ಪಾಕಿಸ್ತಾನದ ರಕ್ತ ಸಿಕ್ತ ಕರಾಳ ಅಧ್ಯಾಯಕ್ಕೆ ಮತ್ತೊಂದು ಸೇರ್ಪಡೆಯಾಗಿ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಕಗ್ಗೊಲೆಯಾಗಿದೆ. ಹುಟ್ಟಿದಾರಭ್ಯ ಅಸ್ಥಿರ ರಾಜಕಾರಣವನ್ನೇ ಕಂಡುಬಂದಿರುವ ಪಾಕಿಸ್ತಾನಿ ಜನತೆಗೆ ಇದು ಮಗದೊಂದು ಕರಾಳ ಕ್ಷಣ. ಅಂತೆಯೇ ಏಷ್ಯಾ ರಾಜಕೀಯ ವಲಯದ ಮೇಲೂ ದೂರಗಾಮಿ ಪರಿಣಾಮ ಬೀರಲಿದೆ ಈ ದುರಂತ. ರಾಜಕೀಯದ ಏಳುಬೀಳುಗಳನ್ನು ಕಂಡ ಪಾಕಿಸ್ತಾನದ ಭುಟ್ಟೋ ಕುಟುಂಬಕ್ಕಿದು ನಾಲ್ಕನೇ ದುರಂತ ಘಟನೆ.
ಮುಸ್ಲಿಂ ರಾಷ್ಟ್ರವೊಂದರ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ಪಾಕಿಸ್ತಾನವನ್ನು 1988ರಿಂದ 1990 ಹಾಗೂ 1993ರಿಂದ 1996ರ ಅವಧಿಯಲ್ಲಿ ಎರಡು ಬಾರಿ ಆಳ್ವಿಕೆ ನಡೆಸಿದ್ದ ಬೇನಜೀರ್ ಹುಟ್ಟಿದ್ದು 1953ರ ಜೂನ್ 21ರಂದು ಕರಾಚಿಯಲ್ಲಿ. ಸುಪ್ರಸಿದ್ಧ ಮತ್ತು ಚಾಣಾಕ್ಷ ರಾಜಕಾರಣಿ ಎಂದು ಪರಿಗಣಿಸಲ್ಪಟ್ಟ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ (1971-77ರವರೆಗೆ ಆಳ್ವಿಕೆ) ಹಾಗೂ ಬೇಗಂ ನುಸ್ರತ್ ಭುಟ್ಟೋ ಪುತ್ರಿಯಾಗಿದ್ದ ಬೇನಜೀರ್, ಅಮೆರಿಕದ ಹಾರ್ವರ್ಡ್ ಕಾಲೇಜಿನಲ್ಲಿ ಮತ್ತು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿವಿಯಲ್ಲಿ ಶಿಕ್ಷಣ ಮುಗಿಸಿ ಪಾಕಿಸ್ತಾನಕ್ಕೆ ಮರಳಿದ್ದರು. ಅವರ ಕುಟುಂಬದಲ್ಲಿ ತಂದೆ ಮತ್ತು ಇಬ್ಬರು ಸಹೋದರರಾದ ಶಹನವಾಜ್ ಹಾಗೂ ಮೀರ್ ಮುರ್ತಜಾ ಅವರ ಸಾವು ಕೂಡ ಅಕಾಲಿಕವಾಗಿತ್ತು ಎಂಬುದು ಇಲ್ಲಿ ಸ್ಮರಣಾರ್ಹ.
