ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಅಧಿಕಾರಸ್ಥರಿಗೆ ಭದ್ರತೆ, ಜನಸಾಮಾನ್ಯರಿಗೆಲ್ಲಿದೆ ರಕ್ಷಣೆ? (Mumbai Blast | July 13, 2011 | Terror | Chidambaram | UPA)
ಹಿಂದಿನದು|ಮುಂದಿನದು
ಒಗ್ಗಿಕೊಳ್ಳುವ ಮನಸ್ಥಿತಿ...
ಮುಂಬೈಯಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟದ ದೃಶ್ಯಾವಳಿಗಳನ್ನು ಟಿವಿಯಲ್ಲೊಮ್ಮೆ ನೋಡಿದ್ರಾ? ಅಲ್ಲಿನ ಪ್ರಜೆಗಳೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಾ, 'ನಮಗ್ಯಾರೂ ಇಲ್ಲ, ನಮ್ಮ ಕಷ್ಟ ನಮಗೆ' ಅನ್ನೋ ಭಾವದಲ್ಲಿದ್ದರು. ಮುಂಬಯಿಗರು ಈ ರೀತಿಯ ಬಾಂಬ್ ಸ್ಫೋಟಗಳಿಗೆ ಒಗ್ಗಿಕೊಂಡು ಬಿಟ್ಟರಾ ಅನ್ನೋ ಮನೋಭಾವನೆಯೂ ಸುಳಿದಿತ್ತು. ಸಾಮಾನ್ಯ ಪ್ರಜೆಯೊಬ್ಬ ಈ ಸಂಕಷ್ಟದಲ್ಲಿ ಪರಾವಲಂಬಿಯಾದಾಗ ಮಾನವೀಯ ನೆರವು ನೀಡುತ್ತಿದ್ದರೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಪತ್ರಿಕಾಗೋಷ್ಠಿಯಲ್ಲಿ, 'ಹಲವರನ್ನು ನಮ್ಮವರು ರಕ್ಷಿಸಿದ್ದಾರೆ' ಎನ್ನುತ್ತಾ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ! ಬಹುಶಃ ಭಾರತೀಯರ ಒಗ್ಗಿಕೊಳ್ಳುವ ಮನಸ್ಥಿತಿಯು ಅಧಿಕಾರಸ್ಥರಿಗೆ ವರದಾನವೇ ಆಗಿಬಿಟ್ಟಿದೆ. ಭ್ರಷ್ಟಾಚಾರಕ್ಕೆ ಜನ ಹೇಗೆ ಒಗ್ಗಿಕೊಂಡು ತಮ್ಮ ಪಾಡಿಗೆ ತಾವು ಜೀವನ ಸಾಗಿಸಿಕೊಂಡು ಹೋಗುತ್ತಿದ್ದಾರೋ, ಬಾಂಬ್ ಸ್ಫೋಟದಂತಹಾ ವಿಧ್ವಂಸಕ ಕೃತ್ಯಗಳಿಗೂ ಅವರು ಒಗ್ಗಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಎಂದಿನಂತೆಯೇ ಮೊಂಬತ್ತಿಗಳು ಬೆಳಗುತ್ತವೆ, ಒಂದಿಷ್ಟು ಕಣ್ಣೀರು ಸುರಿಸಲಾಗುತ್ತದೆ ಮತ್ತು ಸರಕಾರ ಇನ್ನಾದರೂ ನಮ್ಮನ್ನು ರಕ್ಷಿಸುತ್ತದೆ ಎಂಬ ಭರವಸೆಯೊಂದಿಗೆ ಜನ ಅದನ್ನು ಮರೆತುಬಿಡುತ್ತಾರೆ.

ಜನರು ಎಷ್ಟೆಂದು ತಾಳಿಕೊಂಡಾರು?
ಆದರೆ ಬಹುಶಃ ಜನರ ತಾಳ್ಮೆಗೂ ಮಿತಿ ಇದೆ. 26/11ರ ಮುಂಬೈ ದಾಳಿ ನಡೆದ ಬಳಿಕ ಜನರು ಗೇಟ್‌ವೇ ಆಫ್ ಇಂಡಿಯಾ ಬಳಿ ರೊಚ್ಚಿಗೆದ್ದಿದ್ದಾಗ, ರಾಜಕಾರಣಿಗಳೆಲ್ಲರೂ ಒಂದು ಕ್ಷಣ ತಣ್ಣಗಾಗಿಬಿಟ್ಟಿದ್ದರು. ಆಳುವವರ ಮೇಲೆ ಪ್ರಜೆಗಳ ಆಕ್ರೋಶದ ಬಿಸಿ ಅವರಿಗೆ ಅಂದು ಮುಟ್ಟಿತ್ತು. ತತ್ಫಲವಾಗಿ, ಇನ್ನು ಮುಂದೆ ಇಂತಹಾ ಘಟನೆಗಳು ಜರುಗದಂತೆ ಭಯೋತ್ಪಾದನಾ ನಿಗ್ರಹಕ್ಕೆ ಏನೇನೋ ಏಜೆನ್ಸಿಗಳನ್ನು ಘೋಷಿಸಿದರು. ಜನರು ಮೆತ್ತಗಾದರು. ಅದೆಷ್ಟೋ ತನಿಖಾ ಏಜೆನ್ಸಿಗಳು, ಅದೆಷ್ಟೋ ಸಭೆಗಳು, ಅದೆಷ್ಟೋ ಹಣ ಖರ್ಚು. ಆದರೆ ಮುಗ್ಧ ಜನರ ಸಾವು ಇನ್ನೂ ನಿಂತಿಲ್ಲ!

