ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಜಾತಿ ರಾಜಕೀಯವೇ ಅಥವಾ ರಾಜಕೀಯವೇ ಜಾತಿಯೇ? (Caste Politics In Karnataka| Yaddyurappa |Vokkaliga | Lingayat)
Bookmark and Share Feedback Print
 
ಅವಿನಾಶ್ ಬಿ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದರೆ, ರಾಜ್ಯವ್ಯಾಪಿಯಾಗಿ, ರಾಷ್ಟ್ರವ್ಯಾಪಿಯಾಗಿ ಆಂದೋಲನ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ
PTI
ರಾಜ್ಯದ ಮಠಾಧಿಪತಿಗಳು. ಇದೆಲ್ಲವೂ ಲಿಂಗಾಯಿತ ಸಮುದಾಯದ ಮೇಲೆ ಒಕ್ಕಲಿಗ ಸಮುದಾಯದ (ಅರ್ಥಾತ್ ಅವರೇ ಹೇಳಿರುವಂತೆ 'ದೇವೇಗೌಡ-ಕುಮಾರಸ್ವಾಮಿ ಎಂಬ ಅಪ್ಪ ಮಕ್ಕಳ') ಷಡ್ಯಂತ್ರ ಎಂದು ದೂರಿ ನೇರವಾಗಿ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ ಈ ಪೀಠಾಧೀಶರು.


ಹೌದು, ಇಂದು ಜಾತಿ ರಾಜಕೀಯವಂತೂ ಒಂದು ಇಡೀ ರಾಜ್ಯದ, ಅಷ್ಟೇಕೆ ದೇಶದ ರಾಜಕೀಯದ ಮೇಲೂ (ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆರಿಸಿದಾಗಲೂ, ಅವರು ಸಿಖ್ ಎಂಬುದೇ ಪ್ರಾಧಾನ್ಯತೆ ವಹಿಸಿತ್ತು - ಕಾರಣ ಕಾಂಗ್ರೆಸ್ ಪಕ್ಷವು 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಸಿಖ್ಖರ ಮಾರಣಹೋಮ ನಡೆದ ಬಳಿಕ ಸಿಖ್ ವಿರೋಧಿ ದಂಗೆಯಲ್ಲಿ ತನಗೆ ಅಂಟಿದ್ದ ಪಾಪದ ಕೊಳೆಯನ್ನು ತೊಲಗಿಸಿಕೊಳ್ಳುವ ನಿಟ್ಟಿನಲ್ಲಿ) ಕರಿಮೋಡದಂತೆ ಆವರಿಸಿಕೊಂಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರತಿಯೊಂದು ಪಕ್ಷದಲ್ಲಿ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡುವುದರಿಂದ, ಅಧ್ಯಕ್ಷರು ಯಾರಾಗಬೇಕು ಎಂಬುದರಿಂದ ಹಿಡಿದು, ಮುಖ್ಯಮಂತ್ರಿ ಯಾರನ್ನು ಆಯ್ಕೆ ಮಾಡಬೇಕು, ಯಾವ ಜಾತಿಯವರಿಗೆ ಎಷ್ಟು ಮಂತ್ರಿ ಪಟ್ಟಗಳನ್ನು ಕೊಡಬೇಕು ಎಂಬ ಕುರಿತಾಗಿ ನಿರ್ಣಯ ಕೈಗೊಳ್ಳುವ ಮೊದಲು ರಾಜ್ಯದಲ್ಲಿ ಪ್ರಮುಖವಾಗಿ ಕೇಳಿಬರುವುದು ಲಿಂಗಾಯತರಿಗೆಷ್ಟು, ಒಕ್ಕಲಿಗರಿಗೆಷ್ಟು, ಬ್ರಾಹ್ಮಣರಿಗೆಷ್ಟು, ದಲಿತರಿಗೆಷ್ಟು ಮತ್ತು ಅಲ್ಪಸಂಖ್ಯಾತರಿಗೆಷ್ಟು ಎಂಬ ಚಿಂತನ-ಮಂಥನ.

