ನಮ್ಮನೆ ಹುಡುಗಿ ರಾಧಿಕಾ ಪಂಡಿತ್... ಸಭ್ಯ, ಸೌಮ್ಯ ಹುಡುಗಿ ರಾಧಿಕಾ ಪಂಡಿತ್. ನಟನೆಯಲ್ಲಂತೂ ಎಂತವರನ್ನೂ ಮಂತ್ರಮುಗ್ಧರಾಗಿಸುವ 'ಮೊಗ್ಗಿನ ಮನಸು'. ನಟಿಸಿರುವ ಒಟ್ಟು ಚಿತ್ರಗಳು ಕೇವಲ ಆರು. ಅದರಲ್ಲಿ ಐದು ಚಿತ್ರಗಳು ಒಳ್ಳೆಯ ಹೆಸರು ಪಡೆದುಕೊಂಡಿದ್ದವು. ಎರಡಂತೂ ಸೂಪರ್ ಹಿಟ್ ಆಗಿವೆ.
ಒಂದೆರಡು ಚಿತ್ರಗಳು ಕೈಯಲ್ಲಿವೆ. ಅವರ ವಿಶೇಷತೆಯೆಂದರೆ ಕನ್ನಡ ಚಿತ್ರರಂಗ ಬಿಟ್ಟು ಪರಭಾಷೆಯತ್ತ ಕಣ್ಣು ಹಾಕದೇ ಇರುವುದು. 'ನನಗೆ ಇಲ್ಲೇ ಬೇಕಾದಷ್ಟಿದೆ, ಬೇರೆ ಚಿತ್ರರಂಗ ಬೇಕಾಗಿಲ್ಲ. ಇಲ್ಲಿ ಅವಕಾಶಗಳಿರುವಾಗ ಅನ್ಯರ ಉಸಾಬರಿ ಯಾಕೆ?' ಎಂದು ಪ್ರಶ್ನಿಸುವ ಹುಡುಗಿ ಸಂಭಾವನೆ ವಿಚಾರದಲ್ಲೂ ತಗಾದೆ ಮಾಡುತ್ತಿಲ್ಲ. ಹಾಗಾಗಿಯೇ ಅವರಿಗೆ ಸಿಗುತ್ತಿರುವುದು ಕೇವಲ 12 ಲಕ್ಷ ರೂಪಾಯಿ.