ತವರಿಗೆ ಹೋಗುತ್ತೇನೆಂದ ಪತ್ನಿ ಮೂಗು ಕತ್ತರಿಸಿದ ಪತಿ

ರಾಜಸ್ಥಾನ| Ramya kosira| Last Modified ಶುಕ್ರವಾರ, 10 ಸೆಪ್ಟಂಬರ್ 2021 (10:44 IST)
ಕೌಟುಂಬಿಕ ದೌರ್ಜನ್ಯದ ಮತ್ತೊಂದು ನಿದರ್ಶನದಲ್ಲಿ, ರಾಜಸ್ಥಾನದ ಜೋಧಪುರ ವ್ಯಕ್ತಿಯೊಬ್ಬ ತವರಿಗೆ ಹೋಗುವೆನೆಂದ ತನ್ನ ಮಡದಿಯ ಮೂಗು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ.
ಇದೀಗ ಸಂತ್ರಸ್ತೆಯ ಸಹೋದರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಇಲ್ಲಿನ ಜ಼ಾನ್ವರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಲುನಾವಾಸ್ ಎಂಬ ಗ್ರಾಮದಲ್ಲಿ ಘಟನೆ ಜರುಗಿದ್ದು, ತನ್ನ ತವರು ಮನೆಗೆ ಹೋಗಬೇಕೆಂದು ಮಡದಿ ಪದೇ ಪದೇ ಕೇಳಿದ್ದಕ್ಕೆ ಸಿಟ್ಟುಗೊಂಡು ಆಕೆಯ ಮೂಗನ್ನು ಕತ್ತರಿಸಿದ್ದಾನೆ. ಭೂಮರಾಮ್ ಹೆಸರಿನ ಆಪಾದಿತ ತನ್ನ ಮಡದಿ ಪೂನಮ್ ದೇವಿ (25) ಮೇಲೆ ಈ ರೀತಿ ಕ್ರೌರ್ಯವೆಸಗಿದ್ದಾನೆ.> "ಬುಧವಾರ ಬೆಳಿಗ್ಗೆ ದಂಪತಿಗಳ ನಡುವೆ ವಾಗ್ವಾದ ನಡೆದಿದೆ. ತನ್ನ ತವರು ಮನೆಗೆ ಹೋಗಬೇಕೆಂದು ಪೂನಂ ಹಠ ಹಿಡಿದಿದ್ದಳು. ಕೆಲ ದಿನಗಳ ಬಳಿಕ ಅಲ್ಲಿಗೆ ಹೋಗೋಣ, ಜೊತೆಗೆ ನಾನೂ ಬರುತ್ತೇನೆ ಎಂದು ಆಕೆಯ ಪತಿ ಹೇಳಿದ್ದ. ನೋಡನೋಡುತ್ತಲೇ ಜಗಳ ಕೈಮೀರಿ ಹೋಗಿದ್ದು ಭೂಮರಾಮ್ ತನ್ನ ಪತ್ನಿ ಪೂನಂ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೂಗು ಕೊಯ್ದಿದ್ದಾನೆ" ಎಂದು ಠಾಣೆಯ ಸಿಬ್ಬಂದಿ ತಿಳಿಸಿದ್ದಾರೆ.> ಸಂತ್ರಸ್ತೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಅಕ್ಕಪಕ್ಕದ ಮನೆಯವರು ಆಕೆಯ ಸಹೋದರನಿಗೆ ಘಟನೆಯನ್ನು ವಿವರಿಸಿದ್ದಾರೆ. ಪ್ರಥಮ ಚಿಕಿತ್ಸೆ ಕೊಟ್ಟ ಬಳಿಕ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪೂನಂ ಸಹೋದರನ ದೂರು ಆಧರಿಸಿ, ಭೂಮ ರಾಮ್ ವಿರುದ್ಧ ಐಪಿಸಿಯಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಅನ್ವಯಿಸುವ ಕಾನೂನಿನ ಅಡಿ ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ ಭೂಮ ರಾಮ್ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. "ಭೂಮ ಈ ಹಿಂದೆ ಸಹ ನನ್ನ ಸಹೋದರಿ ಮೇಲೆ ಬಹಳಷ್ಟು ಬಾರಿ ಕ್ಷುಲ್ಲಕ ಕಾರಣಗಳಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆಗಳನ್ನು ನಡೆಸಿದ್ದಾನೆ" ಎಂದು ಸಂತ್ರಸ್ತೆಯ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :