ಇಂಗ್ಲೆಂಡ್ನಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿಗೆ ಕೋವಿಡ್ ಸೋಂಕು?

ಲಂಡನ್| Ramya kosira| Last Modified ಗುರುವಾರ, 15 ಜುಲೈ 2021 (15:14 IST)
ಲಂಡನ್: ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರನೊಬ್ಬನಿಗೆ ಕೋವಿಡ್ ಸೋಂಕು ತಗುಲಿದ್ದು, ಅವರನ್ನ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂಬ ಸುದ್ದಿ ಬೆಳಗ್ಗೆಯಿಂದ ಕೇಳಿಬರುತ್ತಿದೆ. ಪಿಟಿಐ ವರದಿ ಪ್ರಕಾರ, ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರಿಗೆ ಡೆಲ್ಟಾ ರೂಪಾಂತರಿ ಕೊರೋನಾ ವೈರಸ್ ಸೋಂಕು ತಗುಲಿದೆ. ಒಂದು ವಾರದ ಹಿಂದೆಯೇ ಅವರಿಗೆ ಸೋಂಕು ತಗುಲಿದ್ದು ಅವರಿಗೆ ಯಾವುದೇ ರೋಗಲಕ್ಷಣ ಇಲ್ಲ ಎಂದು ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಎಎನ್ಐ ಸುದ್ದಿ ಸಂಸ್ಥೆ ವರದಿ ಪ್ರಕಾರ ಇಬ್ಬರು ಭಾರತೀಯ ಕ್ರಿಕೆಟಿಗರಿಗೆ ಕೋವಿಡ್ ಸೋಂಕು ತಗುಲಿದೆ. ಅವರ ಪೈಕಿ ಒಬ್ಬರು ಚೇತರಿಸಿಕೊಂಡಿದ್ದು, ಸದ್ಯ ಕೋವಿಡ್ ನೆಗಟಿವ್ ರಿಪೋರ್ಟ್ ಇದೆ. ಮತ್ತೊಬ್ಬ ಆಟಗಾರ ಕ್ವಾರಂಟೈನ್ನಲ್ಲಿದ್ದು, ಭಾನುವಾರಕ್ಕೆ ಅವರ 10 ದಿನದ ಐಸೋಲೇಶನ್ ಅವಧಿ ಮುಗಿಯುತ್ತದೆ ಎನ್ನಲಾಗಿದೆ. ಎಎನ್ಐ ವರದಿಯಲ್ಲಿ ಪ್ರಸ್ತಾಪವಾಗಿರುವ ಇಬ್ಬರು ಆಟಗಾರರ ಹೆಸರನ್ನ ತಿಳಿಸಿಲ್ಲ. ಅವರಲ್ಲಿ ಒಬ್ಬರು ರಿಷಭ್ ಪಂತ್ ಇರಬಹುದು. ಮತ್ತೊಬ್ಬ ಸೋಂಕಿತ ಕ್ರಿಕೆಟಿಗ ಯಾರು ಎಂಬುದು ತಿಳಿಯಬೇಕಿದೆ. ಪಿಟಿಐ ವರದಿ ಪ್ರಕಾರ, ರಿಷಭ್ ಪಂತ್ ಅವರೊಬ್ಬರಿಗೆ ಮಾತ್ರವೇ ಸೋಂಕು ತಗುಲಿರುವುದ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆನ್ನಲಾಗಿದೆ. ರಿಷಭ್ ಪಂತ್ ಅವರು ಇಂಗ್ಲೆಂಡ್ ಮತ್ತು ಇಟಲಿ ನಡುವಿನ ಯೂರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಲು ವೆಂಬ್ಲೆ ಸ್ಟೇಡಿಯಂಗೆ ಹೋಗಿದ್ದರು. ಅಲ್ಲಿಯೇ ಅವರಿಗೆ ಡೆಲ್ಟಾ ರೂಪಾಂತರಿ ವೈರಸ್ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟಕ್ಕೆ, ಪಂತ್ ಅವರು ಆಟಗಾರರಿಗೆ ವ್ಯವಸ್ಥೆ ಮಾಡಿರುವ ಹೋಟೆಲ್ ಬದಲು ಲಂಡನ್ನಲ್ಲಿರುವ ತಮ್ಮ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಬೇರೆ ಆಟಗಾರರಿಗೆ ಸೋಂಕು ಹರಡಿರುವ ಸಾಧ್ಯತೆ ಕಡಿಮೆ ಎಂದು ನಂಬಲಾಗಿದೆ.> ಇಂಗ್ಲೆಂಡ್ನಲ್ಲಿ ಅಪಾಯಕಾರಿ ಡೆಲ್ಟಾ ರೂಪಾಂತರಿ ವೈರಸ್ ಸೋಂಕು ಬಹಳ ವ್ಯಾಪಕವಾಗಿ ಹರಡುತ್ತಿದೆ. ಆಟಗಾರರಿಗೆ ಲಸಿಕೆ ಹಾಕಿದರೂ ಅವರಿಗೆ ಸೋಂಕಿನಿಂದ ಯಾವುದೇ ರಕ್ಷಣೆ ಇರುವುದಿಲ್ಲ. ಹೀಗಾಗಿ, ಜನಸಂದಣಿಯ ಪ್ರದೇಶಗಳಿಗೆ ಹೋಗುವುದನ್ನು ಆದಷ್ಟೂ ತಪ್ಪಿಸಬೇಕು. ಯೂರೋ ಚಾಂಪಿಯನ್ ಶಿಪ್ ಮತ್ತು ವಿಂಬಲ್ಡನ್ ಟೆನಿಸ್ ಟೂರ್ನಿಯ ಪಂದ್ಯಗಳು ನಡೆಯುವ ಸ್ಥಳಕ್ಕೆ ಆಟಗಾರರು ಹೋಗಬಾರದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಹಿಂದೆಯೇ ಪತ್ರದ ಮೂಲಕ ಸೂಚನೆ ನೀಡಿದ್ದರಂತೆ.> ಇಂಗ್ಲೆಂಡ್ನಲ್ಲಿ ಟೆಸ್ಟ್ ಪ್ರವಾಸದಲ್ಲಿರುವ ಭಾರತ ತಂಡ ಆಗಸ್ಟ್ 4ರಿಂದ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನ ಆಡಲಿದೆ. ಅದಕ್ಕೆ ಮುನ್ನ ಜುಲೈ 20ರಂದು ಡುರ್ಹಾಮ್ನಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ. ಇಂದು ಗುರುವಾರ ಟೀಮ್ ಇಂಡಿಯಾ ಡುರಾಮ್ ನಗರಕ್ಕೆ ತೆರಳಲಿದೆ. ಸದ್ಯ ರಿಷಭ್ ಪಂತ್ ಅವರು ಇಂದು ಅಲ್ಲಿಗೆ ಹೋಗುತ್ತಿಲ್ಲ. ಅಭ್ಯಾಸ ಪಂದ್ಯದಲ್ಲೂ ಅವರು ಆಡುವುದು ಅನುಮಾನ ಎನ್ನಲಾಗುತ್ತಿದೆ  ಇದರಲ್ಲಿ ಇನ್ನಷ್ಟು ಓದಿ :