ಪ್ರತಿಯೊಂದು ಪಕ್ಷದಲ್ಲಿಯೂ ಈ ಜಾತಿ ಲೆಕ್ಕಾಚಾರವು ತಳಮಟ್ಟದಲ್ಲೇ ಇರುತ್ತದೆ. ಸಮಾಜವಿಂದು ಜಾತಿಯೆಂಬ ಅಡ್ಡಗೋಡೆಯನ್ನು ಒಡೆಯುತ್ತಾ, ಒಂದು ರೀತಿಯಲ್ಲಿ ಜಾತಿ ಭೇದವಿಲ್ಲದೆ, ಅರ್ಹತೆಯೇ ಮಾನದಂಡವಾಗಿ ಎಲ್ಲರನ್ನೂ ಪರಸ್ಪರ ಗೌರವ ಭಾವದಿಂದ ನೋಡುವ ಜನರನ್ನು ನಾವಿಂದು ಕಾಣಬಹುದು. ಆದರೆ ಈ ಜಾತಿಯೆಂಬ ಸಂಕುಚಿತ ಭಾವನೆಯ ತಳಹದಿಯಲ್ಲಿಯೇ ರಾಜ್ಯದ ರಾಜಕೀಯದ ಕಟ್ಟಡವು ಮೇಲೆದ್ದು ನಿಂತಿರುವುದು ಕೂಡ ಅಷ್ಟೇ ವಿಪರ್ಯಾಸ, ಅಪಾಯಕಾರಿ ಸಂಗತಿ.

ಯಡಿಯೂರಪ್ಪ ಕಿತ್ತು ಹಾಕಿದ್ರೆ ಹುಷಾರ್ ಎಂದರು ಮಠಾಧೀಶರು: ಕ್ಲಿಕ್ ಮಾಡಿ.

ಜಗತ್ತು ಈ ಪರಿಯಾಗಿ ಬೆಳೆದಿದ್ದರೂ, ಜನ ಸಾಮಾನ್ಯರಲ್ಲಿ ಕೂಡ ವಿಶಾಲ ಮನೋಭಾವನೆ ಬೆಳೆದುಬಂದಿದ್ದರೂ, ರಾಜಕೀಯವಂತೂ ಜಾತಿ ಲೆಕ್ಕಾಚಾರದಿಂದ ಒಂದಿಂಚೂ ಕದಲುವ ಲಕ್ಷಣಗಳು ತೋರುತ್ತಿಲ್ಲ. ಇದು ದುರ್ದೈವ. ಇದು ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ಬಹುಶಃ ದೇಶದ ಇತರ ಭಾಗಗಳಲ್ಲಿಯೂ ಕಾಣಬಹುದು.

ಹಾಗೆ ಹೇಳುವುದಾದರೆ, ಕರ್ನಾಟಕದಲ್ಲಿ ರಾಜಕೀಯದ ಬಿಗಿ ಮುಷ್ಟಿ ಇರುವುದು ಲಿಂಗಾಯತ ಮತ್ತು ಒಕ್ಕಲಿಗ ಎಂಬ ಎರಡು ಜಾತಿಗಳ ಮಧ್ಯೆ. ಮಧ್ಯೆ ಮಧ್ಯೆ ಹಿಂದುಳಿದ ವರ್ಗದವರು ಕುರ್ಚಿಯೇರಿದ್ದಿದೆ. 2001ರ ಜನಗಣತಿ ಅಂಕಿಅಂಶದ ಪ್ರಕಾರ, ರಾಜ್ಯದಲ್ಲಿರುವ ಆರು ಕೋಟಿ ಜನಸಂಖ್ಯೆಯಲ್ಲಿ, ಲಿಂಗಾಯತರು ಮತ್ತು ಒಕ್ಕಲಿಗರ ಸಂಖ್ಯೆ ಅನುಕ್ರಮವಾಗಿ ಶೇ.18 ಮತ್ತು ಶೇ.16ರಿಂದ 17. ದಲಿತರು/ಹಿಂದುಳಿದವರ ಜನಸಂಖ್ಯೆ ಶೇ.23ರಷ್ಟಿದೆ. ಕುರುಬರು ಶೇ.8 ಮಂದಿ ಹಾಗೂ ಮುಸ್ಲಿಮರು ಶೇ.10ರಷ್ಟಿದ್ದಾರೆ. ಉಳಿದವರು ಕ್ರಿಶ್ಚಿಯನ್ನರು ಮತ್ತು ಉಳಿದವರು.

ಹೀಗೆ ನೋಡಿದರೆ ದಲಿತರ ಜನಸಂಖ್ಯೆ ಕಾಲು ಭಾಗದಷ್ಟಿದ್ದರೂ, ಈ ಎರಡು ಸಮುದಾಯದ ಮಂದಿಯೇ ರಾಜ್ಯವನ್ನು ಆಳಿದ್ದು ಹೆಚ್ಚು. ಎರಡೂ ಜನಾಂಗದವರು ರಾಜ್ಯದ ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ಪಾರಮ್ಯ ಹೊಂದಿವೆ. ಸಾಕಷ್ಟು ಮಠಮಾನ್ಯಗಳೂ ಇವೆ. ಮಠಗಳು ಕೂಡ ಶಿಕ್ಷಣ ಸೇವೆಯೊಂದಿಗೆ ಜನಸೇವೆಯಲ್ಲಿ ನಿರತವಾಗಿವೆ.

