ಸುಪ್ರೀಂ ಕೋರ್ಟ್ ತರಾಟೆಯ ನಂತರ ಮರಣ ಪ್ರಮಾಣಪತ್ರಕ್ಕೆ ಮಾರ್ಗಸೂಚಿಗಳನ್ನು ರೂಪಿಸಿದ ಕೇಂದ್ರ

ಹೊಸದಿಲ್ಲಿ| Ramya kosira| Last Modified ಭಾನುವಾರ, 12 ಸೆಪ್ಟಂಬರ್ 2021 (15:15 IST)
ಹೊಸದಿಲ್ಲಿ :  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಜೊತೆಗೆ ಕೋವಿಡ್ -19 ಸಾವುಗಳಿಗೆ ಪ್ರಮಾಣಪತ್ರಗಳನ್ನು ನೀಡಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರಕಾರವು ಶನಿವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೋವಿಡ್ ಸಂಬಂಧಿ ಸಾವುಗಳಿಗೆ 'ಅಧಿಕೃತ ದಾಖಲೆ' ನೀಡುವ ಮಾರ್ಗಸೂಚಿಗಳನ್ನು ಹೊರಡಿಸಿವೆ ಎಂದು ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಕೋವಿಡ್ ಮರಣ ಪ್ರಮಾಣಪತ್ರಗಳನ್ನು ನೀಡುವ ಮಾರ್ಗಸೂಚಿಗಳನ್ನು ನೀಡುವುದರಲ್ಲಿ ವಿಳಂಬವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಮಾರು 10 ದಿನಗಳ ನಂತರ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲಾಗಿದೆ.
"ನೀವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಹೊತ್ತಿಗೆ ಕೊರೋನದ ಮೂರನೇ ಅಲೆವೂ ಮುಗಿಯುತ್ತದೆ" ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ತರಾಟೆಗೆ ತೆಗೆದುಕೊಂಡಿತ್ತು.
ಐಸಿಎಂಆರ್ ಅಧ್ಯಯನವನ್ನು ಉಲ್ಲೇಖಿಸಿದ ಮಾರ್ಗಸೂಚಿಗಳಲ್ಲಿ ರೋಗಿಗಳು ಸೋಂಕಿಗೆ ಒಳಗಾದ 25 ದಿನಗಳಲ್ಲಿ 95 ಶೇ. ಕೊರೋನವೈರಸ್ ಸಾವುಗಳು ಸಂಭವಿಸುತ್ತವೆ ಎಂದು ಹೇಳಿದೆ.
"ವ್ಯಾಪ್ತಿಯನ್ನು ವಿಶಾಲವಾಗಿ ಹಾಗೂ ಹೆಚ್ಚು ಒಳಗೊಳ್ಳುವಂತೆ ಮಾಡಲು, ಪರೀಕ್ಷೆಯ ದಿನಾಂಕದಿಂದ ಅಥವಾ ಕೋವಿಡ್ -19 ಪ್ರಕರಣವೆಂದು ವೈದ್ಯಕೀಯವಾಗಿ ನಿರ್ಧರಿಸಿದ ದಿನಾಂಕದಿಂದ 30 ದಿನಗಳಲ್ಲಿ ಸಂಭವಿಸುವ ಸಾವುಗಳನ್ನು 'ಕೋವಿಡ್ -19 ನಿಂದ ಸಾವುಗಳು' ಎಂದು ಪರಿಗಣಿಸಲಾಗುತ್ತದೆ' ಎಂದು ಮಾರ್ಗಸೂಚಿಗಳು ಹೇಳಿವೆ.
30 ದಿನಗಳಿಗಿಂತ ಹೆಚ್ಚು ಕಾಲ ವೈದ್ಯಕೀಯ ಸೌಲಭ್ಯಕ್ಕೆ ದಾಖಲಾದ ರೋಗಿಯು ಅಲ್ಲಿ ಮೃತಪಟ್ಟರೆ ಅದನ್ನು ಕೋವಿಡ್ -19 ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಡಾಕ್ಯುಮೆಂಟ್ ಸೇರಿಸಲಾಗಿದೆ.
 
ಇದರಲ್ಲಿ ಇನ್ನಷ್ಟು ಓದಿ :