ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಅಧಿಕಾರಸ್ಥರಿಗೆ ಭದ್ರತೆ, ಜನಸಾಮಾನ್ಯರಿಗೆಲ್ಲಿದೆ ರಕ್ಷಣೆ? (Mumbai Blast | July 13, 2011 | Terror | Chidambaram | UPA)
ಹಿಂದಿನದು|ಮುಂದಿನದು
ಅವಿನಾಶ್ ಬಿ.
PTI
ಆಹಾ, ಇಂಥದ್ದೊಂದು ಗೃಹ ಸಚಿವರನ್ನು ಪಡೆದ ಭಾರತವದೆಷ್ಟು ಧನ್ಯ! ಈಗಾಗಲೇ ಭ್ರಷ್ಟಾಚಾರಗಳಿಗೆ, ಬೆಲೆ ಏರಿಕೆಗೆ ಒಗ್ಗಿಕೊಂಡಂತೆ ಭಯೋತ್ಪಾದನೆಗೂ ಒಗ್ಗಿಹೋದಂತಿರುವ ಮುಂಬೈಯಲ್ಲಿ ಮತ್ತೆ ರಕ್ತಪಾತವಾಗಿದೆ. ಮನೆಯಿಂದ ಹೊರ ಹೋದವರಿಗೆ ಮರಳಿ ಬರುವುದರ ಬಗ್ಗೆ ಭರವಸೆಯಿಲ್ಲದಂತಹಾ ಪರಿಸ್ಥಿತಿಯಿದೆ. ಆದರೆ, "ಈ ಸ್ಫೋಟವು ಯಾವುದೇ ವಿದೇಶೀಯರನ್ನು ಗುರಿಯಾಗಿರಿಸಿದ್ದಲ್ಲ, ವಿದೇಶೀಯರು ಭಾರತದಲ್ಲಿ ಸುರಕ್ಷಿತರು" ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಹಾಗಾದರೆ ಭಾರತ ದೇಶದಲ್ಲಿ ಭಾರತೀಯರೇಕೆ ಸುರಕ್ಷಿತರಲ್ಲ? "ಸ್ಫೋಟದ ಬಗ್ಗೆ ಮಾಹಿತಿ ಇರಲಿಲ್ಲ, ಆದರೆ ಇದು ಗುಪ್ತಚರ ವೈಫಲ್ಯ ಅಲ್ಲವೇ ಅಲ್ಲ" ಎಂದೂ ಹೇಳಿದ್ದಾರೆ ಗೃಹ ಸಚಿವರು. ಹಾಗಿದ್ದರೆ ಇದನ್ನು ಏನೆಂದು ಕರೆಯಬೇಕು?

ತಾಜಾ ಸುದ್ದಿ, ವಿಶೇಷ ವರದಿಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಅರ್ಥವಾಗದ ಪ್ರಶ್ನೆಗಳ ನಡುವೆ, ನಮ್ಮ ಭವ್ಯ ಭಾರತದ ಭಾವೀ ಪ್ರಧಾನಿ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಯನ್ನೂ ಕೇಳಿದ್ದೀರಿ. ಆಫ್ಘಾನಿಸ್ತಾನ, ಇರಾಕ್‌ಗಳಲ್ಲಿ ಪ್ರತಿದಿನ ದಾಳಿಗಳು ನಡೆಯುತ್ತಿವೆ ಎಂದವರು ಈ ಮುಂಬೈ ದಾಳಿಯನ್ನು ಹೋಲಿಸಿದ್ದಾರಲ್ಲಾ, ಅದು ಮನಸ್ಸಿಗೆ ತೀವ್ರ ನೋವು ತರುವ ಸಂಗತಿ. ಅಲ್ಲಿರುವ ಅತಂತ್ರ ಸರಕಾರಗಳಿಗೂ, ನಮ್ಮಲ್ಲಿರುವ ಸ್ವತಂತ್ರ-ಸಮ್ಮಿಶ್ರ ಸರಕಾರಗಳಿಗೂ ವ್ಯತ್ಯಾಸವೇ ಇಲ್ಲವೇ?

