ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ದೀಕ್ಷಿತ್ ಅಕಾಲಿಕ ಸಾವೇಕೆ ಸುದ್ದಿಯಾಗಿಲ್ಲ, ಏನು ನಿಗೂಢತೆ? (Rajeev Dixit | Indian media | Swadeshi movement | Bharat Swabhimaan)
Bookmark and Share Feedback Print
 
PTI
ಸ್ವದೇಶೀ ಆಂದೋಲನದ ಹರಿಕಾರ ರಾಜೀವ್ ದೀಕ್ಷಿತ್ ದಿಢೀರ್ ಸಾವು ದೇಶಾಭಿಮಾನಿಗಳಿಗೆ ತುಂಬಲಾರದ ನೋವು. ಅವರ ಅಗಲಿಕೆ ನಿಜವಲ್ಲ; ಅದು ಸುಳ್ಳೇಸುಳ್ಳು ಎಂದು ಹೇಳಬೇಕೆಂಬ ಆಸೆ. ನಿಜಕ್ಕೂ ರಾಜೀವ್ ದೀಕ್ಷಿತ್ ಸತ್ತಿದ್ದಾರಾ? ಸತ್ತಿದ್ದರೆ ಭಾರೀ ಸುದ್ದಿಯಾಗುತ್ತಿತ್ತು, ಆದರೆ ಆಗಿಲ್ವಲ್ಲ? ನಮ್ಮದೇ ವೆಬ್‌ದುನಿಯಾದಲ್ಲಿ ಈ ಸುದ್ದಿ ಪ್ರಕಟವಾದಾಗಲೂ, ಎಲ್ಲೂ ಇಲ್ಲದ ಸುದ್ದಿ ಇವರಿಗೆ ಹೇಗೆ ಸಿಕ್ಕಿತಪ್ಪಾ ಅಂತ, ಇದನ್ನೊಂದು 'ಸುಳ್ಳು ಸುದ್ದಿ' ಎಂದು ಅಂದುಕೊಂಡವರೇ ಹೆಚ್ಚು ಮಂದಿ. ಸಾವು ನಿಜ ಎಂದು ಖಚಿತವಾಗಿದೆ ಈಗ. ಆದರೆ ಅವರ ಸಾವು ಸಹಜವಲ್ಲವೇ? ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳ ವಿರುದ್ಧ ಎರಡು ದಶಕಗಳ ಹೋರಾಟ ಮಾಡಿದ್ದ 44ರ ಹರೆಯದ ದೀಕ್ಷಿತ್ ಸಾವಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವೂ ಇರಬಹುದೇ?-- ಇಂತಹ ಹತ್ತು ಹಲವು ಪ್ರಶ್ನೆಗಳು ಇನ್ನೂ ಉತ್ತರ ಸಿಗದೆ ಹರಿದಾಡುತ್ತಿವೆ.

ತಾಜಾ ಸುದ್ದಿಗಳು ನಿಮ್ಮ ವೆಬ್‌ದುನಿಯಾ ತಾಣದ ಮುಖಪುಟದಲ್ಲಿ

ಹಲವಾರು ಸ್ವದೇಶಿ ಆಂದೋಲನಗಳನ್ನು ಮುನ್ನಡೆಸಿದ, ಅಂದುಕೊಂಡದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲವನ್ನು ಹೊತ್ತಿದ್ದ, ಯುವ ಪೀಳಿಗೆಯ ಆದರ್ಶ ನಾಯಕನಾಗಿದ್ದ, ಮತ್ತು ಪ್ರಚಾರಪ್ರಿಯತೆಯಿಂದ ಬಹುದೂರ ಉಳಿದಿದ್ದ ರಾಜೀವ್ ದೀಕ್ಷಿತ್ ತಮ್ಮ ಹುಟ್ಟಿದ ಹಬ್ಬದ ದಿನವಾದ 2010, ನವೆಂಬರ್ 30ರ ಮಂಗಳವಾರದ ಮುಂಜಾನೆಯನ್ನು ಕಂಡಿರಲಿಲ್ಲ. ಅದಕ್ಕೂ ಮೊದಲೇ ಅವರು ಇಹಲೋಕ ತ್ಯಜಿಸಿದ್ದರು. ಅದನ್ನು ಹೃದಯಾಘಾತ ಎಂದು ಹೇಳಲಾಗುತ್ತಿದೆ. ಅದು ನಿಜವೇ? ನಿಜವೇ ಆಗಿದ್ದರೆ ಯಾಕೆ ಅದೊಂದು ಸುದ್ದಿಯಾಗಲಿಲ್ಲ?