ಹೀಗೇ ಈ ಸಮುದಾಯದ ಮುಖ್ಯಮಂತ್ರಿಗಳತ್ತ ಗಮನ ಹರಿಸಿದರೆ, ಇದುವರೆಗೆ ನಮ್ಮನ್ನಾಳಿದ 19 ಮುಖ್ಯಮಂತ್ರಿಗಳಲ್ಲಿ ಹಾಲಿ ಸಿಎಂ ಸೇರಿದಂತೆ ಎಂಟು ಲಿಂಗಾಯತ ಮುಖ್ಯಮಂತ್ರಿಗಳು ಮತ್ತು ಐದು ಮಂದಿ ಒಕ್ಕಲಿಗರು. ಮೂವರು ಹಿಂದುಳಿದ ವರ್ಗದವರು ಮತ್ತು ಎರಡು ಬಾರಿ ಬ್ರಾಹ್ಮಣ ಮುಖ್ಯಮಂತ್ರಿ ನಮ್ಮನ್ನು ಆಳಿದ್ದಾರೆ.

8 ಲಿಂಗಾಯತ ಮುಖ್ಯಮಂತ್ರಿಗಳಲ್ಲಿ ಆರು ಮಂದಿಯೂ ಕಾಂಗ್ರೆಸ್‌ಗೆ ಸೇರಿದವರು, ಒಬ್ಬರು ಜೆಡಿಎಸ್ ಮತ್ತೊಬ್ಬರು ಬಿಜೆಪಿ. ನಾಲ್ಕು ಒಕ್ಕಲಿಗ ಮುಖ್ಯಮಂತ್ರಿಗಳಲ್ಲಿ ಇಬ್ಬರು ಕಾಂಗ್ರೆಸ್‌ನವರು, ಒಬ್ಬರು ಅವಿಭಜಿತ ಜನತಾ ದಳ ಹಾಗೂ ಒಬ್ಬರು ಜೆಡಿಎಸ್‌ನವರು.

1990ರಲ್ಲಿ ಅಂದು ಉತ್ತಮ ಕೆಲಸ ನಿರ್ವಹಿಸಿದ್ದ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿ ಉಚ್ಚಾಟಿಸಿದ ನಂತರ ಲಿಂಗಾಯತರು ಕಾಂಗ್ರೆಸ್‌ನಿಂದ ದೂರವಾಗಿ ಬಿಜೆಪಿಯತ್ತ ಸರಿದಿದ್ದರು ಎಂಬ ಮಾತೊಂದು ಕೇಳಿಬರುತ್ತಿತ್ತು. 2007ರಲ್ಲಿ ಕುಮಾರಸ್ವಾಮಿಯ ವಚನಭ್ರಷ್ಟತೆ ಆರೋಪದಲ್ಲಿ ಸರಕಾರ ಪತನವಾದ ಬಳಿಕ ನಡೆದ 2008ರ ಚುನಾವಣೆಯಲ್ಲಿ ಲಿಂಗಾಯತ ಮತಗಳು ಬಿಜೆಪಿಯತ್ತ ಕ್ರೋಡೀಕರಣಗೊಂಡಿರುವುದು ಖಚಿತವಾಗಿ, ಬಿಜೆಪಿಗೆ ಗರಿಷ್ಠ (110) ಸ್ಥಾನಗಳು ಲಭಿಸಿದವು.

