ಕೊರೋನಾದಿಂದ ಸೆಲೆಬ್ರಿಟಿಗಳಿಗೆ ಮೈ ಕರಗಿಸುವ ಚಿಂತೆ!

ಬೆಂಗಳೂರು| Krishnaveni K| Last Modified ಗುರುವಾರ, 26 ಮಾರ್ಚ್ 2020 (09:18 IST)
ಬೆಂಗಳೂರು: ಸದಾ ಫಿಟ್ನೆಸ್ ಕಾಯ್ದುಕೊಳ್ಳಲು ಜಿಮ್ ಗೆ ಸುತ್ತಾಡುತ್ತಿದ್ದ ಸೆಲೆಬ್ರಿಟಿಗಳಿಗೆ ಈಗ ಹೊಸ ತಲೆಬಿಸಿ ಶುರುವಾಗಿದೆ. ಒಂದು ವಾರ ಕಾಲ ಮನೆಯಲ್ಲೇ ಕೂತು ಆರಾಮವಾಗಿ ತಿಂದುಂಡುಕೊಂಡಿದ್ದ ಸೆಲೆಬ್ರಿಟಿಗಳಿಗೆ ಈಗ ಇದನ್ನು ಕರಗಿಸುವ ಪರಿ ಹೇಗೆ ಎಂಬ ಚಿಂತೆ ಶುರುವಾಗಿದೆ.

 
ಕೊರೋನಾ ಕಾಟದಿಂದ ಜಿಮ್ ಗಳು ತೆರೆಯುತ್ತಿಲ್ಲ. ಮನೆಯಲ್ಲಿ ಅಮ್ಮ ಮಾಡಿಕೊಡುವ ತಿಂಡಿ ಗಡದ್ ತಿಂದುಕೊಂಡು ಮೈ ಬೆಳೆಸಿಕೊಂಡರೆ ಮುಂದೆ ಭವಿಷ್ಯದ ಗತಿ ಏನು? ಅದನ್ನು ಕರಗಿಸುವ ಚಿಂತೆ ಕಾಡುವುದು ಸಹಜ. ಅವರ ವೃತ್ತಿಯೇ ಇದಲ್ಲವೇ?
 
ಹೀಗಾಗಿ ಕೆಲವು ಸೆಲೆಬ್ರಿಟಿಗಳು ಈಗ ಮನೆಯಲ್ಲೇ ಕೂತು ಫಿಟ್ನೆಸ್ ಕಾಯ್ದುಕೊಳ್ಳುವ ತಂತ್ರಗಳ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಕ್ರಿಕೆಟಿಗರಾದ ಶಿಖರ್ ಧವನ್, ಮಯಾಂಕ್ ಅಗರ್ವಾಲ್ ಮನೆಯಲ್ಲೇ ವ್ಯಾಯಾಮ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
 
ಇದೀಗ ಸ್ಯಾಂಡಲ್ ವುಡ್ ತಾರೆಯರೂ ಇದನ್ನೇ ಮಾಡುತ್ತಿದ್ದಾರೆ. ನಟ ಜೆಕೆ ಮುಂತಾದವರು ಮನೆಯಲ್ಲೇ ದೈಹಿಕ ಕಸರತ್ತು ನಡೆಸುತ್ತಿರುವ ವಿಡಿಯೋ ಪ್ರಕಟಿಸಿ ಸುರಕ್ಷಿತವಾಗಿರಲು ಕರೆ ನೀಡಿದ್ದಾರೆ. ಅಲ್ಲದೆ, ಮೂರು ಹೊತ್ತು ಹಿತಮಿತವಾದ ಆಹಾರ ಬಳಸಿ ಫಿಟ್ನೆಸ್ ಕಾಯ್ದುಕೊಳ್ಳಿ ಎಂದು ಕರೆ ನೀಡಿದ್ದಾರೆ. ಭಾರತೀಯ ಫುಟ್ ಬಾಲ್ ತಾರೆ ಸುನಿಲ್ ಛೆಟ್ರಿ ಈ ರೀತಿ ಮನೆಯಲ್ಲೇ ಹೊಟ್ಟೆ ಬಿರಿದು ತಿಂದು ವ್ಯಾಯಾಮ ಮಾಡದೇ ಇದ್ದ ದಿನ ಇದಕ್ಕಿಂತ ಮೊದಲು ಇರಲೇ ಇಲ್ಲ ಎಂದಿದ್ದಾರೆ. ಎಲ್ಲರಿಗೂ ಒಂದು ಚಿಂತೆಯಾದರೆ ಸೆಲೆಬ್ರಿಟಿಗಳಿಗೆ ಮತ್ತೊಂದು ಚಿಂತೆ.
ಇದರಲ್ಲಿ ಇನ್ನಷ್ಟು ಓದಿ :