ಪಮೇಲಾ ಆಂಡರ್ಸನ್ ಸೀರೆ ಉಟ್ಟಾಗ, ರಾಖಿ ಸಾವಂತ್ ಬಾಯಿ ಹರುಕರಂತೆ ಬಡುಕಿದಾಗ, ರಾಹುಲ್ ಗಾಂಧಿಗೆ ಹಲ್ಲು ನೋವಾದಾಗ, ಬ್ರೇಕಿಂಗ್ ನ್ಯೂಸ್ ಹಾಕುವ ಸುದ್ದಿವಾಹಿನಿಗಳಿಗೆ, ಮುದಿ ರಾಜಕಾರಣಿಯೊಬ್ಬ ಸತ್ತಾಗ ಸಂತಾಪ ವ್ಯಕ್ತಪಡಿಸುವ ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗಾಗಲೀ, ಅಥವಾ ಇತರ ಯಾವುದೇ ರಾಷ್ಟ್ರೀಯ ನಾಯಕರಿಗಾಗಲೀ, ರಾಜೀವ್ ದೀಕ್ಷಿತ್ ಸಾವು ದೊಡ್ಡ ವಿಚಾರವೆಂದು ಯಾಕಾದರೂ ಅನ್ನಿಸಲಿಲ್ಲ?

ಮೊನ್ನೆಯ ದಿನ ಅವರು ಅಸ್ತಂಗತರಾದರೆಂದು 'ವೆಬ್‌ದುನಿಯಾ' ಸೇರಿದಂತೆ ಬೆರಳೆಣಿಕೆಯ ವೆಬ್‌ಸೈಟುಗಳು, ಮರುದಿನ ಕೆಲವು, ವಿಶೇಷವಾಗಿ ಪ್ರಾದೇಶಿಕ ಭಾಷಾ ಪತ್ರಿಕೆಗಳು, ಕೆಲವೇ ಕೆಲವು ಟಿವಿ ಚಾನೆಲ್‌ಗಳು ಸುದ್ದಿ ಪ್ರಕಟಿಸಿದ್ದವು. ದಿನವಿಡೀ ಕೊರೆದದ್ದನ್ನೇ ಕೊರೆಯುವ ಬಹುತೇಕ ಸುದ್ದಿವಾಹಿನಿಗಳು ಇದನ್ನೊಂದು ಸುದ್ದಿಯೆಂದು ಪರಿಗಣಿಸಲೇ ಇಲ್ಲ. ಸತ್ತಾಗಲಾದರೂ ನೆನೆಯೋಣ ಎನ್ನುವ ಕನಿಷ್ಠ ಪ್ರಜ್ಞೆಯನ್ನೂ ಮೆರೆಯಲಿಲ್ಲ ಎಂದು ಸ್ವದೇಶ ಅಭಿಮಾನಿಗಳು ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಆನ್‌ಲೈನ್ ಚರ್ಚಾ ವೇದಿಕೆಗಳಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ.

ಅವರ ಮನಸ್ಸಿನಲ್ಲಿರುವ ಶಂಕೆ ರಾಜೀವ್ ದೀಕ್ಷಿತ್ ಸಾವು ಸಹಜವಲ್ಲ ಎನ್ನುವುದು. ಆರಂಭದಿಂದಲೂ ಪೆಪ್ಸಿ, ಕೋಕಾ ಕೋಲಾ ಮುಂತಾದ ವಿದೇಶಿ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು, ಅವರ ಪರ ವಾದಿಸುವವರನ್ನು ವಿರೋಧಿಸುತ್ತಾ ಬಂದಿದ್ದ ದೀಕ್ಷಿತ್‌ರನ್ನು ಇಂತಹ ಲಾಬಿಗಳೇ ಮುಗಿಸಿರಬಹುದು ಮತ್ತು ಆ ಲಾಬಿಯೇ ಇದೊಂದು ದೊಡ್ಡ ಸುದ್ದಿಯಾಗದಂತೆ ತಡೆದಿರಬಹುದು ಎಂಬ ಶಂಕೆ ಅವರದು.