ಒಂದು ಮಾಹಿತಿಯ ಪ್ರಕಾರ, 20 ವರ್ಷಗಳ ಬಳಿಕ ರಾಜ್ಯಕ್ಕೊಬ್ಬ ಲಿಂಗಾಯತ ಮುಖ್ಯಮಂತ್ರಿ ದೊರಕಿದ್ದು, ಅವರ ಮೇಲೆ ಕ್ರಮ ಕೈಗೊಂಡರೆ ಲಿಂಗಾಯತ ಮತಗಳು ಪಕ್ಷದಿಂದ ದೂರವಾಗಬಹುದು, ಅದು ಮುಂಬರುವ ಪಂಚಾಯತ್ ಚುನಾವಣೆಗಳಲ್ಲಿಯೂ ಪರಿಣಾಮ ಬೀರಬಹುದು ಎಂಬ ಆತಂಕ ಕೇಂದ್ರೀಯ ಹೈಕಮಾಂಡ್‌ಗಿದೆ. ಹೀಗಾಗಿಯೇ ಯಡಿಯೂರಪ್ಪ ಖಂಡಿತಾ ಸೇಫ್ ಆಗಿರುತ್ತಾರೆ ಎಂಬ ಭರವಸೆ ಮತ್ತು ಅವರು ಉಳಿಯಬೇಕು ಎಂಬುದು ಲಿಂಗಾಯತ ಮಠಗಳ ಒತ್ತಾಸೆ. ಇದಲ್ಲದೆ, ಸ್ಥಳೀಯ ಸಂಸ್ಥೆಯ ಮಟ್ಟದಿಂದಲೇ ರಾಜಕೀಯದಲ್ಲಿ ಬೆಳೆದು, ಪಕ್ಷವನ್ನು ಕಟ್ಟುತ್ತಾ ತಾವೂ ಬೆಳೆದವರು ಯಡಿಯೂರಪ್ಪ. ಹೀಗಾಗಿ ಆರೋಪಗಳು ಬಂದ ತಕ್ಷಣ ಯಾವುದೇ ತನಿಖೆಯಿಲ್ಲದೆ ಏಕಾಏಕಿಯಾಗಿ ಕ್ರಮ ಕೈಗೊಳ್ಳುವುದು ಖಂಡಿತವಾಗಿಯೂ ತಮ್ಮ ಓಟಿನ ಬ್ಯಾಂಕು ಆಗಿರುವ ಲಿಂಗಾಯತ ಸಮಾಜವನ್ನು ಕೆರಳಿಸುತ್ತದೆ ಎಂಬುದರ ಅರಿವೂ ಕೇಂದ್ರೀಯ ನಾಯಕರಿಗಿದೆ.

ಇದೀಗ ಲಿಂಗಾಯತ ಮಠಾಧೀಶರೆಲ್ಲರೂ ಒಗ್ಗಟ್ಟಾಗಿ ಯಡಿಯೂರಪ್ಪ ಪರವಾಗಿ, ಒಕ್ಕಲಿಗ ಮುಖಂಡರಾದ ದೇವೇಗೌಡ-ಕುಮಾರಸ್ವಾಮಿ ಪಡೆಯ ವಿರುದ್ಧವಾಗಿ ಧ್ವನಿಯೆತ್ತಿದ್ದಾರೆ. ಇದು ಕೇಂದ್ರೀಯ ನಾಯಕರ ಮೇಲೆ ಪ್ರಭಾವ ಬೀರಬಹುದೇ ಎಂಬುದು ಕಾದು ನೋಡಬೇಕಾದ ಅಂಶ. ಮತ್ತು 2008ರಲ್ಲಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಎಂದು ಬಿಂಬಿಸಿಯೇ ಬಿಜೆಪಿ ಇಷ್ಟು ಸ್ಥಾನಗಳನ್ನು ಗೆದ್ದುಕೊಂಡಿರುವ ಅಂಶವೂ ಇದೆ. ಆದರೆ ಇದರ ನಡುವೆಯೇ, ಇಡೀ ರಾಜಕಾರಣವು ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಎಂಬ ಪಕ್ಷ ರಾಜಕೀಯದ ಬದಲಾಗಿ, ಒಕ್ಕಲಿಗ-ಲಿಂಗಾಯತ ಎಂಬ ಸಮುದಾಯ ರಾಜಕೀಯದ ಮೂಲಕ ವಿಭಜನೆಗೊಳ್ಳುತ್ತದೆಯೇ ಎಂಬ ಆತಂಕವೂ ಇಲ್ಲದಿಲ್ಲ.

ಜಾತಿ ರಾಜಕಾರಣ ಪ್ರತಿಯೊಂದು ಪಕ್ಷದಲ್ಲಿಯೂ ನಡೆಯುತ್ತಿದ್ದರೂ, ನಾವೆಲ್ಲಾ ಒಂದು, ನಾವೆಲ್ಲಾ ಕನ್ನಡಿಗರು, ಕರ್ನಾಟಕದ ಜನರ ಅಭಿವೃದ್ಧಿಗಾಗಿ ಶ್ರಮಿಸೋಣ ಎಂಬೊಂದು ಮನೋಭಾವ ಮಾತ್ರ ಈ ರಾಜಕೀಯವೆಂಬ ಗೊಬ್ಬರದ ನಡುವೆ ಎಲ್ಲಿಯೂ ಕಣ್ಣಿಗೆ ಕಾಣಿಸುತ್ತಿಲ್ಲ. ಇದು ಕನ್ನಡಿಗರ ದುರ್ದೈವ.
ಸಂಬಂಧಿತ ಮಾಹಿತಿ ಹುಡುಕಿ