ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆ!

ಅಹಮದಾಬಾದ್| Ramya kosira| Last Modified ಸೋಮವಾರ, 13 ಸೆಪ್ಟಂಬರ್ 2021 (11:38 IST)
ಅಹಮದಾಬಾದ್ (ಸೆ 13) : ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಯ ಶಾಸಕ ಭೂಪೇಂದ್ರ ಪಟೇಲ್ ಅವರನ್ನು ನೂತನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆ.

ಈ ಬೆಳವಣಿಗೆ ರಾಷ್ಟ್ರೀಯ ಮಟ್ಟದಲ್ಲೂ ಸಂಚಲನ ಮೂಡಿಸಿದೆ. ಇದ್ದಕ್ಕಿದ್ದಂತೆ ವಿಜಯ್ ರೂಪಾಣಿ ರಾಜೀನಾಮೆ ನೀಡಿದ್ದೇಕೆ? ಇದರ ಹಿಂದಿನ ಲೆಕ್ಕಾಚಾರ ಏನು ಎಂಬಿತ್ಯಾದಿ ಕುತೂಹಲ ಮೂಡಿದ್ದವು. ಗುಜರಾತ್ ವಿಧಾನಸಭಾ ಚುನಾವಣೆಗೆ ಬರೊಬ್ಬರಿ ಇನ್ನು 14 ತಿಂಗಳು ಕಾಲಾವಕಾಶ ಇದೆ. ಈ ಹಂತದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಗುಜರಾತಿನಲ್ಲಿ ಮುಖ್ಯಮಂತ್ರಿ ಬದಲಿಸಿ ಅಚ್ಚರಿ ಮೂಡಿಸಿದ್ದರು.
ಇತ್ತೀಚೆಗೆ ಉತ್ತರಖಂಡ, ಕರ್ನಾಟಕದಲ್ಲೂ ಮುಖ್ಯಮಂತ್ರಿ ಬದಲಾವಣೆ ಮಾಡಿ ಮುಂದಿನ ಚುನಾವಣೆಗಳಿಗೆ ಅಣಿಯಾಗುತ್ತಿರುವ ಬಿಜೆಪಿ ಹೈಕಮಾಂಡ್ ಗುಜರಾತಿನಲ್ಲೂ ಮುಖ್ಯಮಂತ್ರಿ ಬದಲಾವಣೆಯ ಅಸ್ತ್ರವನ್ನೇ ಬಳಸಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ನಾಯಕನಿಗೆ ಮುಖ್ಯಮಂತ್ರಿ ಕಟ್ಟಬೇಕು ಎಂದು ನಿಶ್ಚಯಿಸಿದಂತೆ ಗುಜರಾತಿನಲ್ಲಿ ಪಟೇಲ್ ಸಮುದಾಯಕ್ಕೆ ಮಣೆ ಹಾಕಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಗುಜರಾತ್ ಅವರದೇ ರಾಜ್ಯ ಎನ್ನುವ ಕಾರಣಕ್ಕೆ ಇದು ಮಹತ್ವದ ಚುನಾವಣೆ. ಎಲ್ಲೆಡೆ ಸೋತರೂ ಪರವಾಗಿಲ್ಲ. ತವರು ರಾಜ್ಯದಲ್ಲಿ ಮಾತ್ರ ಮುಖಭಂಗ ಅನುಭವಿಸಬಾರದು ಅಂತಾ ಮೋದಿ ಮತ್ತು ಅಮಿತ್ ಶಾ ಗುಜರಾತ್ ಚುನಾವಣೆ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ.
ಗುಜರಾತಿನಲ್ಲಿ ಗೆಲ್ಲಲೇಬೇಕು ಎಂಬುದು ಅವರ ದೃಢ ಸಂಕಲ್ಪ. ಆದರೆ ವಿಜಯ್ ರೂಪಾಣಿ ನಿರೀಕ್ಷಿತ ಮಟ್ಟದಲ್ಲಿ ಜನಪ್ರಿಯರಾಗಿಲ್ಲ. ಇವರದೇ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಯಡವಟ್ಟಾಗಿ ಬಿಡಬಹುದು ಎಂದು ರೂಪಾಣಿ ರಾಜೀನಾಮೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿತ್ತು. ಈಗ ಭೂಪೇಂದ್ರ ಪಟೇಲ್ ಅವರಿಗೆ ಅವಕಾಶ ನೀಡಲಾಗಿದೆ.
ಹಾಗೆ ನೋಡಿದರೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಬಗ್ಗೆ ಅಲ್ಲಿ ಅಸಮಾಧಾನ, ಆಕ್ರೋಶ, ಬಂಡಾಯಗಳೇನೂ ಇರಲಿಲ್ಲ. ಒಳ್ಳೆಯವರು ಎಂದೇ ಹೆಸರು ಮಾಡಿದ್ದರು. ಆದರೆ ಅವರ ಆಡಳಿತದಲ್ಲಿ ಚುರುಕಿರಲಿಲ್ಲ. ಕೊರೋನಾ ಕಾಲದಲ್ಲಿ ಜನರಿಗೆ ಸರಿಯಾಗಿ ಸ್ಪಂದಿಸಲಿಲ್ಲ. 'ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ' ಇವರಿಂದ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಸ್ವತಃ ತಮ್ಮದೇ ಅಭ್ಯರ್ಥಿಯಾದರೂ ವಿಜಯ್ ರೂಪಾಣಿಗೆ ರಾಜೀನಾಮೆ ನೀಡುವಂತೆ ಅಮಿತ್ ಶಾ ಶಾಕಿಂಗ್ ಸೂಚನೆ ನೀಡಿದ್ದಾರೆ. ಅವರ ಜಾಗಕ್ಕೆ ಪಟೇಲ್ ಸಮುದಾಯದ ನಾಯಕ ಭೂಪೇಂದ್ರ ಪಟೇಲ್ ಅವರನ್ನು ಕೂರಿಸಲಾಗಿದೆ.
 
ಇದರಲ್ಲಿ ಇನ್ನಷ್ಟು ಓದಿ :