ಈ ಸುದ್ದಿಯನ್ನು ಓದುವ ಮಂದಿಗೆ ಗೂಗಲ್ ಸರ್ಚ್ ಬಗ್ಗೆ ಗೊತ್ತೇ ಇರುತ್ತದೆ. ದಯವಿಟ್ಟು ರಾಜೀವ್ ದೀಕ್ಷಿತ್ ಎಂದು ಆಂಗ್ಲ ಭಾಷೆಯಲ್ಲಿ ಕಂಪೋಸ್ ಮಾಡಿ, ಸರ್ಚ್ ಮಾಡಿ ನೋಡಿ. ದೀಕ್ಷಿತ್ ಸಾವಿನ ಬಗ್ಗೆ ನಿಮಗೆಷ್ಟು ವರದಿಗಳು ಸಿಗುತ್ತವೆ ಎಂದು ಹುಡುಕಿ. ಸ್ವತಃ ನಿಮ್ಮಷ್ಟೂ ರಾಜೀವ್ ದೀಕ್ಷಿತ್ ಜನಪ್ರಿಯರಲ್ಲ ಎಂಬ ಶಂಕೆ ನಿಮ್ಮಲ್ಲಿ ಮೂಡದಿದ್ದರೆ ಮತ್ತೆ ಕೇಳಿ.

ದೀಕ್ಷಿತ್ ಹಠಾತ್ ಸಾವಿನ ತನಿಖೆ ನಡೆಸಬೇಕೆಂಬ ಕೂಗು ಕ್ಷೀಣವಾಗಿ ಕೇಳಿ ಬರುತ್ತಿದೆ. ಈ ದನಿ ಯಾಕೆ ಕ್ಷೀಣವಾಗಿ ಕೇಳುತ್ತಿದೆ ಎನ್ನುವುದು ಸ್ವದೇಶಿ ಚಳವಳಿಯ ವಾಸನೆಯ ಅರಿವಿದ್ದವರಿಗೆ ಅಪರಿಚಿತವಾಗಿರಲಾರದು. ಹಾಗಾಗಿ ಕೇಂದ್ರ ಸರಕಾರ ಸೇರಿದಂತೆ ಯಾವುದೇ ಸರಕಾರಗಳು ಅದರ ತನಿಖೆಗೆ ಮುಂದಾಗುವುದು ಸಾಧ್ಯವೇ ಇಲ್ಲ. ಬಹುರಾಷ್ಟ್ರೀಯ ಕಂಪನಿಗಳ ಆಶೀರ್ವಾದದೊಂದಿಗೆ ಮುಂದುವರಿಯುತ್ತಿರುವ ಸರಕಾರಗಳು ಮತ್ತು ಕೆಲವು ಮಾಧ್ಯಮಗಳು ಇಂತಹ ಸಾಹಸಕ್ಕೆ ಕೈ ಹಾಕುವುದನ್ನು ಕನಿಷ್ಠ ಯೋಚಿಸಲು ಕೂಡ ಸಾಧ್ಯವಿಲ್ಲ.

ಆದರೆ ಎಂದಿಗೂ ಪ್ರಚಾರಪ್ರಿಯರಾಗದೆ, ತಮ್ಮ ಗುರಿ ಸಾಧನೆಯನ್ನೇ ಉದ್ದೇಶವಾಗಿರಿಸಿಕೊಂಡಿದ್ದ ರಾಜೀವ್ ದೀಕ್ಷಿತ್ ಸಾವು ಸುದ್ದಿಯಾಗದಿರುವುದರಲ್ಲಿ ದೊಡ್ಡ ವಿಶೇಷವೇನಿಲ್ಲ ಎಂಬ ಅಭಿಪ್ರಾಯವೂ ಒಂದೆಡೆಯಿದೆ. ಇನ್ನೊಂದು ಶಂಕೆಯ ಪ್ರಕಾರ, ದೀಕ್ಷಿತ್ ಸಾವನ್ನು ದೊಡ್ಡದಾಗಿ ಬಿಂಬಿಸಿದರೆ, ದೇಶಾದ್ಯಂತವಿರುವ ಅವರ ಅಭಿಮಾನಿಗಳು, ತಮ್ಮ ಅಗಲಿದ ನೇತಾರನಿಗಾಗಿಯಾದರೂ, ಸ್ವದೇಶೀ ಆಂದೋಲನವನ್ನು ಮತ್ತಷ್ಟು ಬಲಪಡಿಸಿ, ಹೋರಾಟ ತೀವ್ರಗೊಳಿಸುವ ಸಾಧ್ಯತೆಗಳೂ ಇಲ್ಲದಿರಲಿಲ್ಲ. ಹೀಗಾಗಿಯೇ, ಸಾವೆಂಬುದು ಸುದ್ದಿಯಾಗದಂತೆ ತಡೆಯುವಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ.

