1999ರಲ್ಲಿ ಭುಟ್ಟೋ ತಪ್ಪಿತಸ್ಥೆ ಎಂದು ತೀರ್ಪು ನೀಡಿದ ಹೈಕೋರ್ಟ್ ನ್ಯಾಯಾಲಯವೊಂದರ ತೀರ್ಪನ್ನು 2001ರಲ್ಲಿ ಪಾಕ್ ಸುಪ್ರೀಂ ಕೋರ್ಟ್ ತಳ್ಳಿ ಹಾಕಿ, ಇದರ ಮರು ವಿಚಾರಣೆಗೆ ಆದೇಶಿಸಿತು. ಅಂದಿನಿಂದ ದೇಶಭ್ರಷ್ಟಳಾಗಿದ್ದ ಭುಟ್ಟೋ, ಕಳೆದ ಅಕ್ಟೋಬರ್ ತಿಂಗಳಲ್ಲಷ್ಟೇ ಪಾಕಿಸ್ತಾನಕ್ಕೆ ಮರಳಿದ್ದರು.
ಪಾಕಿಗೆ ಮರಳಿದಾಗ ಆಕೆಗೆ ಭರ್ಜರಿ ಸ್ವಾಗತವೇ ದೊರೆಯಿತು. ಹಾಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮಿಲಿಟರಿ ಆಡಳಿತದ ವಿರುದ್ಧವೂ ಹೋರಾಟ ನಡೆಸಿದ ಆಕೆ, ಮುಷರಫ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.
ಟೈಮ್ಸ್ ಮತ್ತು ಆಸ್ಟ್ರೇಲಿಯನ್ ಮ್ಯಾಗಜಿನ್‌ನ 100 ಶಕ್ತಿಶಾಲಿ ಮಹಿಳೆಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಭುಟ್ಟೋ ಗಂಡೆದೆಗೆ ಹೆಸರಾದವರು. ಮಾತ್ರವಲ್ಲ, 1996ರಲ್ಲಿ ವಿಶ್ವದ ಅತ್ಯಂತ ಜನಪ್ರಿಯ ರಾಜಕಾರಣಿ ಎಂಬ ಕಾರಣಕ್ಕೆ ಗಿನ್ನಿಸ್ ದಾಖಲೆಯನ್ನೂ ಸೇರಿದ್ದರು. ಆಕೆಯ ಅಜ್ಜ ಸರ್ ಶಾ ನವಾಜ್ ಭುಟ್ಟೋ ಒಬ್ಬ ಸಿಂಧಿಯಾಗಿದ್ದು, ಪಾಕಿಸ್ತಾನದ ಸ್ವಾತಂತ್ರ್ಯ ಚಳುವಳಿಯಲ್ಲಿ ದೊಡ್ಡ ಹೆಸರು ಮಾಡಿದವರು. 1973ರಲ್ಲಿ ಅವರು ಆಕ್ಸ್‌ಫರ್ಡ್‌ನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದರು. ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿಯನ್‌ನ ಚುನಾಯಿತ ಅಧ್ಯಕ್ಷೆಯಾಗಿಯೂ ಅವರು ಹೆಸರು ಪಡೆದಿದ್ದರು.
ಭುಟ್ಟೋ ಅವರ ತಾಯಿ ಮತ್ತು ಮೂವರು ಮಕ್ಕಳಾದ ಬಿಲಾವಲ್, ಭಕ್ತಾವರ್ ಮತ್ತು ಆಸೀಫಾ ದುಬೈಯಲ್ಲಿದ್ದಾರೆ.
ಜೀವನದುದ್ದಕ್ಕೂ ಹೋರಾಟದಲ್ಲೇ ಕಳೆದ, ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದ ಬೇನಜೀರ್, ಮತ್ತೊಂದು ಚುನಾವಣೆಗೆ ಸಿದ್ಧರಾಗುತ್ತಿದ್ದರು. ಪಾಕಿಸ್ತಾನಕ್ಕೆ ನಾಗರಿಕ ಸರಕಾರ ನೀಡುವ ಕನಸಿನೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ವಿಫಲವಾದ ತಕ್ಷಣವೇ, ಎ.ಕೆ.47 ಬಂದೂಕಿನಿಂದ ಗುಂಡಿನ ದಾಳಿ ನಡೆಸಿ ಆಕೆಯ ಹೋರಾಟದ ಬದುಕಿಗೆ ಚರಮಗೀತೆ ಹಾಡಲಾಯಿತು.
|