31 ತಿಂಗಳಲ್ಲಿ ಎರಡನೆಯದಂತೆ!
ಪ್ರತೀ ಸ್ಫೋಟ ನಡೆದಾಗಲೂ, ಪ್ರಧಾನಿ ಖಂಡನೆ, ಗೃಹ ಸಚಿವ ಖಂಡನೆ, ರಾಷ್ಟ್ರಪತಿ ಖಂಡನೆ.... ಇತ್ಯಾದಿಗಳು ಚರ್ವಿತಚರ್ವಣವಾಗಿಬಿಟ್ಟಿದೆ. ಈ ರೀತಿ ಖಂಡನೆ ಹೇಳಿಕೆ ನೀಡುವುದಕ್ಕೂ ನಾಚಿಕೆಯಾಗುವುದಿಲ್ಲವೇ? ಎಂಬುದು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಯಾಕೆಂದರೆ ಈ ಪ್ರಶ್ನೆಯನ್ನು ಯಾರು ಕೂಡ ಕೇಳಿಸಿಕೊಳ್ಳುವುದಿಲ್ಲ!

2008ರ 26/11 ಮುಂಬೈ ದಾಳಿಯ ಬಳಿಕ ಯಾವುದೇ ಭಯೋತ್ಪಾದನೆ ಚಟುವಟಿಕೆಗಳು ನಡೆದಿಲ್ಲ. ಇದು ಎರಡನೆಯದು ಎಂದು ನಮ್ಮ ಘನ ಸರಕಾರದ ಆದರಣೀಯ ಗೃಹ ಸಚಿವರು ಹೇಳಿಕೆ ನೀಡುತ್ತಿದ್ದಾರೆಂದಾದರೆ, 2010ರ ಫೆಬ್ರವರಿಯಲ್ಲಿ ಪುಣೆಯ ಜರ್ಮನ್ ಬೇಕರಿ, ಅದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಫೋಟ, ಅದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯ ಜಾಮಾ ಮಸೀದಿಯಲ್ಲಿ ಶೂಟೌಟ್, 2010ರ ಡಿಸೆಂಬರ್‌ನಲ್ಲಿ ವಾರಾಣಸಿಯ ಶಿಟ್ಲಾಘಾಟ್ ಬಾಂಬ್ ಸ್ಫೋಟ. ಆ ಬಳಿಕ ತೀರಾ ಇತ್ತೀಚೆಗೆ 2011ರ ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್ ಆವರಣದಲ್ಲಿಡಲಾಗಿದ್ದ ಕಾರು ಬಾಂಬ್ ಹೆಚ್ಚಿನ ಅನಾಹುತವನ್ನೇನೂ ಮಾಡಿಲ್ಲ. ಇವೆಲ್ಲವೂ ಕೇವಲ ಪಟಾಕಿಗಳೇ? ಎಂಬುದು ನಾವು ಕೇಳಲೇಬೇಕಾದ ಪ್ರಶ್ನೆ.

ಅರಸರಿಗೆ ರಕ್ಷಣೆಯಿದೆ, ತೆರಿಗೆ ಕಟ್ಟುವ ಪ್ರಜೆಗೇಕಿಲ್ಲ?
ನಿರುಪದ್ರವಿಗಳಾಗಿ ಭ್ರಷ್ಟಾಚಾರದ ವಿರುದ್ಧ ಉಪವಾಸ ನಡೆಸಿ ಮಲಗಿ ನಿದ್ರಿಸುತ್ತಿರುವ ಸನ್ಯಾಸಿಗಳನ್ನು, ಜನ ಸಾಮಾನ್ಯರನ್ನು ಹೊಡೆದು ಓಡಿಸಲಾಗುತ್ತದೆ; ಒಂದಿಷ್ಟು ಹೆಚ್ಚು ಆದಾಯ ಬಂದರೆ, ಎಗ್ಗಿಲ್ಲದೆ ತೆರಿಗೆ ಸಂಗ್ರಹಿಸಲಾಗುತ್ತದೆ; ಆದರೆ, ಮೂಲೆ ಮೂಲೆಯಲ್ಲಿಯೂ ಇರುವ ಭಯೋತ್ಪಾದಕರು, ಸಿಮಿ ಕ್ರಿಮಿಗಳು, ಲಷ್ಕರ್‌ಗಳು, ಜಿಹಾದಿಗಳೇ ಮೊದಲಾದವರು ಕೈಗೆ ಸಿಕ್ಕಿದರೂ ಜೈಲಿನಲ್ಲಿ ಆರಾಮವಾಗಿ 'ಸುರಕ್ಷಿತ'ರಾಗಿದ್ದಾರೆ. ಅಂಥವರನ್ನು ಜೈಲಿನಲ್ಲಿ ಸುರಕ್ಷಿತವಾಗಿ ಇರಿಸುವುದಕ್ಕೋಸ್ಕರ, ಅದೇ ರೀತಿ, ಮಹಾ ಮಹಾನ್ ನಾಯಕರಿಗೆಲ್ಲಾ ಭದ್ರತೆಗಾಗಿ ಭದ್ರತೆಗೆ ಕೋಟಿ ಕೋಟಿ ಹಣ ವಿನಿಯೋಗಿಸಲಾಗುತ್ತದೆ; ಆದರೆ ಜನ ಸಾಮಾನ್ಯ ಯಾವಾಗ ಹೆಣವಾಗುತ್ತಾನೆ ಎಂಬುದು ತಿಳಿಯದೇ ಇರುವ ಪರಿಸ್ಥಿತಿ!