1977ರಲ್ಲಿ ಆಕೆ ಪಾಕಿಗೆ ಮರಳಿ ವಿದೇಶಾಂಗ ಸೇವೆಯಲ್ಲಿ ಉದ್ಯೋಗ ಅರಸುತ್ತಿದ್ದ ಸಂದರ್ಭ, ಜನರಲ್ ಮಹಮದ್ ಜಿಯಾ ಉಲ್ ಹಕ್ ನೇತೃತ್ವದಲ್ಲಿ ಸೇನಾ ದಂಗೆ ಎದ್ದು, ರಕ್ತರಹಿತ ಕ್ರಾಂತಿಯಲ್ಲಿ ಜುಲ್ಫಿಕರ್ ಭುಟ್ಟೋ ಅವರ ಪದಚ್ಯುತಿಯಾಯಿತು. ಮುಂದಿನ ಹದಿನೆಂಟು ತಿಂಗಳು ಆಕೆ ಗೃಹಬಂಧನಕ್ಕೆ ಸಿಲುಕುತ್ತಾ ಕಳೆಯಬೇಕಾಯಿತು. ಇದೇ ಸಂದರ್ಭ ತಮ್ಮ ತಂದೆಯ ಮೇಲೆ ಹೊರಿಸಲಾದ ಕೊಲೆ ಆರೋಪಗಳನ್ನು ನಿವಾರಿಸಲು ಸತತ ಶ್ರಮಿಸಿ ಹೋರಾಡಿದರು. ಜುಲ್ಫಿಕರ್‌ಗೆ ಕ್ಷಮಾದಾನ ಮಾಡುವಂತೆ ವಿಶ್ವಾದ್ಯಂತದಿಂದ ಮನವಿಗಳ ಮಹಾಪೂರ ಬಂದರೂ ಕೇಳದ ಸರ್ವಾಧಿಕಾರಿಯಂತೆ ವರ್ತಿಸಿದ ಜಿಯಾ ಉಲ್ ಹಕ್, 1979ರಲ್ಲಿ ಜುಲ್ಫಿಕರ್ ಭುಟ್ಟೋರನ್ನು ಗಲ್ಲಿಗೇರಿಸಿಯೇ ಬಿಟ್ಟ.
ಜಿಯಾನನ್ನು ತೀವ್ರವಾಗಿ ಎದುರುಹಾಕಿಕೊಂಡ ಬೇನಜೀರ್ ಆತನ ವಿರುದ್ಧ ರಾಜಕೀಯ ಆಂದೋಲನವನ್ನೇ ಮಾಡಿದರು. ಆಗಾಗ್ಗೆ ಗೃಹಬಂಧನಕ್ಕೀಡಾದ ಬೇನಜೀರ್‌ರನ್ನು 1981ರ ಬೇಸಿಗೆ ಅವಧಿಯಲ್ಲಿ ಏಕಾಂತ ಕೊಠಡಿಯಲ್ಲಿ ಬಂಧನದಲ್ಲಿರಿಸಲಾಯಿತು. ಗೋಡೆಗಳೇ ಇಲ್ಲದ ಪಂಜರದಂತಿರುವ ಈ ಕೋಣೆಯೊಳಗೆ ಕಳೆದ ನರಕಸದೃಶ ಜೀವನವನ್ನು ಭುಟ್ಟೋ ತಮ್ಮ "ಡಾಟರ್ ಆಫ್ ಡೆಸ್ಟಿನಿ" ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ.
"ಆ ಸುಡುವ ಬೇಸಿಗೆಯು ಏಕಾಂತ ಕೊಠಡಿಯೊಳಗಿನ ನನ್ನ ಜೀವನವನ್ನು ಓವೆನ್‌ನಂತೆ ಮಾಡಿತ್ತು. ನನ್ನ ಚರ್ಮ ಒಡೆದು ಕಿತ್ತು ಬರತೊಡಗಿತು, ಕೈಗಳಿಂದ ಈ ಚರ್ಮವು ಪೊರೆಯಂತೆ ಬೇರ್ಪಡುತ್ತಿತ್ತು. ಮುಖದಲ್ಲಿ ಉಷ್ಣಗುಳ್ಳೆಗಳು ಕಾಣಿಸಲಾರಂಭಿಸಿದವು. ಯಾವತ್ತೂ ದಟ್ಟವಾಗಿದ್ದ ನನ್ನ ಕೂದಲುಗಳು ಕೈಯಲ್ಲಿ ಬರತೊಡಗಿದವು. ಒಳನುಗ್ಗುವ ಸೈನಿಕರಂತೆ ಕ್ರಿಮಿ ಕೀಟಗಳು ಸೆಲ್ ಒಳಗೆ ಬರತೊಡಗಿದವು. ಮಿಡತೆಗಳು, ಸೊಳ್ಳೆ, ಕೀಟಗಳು, ತಿಗಣೆ, ಚೇಳು, ಇರುವೆಗಳೆಲ್ಲವೂ ನೆಲದಲ್ಲಿ ಹರಿದಾಡುತ್ತಾ, ಆಗಾಗ್ಗೆ ದಾಳಿ ಮಾಡುತ್ತಾ ಹೈರಾಣಾಗಿಸಿದ್ದವು. ದೊಡ್ಡ ಕಪ್ಪಿರುವೆಗಳು, ಜಿರಳೆ, ಕೆಂಪಿರುವೆಗಳು, ಜೇಡ... ಇವೆಲ್ಲಾ ಅಲ್ಲಿನ ಜೀವನವನ್ನು ವಸ್ತುಶಃ ನರಕ ಸದೃಶವಾಗಿಸಿದವು. ಇವುಗಳ ಕಡಿತಗಳಿಂದ ತಪ್ಪಿಸಿಕೊಳ್ಳಲು ಮುಸುಕು ಹೊದ್ದು ಮಲಗಲು ಯತ್ನಿಸಿದರೂ, ಸುಡುವ ಬಿಸಿ ವಾತಾವರಣವಂತೂ ಆ ಹೊದಿಕೆಯನ್ನು ಹಿಂತೆಗೆಯುವಂತೆ ಮಾಡುತ್ತಿತ್ತು." ಹೀಗಂತ ಆಕೆ ವಿವರಿಸಿದ್ದಾರೆ.
