ಲಕ್ಷಾಂತರ ರೂ‌.ವಂಚನೆ ಎಸಗಿರುವ ಆರೋಪಿ ಯುವರಾಜ್ ಸ್ವಾಮಿ ವಂಚನೆ

bangalore| geetha| Last Modified ಬುಧವಾರ, 17 ನವೆಂಬರ್ 2021 (21:50 IST)ಬೆಂಗಳೂರು: ಲಕ್ಷಾಂತರ ರೂ‌.ವಂಚನೆ ಎಸಗಿರುವ ಆರೋಪಿ ಯುವರಾಜ್ ಸ್ವಾಮಿ ವಂಚನೆ ಪ್ರಕರಣ ಚುರುಕುಗೊಂಡಿದೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಆರೋಪಿಗೆ ಲಂಚ ನೀಡಿದ್ದ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಪ್ರತ್ಯೇಕ ಮೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಆರ್. ಐಯ್ಯರ್ ಎಂಬುವರು ದೂರು ನೀಡಿದ ಮೇರೆಗೆ ಕೆ.ಪಿ.ಸುಧೀಂದ್ರ ರೆಡ್ಡಿ, ಜಿ ನರಸಿಂಹಯ್ಯ ಹಾಗೂ ಗೋವಿಂದಯ್ಯ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಕಾಯ್ದೆಯಡಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಣ್ಯವ್ಯಕ್ತಿಗಳು, ಸರ್ಕಾರದ ಉನ್ನತ ನಾಯಕರು ಪರಿಚಯವಿದೆ ಎಂದು ಬಿಂಬಿಸಿಕೊಂಡಿದ್ದ ಯುವರಾಜ್ ಸ್ವಾಮಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ. ಈ ಸಂಬಂಧ ಈತನ ವಿರುದ್ಧ ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಹೈಗ್ರೌಂಡ್ಸ್, ಕೆಂಗೇರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಸಿಸಿಬಿ ಪೊಲೀಸರು ಆರೋಪಿ ಯುವರಾಜ್‌ನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.‌ ಸದ್ಯ ಯುವರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಸಜೆ ಅನುಭವಿಸುತ್ತಿದ್ದಾನೆ.
2018ರ ಮುನ್ನ ಲಂಚ ಸ್ವೀಕರಿಸುವುದು ಅಪರಾಧವಾಗಿತ್ತು. ಅದಾದ ಬಳಿಕ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದು ಲಂಚ ಕೊಡುವವರು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಂತೆ ಯುವರಾಜ್ ವಂಚನೆ ಪ್ರಕರಣದಲ್ಲಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಲಂಚ ನೀಡಿದ್ದ ಮೂವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ ಎಸಿಬಿ ಅಧಿಕಾರಿಗಳು‌ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ದಾಖಲಾದ‌ ಮೂವರು ವಿರುದ್ಧ ಲಂಚ ನೀಡಿರುವುದು ಸ್ಪಷ್ಟವಾದ ಹಿನ್ನೆಲೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆದರ್ಶ ಆರ್. ಐಯ್ಯರ್ ನೀಡಿದ‌ ದೂರಿನ‌ ಮೇರೆಗೆ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ‌.


ಇದರಲ್ಲಿ ಇನ್ನಷ್ಟು ಓದಿ :