ಇದೆಂಥಾ ವಿಪರ್ಯಾಸ? ನಾವೇ ಆರಿಸಿ ಕಳುಹಿಸಿದವರು, ನಮ್ಮದೇ ತೆರಿಗೆ ಹಣದಲ್ಲಿ ಎಲ್ಲ ರೀತಿಯ ಭದ್ರತೆಗಳನ್ನೂ ಅನುಭವಿಸುತ್ತಿದ್ದರೆ, ತೆರಿಗೆ ತೆತ್ತು "ನಾವಿನ್ನು ಆರಾಮವಾಗಿ ಜೀವನ ಸಾಗಿಸಬಹುದು" ಎಂದು ನೆಮ್ಮದಿಯಿಂದ ಕೂರಲು ಹೊರಟ ಜನಸಾಮಾನ್ಯನಿಗೆ ರಕ್ಷಣೆಯಿಲ್ಲ; ನೆಮ್ಮದಿಯಿಲ್ಲ! ಕೇರಳದಲ್ಲಿ ಪ್ರೊಫೆಸರ್ ಒಬ್ಬರ ಕೈ ಕಡಿಯುವವರು, ಅಲ್ಲಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಿಮಿಗಳು, ಇಂಡಿಯನ್ ಮುಜಾಹಿದೀನ್‌ಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಏನೂ ತಪ್ಪು ಮಾಡದ ಸಾಮಾನ್ಯ ಪ್ರಜೆಯೊಬ್ಬ ಧೈರ್ಯದಿಂದ ನಡೆದಾಡಲೂ ಭಯ ಪಡುತ್ತಿದ್ದಾನೆ!

26/11 ಬಳಿಕ ಮಾಡಿದ ಘೋಷಣೆಗಳ ಪಾಡೇನು?
ನಾವೇ ತೆರಿಗೆ ಕಟ್ಟುವ ಹಣದಿಂದ ಅದೆಷ್ಟೋ ತನಿಖಾ ಸಂಸ್ಥೆಗಳನ್ನು ಸರಕಾರವು ಪೋಷಿಸಿಕೊಂಡು ಬರುತ್ತಿದೆ. ಸಿಬಿಐ, ರಾ, ಐಬಿ, ಎನ್ಐಎ, ನ್ಯಾಷನಲ್ ಗ್ರಿಡ್, ಸಿಐಡಿ, ಸಿಒಡಿ, ಎನ್ಎಸ್‌ಜಿ, ಎನ್ಎಸ್ಎ, ಎಟಿಎಸ್... ಇತ್ಯಾದಿತ್ಯಾದಿ ಅದೆಷ್ಟೋ ತನಿಖಾ ಸಂಸ್ಥೆಗಳು, ಪೊಲೀಸರು ನಮ್ಮನ್ನು ರಕ್ಷಿಸಲು ನೇಮಕಗೊಂಡಿದ್ದಾರೆ. ಹೀಗಾಗಿ ಜನ ಸಾಮಾನ್ಯನ ಆಕ್ರೋಶದ ಕಟ್ಟೆಯೊಡೆಯುವುದು. ನಮ್ಮ ಸರಕಾರವನ್ನು ನಾವೇ ಆರಿಸಿ ಕಳುಹಿಸಿದ್ದೇವೆ, ಅದರ ಪೋಷಣೆಗೆ ಮತ್ತು ನಮ್ಮ ಭದ್ರತೆಗೆ ನಾವೇ ತೆರಿಗೆ ಹಣ ನೀಡುತ್ತೇವೆ. ಹೀಗಾಗಿ ಆಳುವವರು ಎಡವಿದಾಗ ಖಂಡಿಸುವ ಹಕ್ಕು ನಮಗಿದೆ ಅಂತ ನಾವು ಅಂದುಕೊಂಡು ತೃಪ್ತಿಪಡಬಹುದಷ್ಟೇ.