ರಾಜೀವ್ ದೀಕ್ಷಿತ್ ಇನ್ನಿಲ್ಲ ಸುದ್ದಿಗೆ ಕ್ಲಿಕ್ ಮಾಡಿ

ಸಾವಿನಲ್ಲೂ ರಾಷ್ಟ್ರಪ್ರೇಮ...
ವಿಶೇಷವಾಗಿ ಯುವ ಜನತೆಗೆ ಮಾದರಿಯಾಗಿದ್ದ, ಅವರನ್ನು ಬಡಿದೆಬ್ಬಿಸುತ್ತಿದ್ದ ಜೀವ ಸೋಮವಾರ ರಾತ್ರಿ ನಿಶ್ಚಲವಾಗಿತ್ತು. ದೇಶ ಸೇವೆಗಾಗಿ ಮದುವೆಯಾಗದೆ ಉಳಿದಿದ್ದ ಅವರು ಸೋಮವಾರ ಸಂಜೆ (ನ.30) ಯೋಗಗುರು ಬಾಬಾ ರಾಮದೇವ್ ಅವರ ಜತೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ತೀವ್ರ ಎದೆನೋವಿನಿಂದ ವೇದಿಕೆಯಲ್ಲೇ ಕುಸಿದು ಬಿದ್ದರು.

ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಪೂರಕ ಚಿಕಿತ್ಸೆ ನೀಡಲು ವೈದ್ಯರು ತರಾತುರಿಯಿಂದ ತಮ್ಮಿಂದಾಗುವ ಯತ್ನವನ್ನು ಮಾಡಿದರು. ಇದ್ದಬದ್ದ ಮಾತ್ರೆಗಳನ್ನು ಕೊಡಲು ಮುಂದಾದರು. ಈ ಹೊತ್ತಿನಲ್ಲಿ ವೈದ್ಯರು ಕೊಡುತ್ತಿದ್ದ ಔಷಧಿಗಳನ್ನು ನೋಡಿದ ದೀಕ್ಷಿತ್, 'ನೀವು ಕೊಡುತ್ತಿರುವ ಔಷಧಿ ಯಾವುದು?' ಎಂದು ಪ್ರಶ್ನಿಸಿದರು. ಅದು ವಿದೇಶದ ಔಷಧಿ ಎಂಬುದನ್ನು ತಿಳಿದು, 'ನಾನು ಸತ್ತರೂ ಪರವಾಗಿಲ್ಲ. ನನಗೆ ವಿದೇಶಿ ಔಷಧಿ ಬೇಡ' ಎಂದರು.

ಈ ಹೊತ್ತಿನಲ್ಲಿ ವೈದ್ಯರು ಅಚ್ಚರಿಯ ಕಡಲಲ್ಲಿ ಬಿದ್ದರು. ಸಾವಿನ ಹೊತ್ತಿನಲ್ಲೂ ಸ್ವದೇಶ ಪ್ರೇಮವನ್ನು ಮೆರೆದ ಜೀವ ತಮ್ಮ ಕಣ್ಣೆದುರೇ ಆತ್ಮವಾಗುತ್ತಿರುವುದನ್ನು ಮರುಗಿದರು. ದೀಕ್ಷಿತ್ ದಾಖಲಾಗಿದ್ದ ಆಸ್ಪತ್ರೆಯಲ್ಲಿ ಆಂಜಿಯೋಗ್ರಫಿ ಸೌಲಭ್ಯ ಇರದೇ ಇದ್ದುದರಿಂದ ವೈದ್ಯರು ನಡೆಸಿದ ಇತರ ಯಾವುದೇ ಯತ್ನಗಳು ಫಲಕಾರಿಯಾಗದೆ ನಿಧನ ಹೊಂದಿದರು.

ಸ್ವಾವಲಂಬನೆಯ ಮೂಲಕ ತಮ್ಮ ಕಾಲಿನಲ್ಲಿ ತಾವೇ ನಿಲ್ಲುವಂತೆ ಭಾರತೀಯರನ್ನು ಪ್ರೇರೇಪಿಸುತ್ತಿದ್ದ ಜೀವವೊಂದು ಸದ್ದಿಲ್ಲದೆ ನಿರ್ಗಮಿಸಿದೆ. ಅದು ಕೂಡ ವಿದೇಶೀಯರ ಹಿಡಿತದಲ್ಲಿರುವ ಮಾಧ್ಯಮಗಳ ಬಣ್ಣವನ್ನು ಬಯಲು ಮಾಡುತ್ತಲೇ ಈ ಜೀವವು ಭೌತಿಕ ಜಗತ್ತಿಗೆ ವಿದಾಯ ಹಾಡಿದ್ದು ವಿಪರ್ಯಾಸ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