1984ರಲ್ಲಿ ಬಂಧನದಿಂದ ಬಿಡುಗಡೆಗೊಂಡ ತಕ್ಷಣ ಆಕೆ ದೇಶತ್ಯಜಿಸಿ ಬ್ರಿಟನ್‌ಗೆ ತೆರಳಿದರು. ಪಾಕಿಸ್ತಾನದಲ್ಲಿ ಮಿಲಿಟರಿ ಆಳ್ವಿಕೆ ಕೊನೆಗೊಂಡ ಬಳಿಕ 1986ರಲ್ಲಿ ಮರಳಿ ಪಾಕಿಗೆ ಬಂದಾಗ ಅವರನ್ನು ಸ್ವಾಗತಿಸಲು ಸಾವಿರಾರು ಬೆಂಬಲಿಗರು, ಅಭಿಮಾನಿಗಳು ಬೀದಿ ಬೀದಿಗಳಲ್ಲಿ ತುಂಬಿದ್ದರು. ಅದುವೇ ಜನಸಮೂಹವು ಜಿಯಾ-ವಿರೋಧಿ ಆಂದೋಲನವಾಗಿ ಪರಿವರ್ತನೆಗೊಂಡಿತು. ಅದರ ನೇತೃತ್ವ ವಹಿಸಿದ ಆಕೆ, ಜಿಯಾ ವಿರುದ್ಧ ಬೀದಿಗಿಳಿಯಲು ಹಿಂದೆ ಮುಂದೆ ನೋಡಲಿಲ್ಲ. ಜಿಯಾ ಮಿಲಿಟರಿ ಅಧಿಕಾರ ಬಿಡಬೇಕು, ಹೊಸದಾಗಿ ಚುನಾವಣೆಯಾಗಬೇಕು ಎಂದು ತೀವ್ರ ಒತ್ತಡ ತಂದರು. ಈ ಮಧ್ಯೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಹಿರಿ ನಾಯಕರು ಈಕೆ ಮಹಿಳೆ, ಎಳಸು ಮತ್ತು ರಾಜಕೀಯ ಅನುಭವವಿಲ್ಲ ಎಂಬ ಕಾರಣಕ್ಕೆ ಅಧಿಕಾರ ನೀಡಲು ಹಿಂದೆ-ಮುಂದೆ ನೋಡುತ್ತಿದ್ದರು.
ಭರ್ಜರಿ ಜನಬೆಂಬಲ ಗಿಟ್ಟಿಸಿಕೊಂಡ ಭುಟ್ಟೋ ಹೊಸದಾಗಿ ಚುನಾವಣೆ ನಡೆಸಲು ಒತ್ತಡ ತೀವ್ರಗೊಳಿಸಿದಾಗ ಅದೇ ವರ್ಷ (1986) ಮತ್ತೆ ಜೈಲು ಸೇರಬೇಕಾಯಿತು. ಜಿಯಾ-ವಿರೋಧಿ ಆಂದೋಲನದೊಂದಿಗೆ ಆಕೆ ಪಕ್ಷದ ಆಂತರಿಕ ವಿರೋಧವನ್ನೂ ಎದುರಿಸಬೇಕಾಗಿತ್ತು.
|