿರ್ಧಾರವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಈ ಮೊದಲೇ ಕಾಂಗ್ರೆಸ್ ನಿಯೋಗ ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕರಿಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಒತ್ತಾಯಿಸಲಾಗಿತ್ತು. ಈ ಕುರಿತು ಕೇಂದ್ರ ಸಚಿವರಾದ ಅಂಬಿಕಾ ಸೋನಿಯವರು ನಿಯೋಗಕ್ಕೆ ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಆದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಬಗ್ಗೆ ರಾಜ್ಯ ಸರ್ಕಾರ ರಾಜಕೀಯ ಉದ್ದೇಶದಿಂದ ದೆಹಲಿಗೆ ತೆರಳಿತ್ತು. ವಿನಃ ರಾಜ್ಯದ ಅಭಿವೃದ್ಧಿಯಿಂದಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.

ಮುಖ್ಯಮಂತ್ರಿ ಚಂದ್ರು:

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಇದು ಎಲ್ಲಾ ಕನ್ನಡಿಗರಿಗೆ ದಕ್ಕಿದ ಗೌರವವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಶಾಸ್ತ್ರೀಯ ಸ್ಥಾನಮಾನ ನೀಡುವ ಕುರಿತು ರಾಜ್ಯದಲ್ಲಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಒತ್ತಾಯ ಹಾಗೂ ಹೋರಾಟದ ಮುನ್ಸೂಚನೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಲ್ಲಿ ಸಹಾಯಕವಾಯಿತು ಎಂದರು.

ಕನ್ನಡದ ನೆಲ, ಜಲ ಸಂರಕ್ಷಣೆ ಕುರಿತು ಎಲ್ಲಾ ಜನಪ್ರತಿನಿಧಿಗಳು ಭೇದ ಭಾವ ಮರೆತು ಒಗ್ಗೂಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸ್ತ್ರೀಯ ಸ್ಥಾನ-ರಾಜಕೀಯ ಬೇಡ: ಸದಾನಂದ ಗೌಡ
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ
ವಿಧಾನಪರಿಷತ್ ಚುನಾವಣೆ: ನೀರಸ ಮತದಾನ
ಗಡಿವಿವಾದ: ಜಂಟಿ ಸಮೀಕ್ಷೆಗೆ ಖರ್ಗೆ ಆಗ್ರಹ
ಬೆಂಗಳೂರು: ಐಟಿ ಮೇಳಕ್ಕೆ ಮೋದಿ
ಪಾಟೀಲ್ ಪುಟ್ಟಪ್ಪಗೆ ನೃಪತುಂಗ ಪ್ರಶಸ್ತಿ