2008ರ 26/11 ಮುಂಬೈ ದಾಳಿಯ ಬಳಿಕ ಕೋಟ್ಯಂತರ ರೂಪಾಯಿ ಭಾರತೀಯ ತೆರಿಗೆದಾರರ ಹಣವನ್ನು ಭಯೋತ್ಪಾದನೆ ವಿರೋಧೀ ಹೋರಾಟಕ್ಕಾಗಿ ಸುರಿಯಲಾಗಿತ್ತು. ಅದೆಲ್ಲ ಎಲ್ಲಿ ಹೋಯಿತು? ಒಂದು ಮೇಲ್ನೋಟವನ್ನೇ ನೋಡಿ:

2008ರ ಮುಂಬೈ ದಾಳಿಯ ಬಳಿಕ ರಾಮ ಪ್ರಧಾನ್ ಸಮಿತಿಯನ್ನು ರಚಿಸಲಾಗಿತ್ತು. ಅದು ಕೆಲವು ಶಿಫಾರಸುಗಳನ್ನು ಕೂಡ ಮಾಡಿತ್ತು. ಅದರಲ್ಲಿ ಪ್ರಮುಖವಾದುದೆಂದರೆ, ಪೊಲೀಸ್ ಬಲದ ಆಧುನೀಕರಣ. ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕೆಂಬುದು. ಮಾತು ಮಾತು ಮಾತು. ಅಷ್ಟೇ. ಆ ವಿಷಯ ಇನ್ನೂ ಆರಂಭವನ್ನೇ ಪಡೆದಿಲ್ಲ ಎಂದು ತಿಳಿಸಲು ನಮಗೇ ನಾಚಿಕೆಯಾಗುತ್ತಿದೆ!

ಅಂತೆಯೇ, ಗುಪ್ತಚರ ಮಾಹಿತಿಗಳು ರಾಜ್ಯಗಳನ್ನು ನೇರವಾಗಿ ಸಕಾಲದಲ್ಲಿ ತಲುಪುವಂತಾಗಲು ಒಂದು ಕೇಂದ್ರೀಕೃತ ವ್ಯವಸ್ಥೆಯ ಶಿಫಾರಸು ಮಾಡಲಾಗಿದೆ. ಆದರೆ, ಅದು ಕೂಡ ಕಾರ್ಯಾನುಷ್ಠಾನವಾಗಿಲ್ಲ. ಗುಪ್ತಚರ ಮಾಹಿತಿ ಇನ್ನೂ ಗೊಂದಲಮಯ ಹಾದಿಯಲ್ಲೇ ಸಾಗುತ್ತಿದೆ.

ಇನ್ನು, 2003ರಲ್ಲಿ ರಚಿಸಲಾಗಿದ್ದ ಕ್ಷಿಪ್ರ ಸ್ಪಂದನಾ ಪಡೆಗಳನ್ನು ಬಲಪಡಿಸಿ, ಮುಂದೆ ಯಾವುದೇ ದಾಳಿಗಳಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಅವುಗಳನ್ನೂ ಪುನಶ್ಚೇತನಗೊಳಿಸಿ ಆಧುನೀಕರಣಗೊಳಿಸಬೇಕು ಎಂದು ಕೂಡ ಶಿಫಾರಸು ಮಾಡಲಾಗಿತ್ತು. ಸರಿ, 'ಫೋರ್ಸ್ ಒನ್' ಎಂಬ ಪಡೆಯೊಂದನ್ನು ಭಾರೀ ಪ್ರಚಾರದೊಂದಿಗೆ ಆರಂಭಿಸಲಾಯಿತು. ಅದೇನು ಮಾಡುತ್ತಿದೆ? ಉತ್ತರ ಇನ್ನಷ್ಟೇ ತಿಳಿಯಬೇಕಿದೆ!

ಒಟ್ಟಿನಲ್ಲಿ ಕೋಟಿ ಕೋಟಿ ಸುರಿದುದರ ಫಲಿತಾಂಶ ಏನಾಗಿದೆ ಎಂಬುದು ಬುಧವಾರದ ಸ್ಫೋಟದಲ್ಲಿಯೇ ಬಟಾಬಯಲಾಗಿಬಿಟ್ಟಿತಲ್ಲ!

ಸರಕಾರ ಎಚ್ಚೆತ್ತುಕೊಳ್ಳುವುದೆಂದು? (ಮುಂದಿನ ಪುಟ ನೋಡಿ)

ಹಿಂದಿನದು|ಮುಂದಿನದು
ಇವನ್ನೂ ಓದಿ