ಜನಾಕ್ರೋಶವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ 2009ರಲ್ಲಿ ಸ್ಥಾಪಿಸಲಾಗಿದ್ದ ರಾಷ್ಟ್ರೀಯ ತನಿಖಾ ಏಜೆನ್ಸಿ -ಎನ್ಐಎ ಕೂಡ ಬಲಿಷ್ಠವಾಗಿರುವಂತೆ ಕಾಣಿಸುತ್ತಿಲ್ಲ. ಬಹುಶಃ ಇಷ್ಟೆಲ್ಲಾ ತನಿಖಾ ಏಜೆನ್ಸಿಗಳಿರುವಾಗ ಅದರ ಕಾರ್ಯ ವ್ಯಾಪ್ತಿಯೇನು ಎಂಬ ಬಗ್ಗೆ ಸ್ವತಃ ಎನ್ಐಎ ಗೊಂದಲದಲ್ಲಿ ಸಿಲುಕಿದ್ದಿರಬಹುದು!

ಅಧಿಕಾರಸ್ಥರು ಇದಕ್ಕೆ ಉತ್ತರದಾಯಿಗಳು. ಹಾಗಾಗಿ ಈ ಎಲ್ಲಾ ಏಜೆನ್ಸಿಗಳನ್ನು ಸಾಕುತ್ತಿರುವ ಆಡಳಿತಾರೂಢರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುವ ಅಂಶ. ಹಾಗಿದ್ದರೆ ನಮ್ಮ ನೀತಿ-ನಿಯಮಾವಳಿಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲೇ ಎಲ್ಲೋ ಒಂದು ಕಡೆ ಕೊರತೆಯಿದೆ ಅನಿಸುತ್ತದೆ. ಈ ದೇಶಕ್ಕೆ ಅತಿದೊಡ್ಡ ಕೊರತೆಯೆಂದರೆ ಅದು ಸಮರ್ಥವಾದ ಮತ್ತು ಸಮರ್ಥವಾಗಿ ವಾದ ಮಂಡಿಸಬಲ್ಲ ಪ್ರತಿಪಕ್ಷ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕಿಂತಲೂ ಹೆಚ್ಚು ಜವಾಬ್ದಾರಿಯಿರುವುದು, ಸರಕಾರವು ಹಾದಿ ತಪ್ಪಿದಾಗಲೆಲ್ಲಾ ಅದನ್ನು ಸರಿದಾರಿಗೆ ತರುವುದು ಪ್ರತಿಪಕ್ಷದ ಹೊಣೆ. ಆದರೆ ಪ್ರತಿಪಕ್ಷಕ್ಕೆ ಬೆಲೆಯಿಲ್ಲದಂತಹಾ ಪರಿಸ್ಥಿತಿಯಿದೆ. ಉಗ್ರವಾದದ ವಿರುದ್ಧ ಒಂದು ಒಳ್ಳೆಯ ಕಟ್ಟು ನಿಟ್ಟಿನ ಕಾನೂನಿಗಾಗಿ ಒತ್ತಾಯಿಸುವ, ಸರಕಾರವನ್ನು ಚಿವುಟಿ ಎಚ್ಚರಿಸುವ, ಸರಕಾರವು ಕ್ರಮ ಕೈಗೊಳ್ಳುವವರೆಗೂ ಬಿಡದೆ ಹೋರಾಟ ಮಾಡುವ ಛಾತಿ ಎಲ್ಲೂ ಗೋಚರಿಸುತ್ತಿಲ್ಲ.

ಆಳುವವರ ಭ್ರಷ್ಟಾಚಾರದಿಂದಾಗಿ ಜನರು ತಮ್ಮ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಈ ಭ್ರಷ್ಟಾಚಾರದ ಹೆಚ್ಚಿದ ಫಲವಾಗಿಯೇ ಭಯೋತ್ಪಾದನೆ ಎಂಬುದು ಇಷ್ಟೊಂದು ಸುಲಭವಾಗಿ ದೇಶವನ್ನು ನುಂಗುತ್ತಿದ್ದು, ಜನ ಸಾಮಾನ್ಯರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಹಣವೂ ಇಲ್ಲ, ಪ್ರಾಣವೂ ಇಲ್ಲದಂತಾಗುತ್ತಿದೆ. ಭಯೋತ್ಪಾದಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಅವರಿಗೆ ಎಚ್ಚರಿಕೆ ನೀಡುವಂತೆ ಸ್ವಯಂ ಆಗಿ ತಾನೇ ಎಚ್ಚೆತ್ತುಕೊಳ್ಳಲು ಈ ಸರಕಾರಕ್ಕೆ ಅದೆಷ್ಟು ಬಾಂಬ್ ಸ್ಫೋಟಗಳು, ಜೀವ ಬಲಿಗಳು ಬೇಕೋ ಎಂಬ ಜನ ಸಾಮಾನ್ಯನ ಆತಂಕದ ಧ್ವನಿ, ಕಸಬ್‌ನಂತಹಾ ಹಂತಕರಿಗೆ ಅಷ್ಟು ಭದ್ರತೆ ನೀಡಲಾಗುತ್ತದೆ, ನಮಗೇಕಿಲ್ಲ ಎಂಬ ಪ್ರಜೆಗಳ ಹಪಹಪಿಕೆ, ಭ್ರಷ್ಟಾಚಾರದಲ್ಲಿ ಹಾಗೂ ಭಯೋತ್ಪಾದನೆಗೆ ಸುಲಭ ಗುರಿಯಾಗುವಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಮಣ್ಣು ಪಾಲಾಗುತ್ತಿದೆ ಎಂಬ ವಾಸ್ತವಾಂಶ ಅಧಿಕಾರಸ್ಥರಿಗೆ ಕೇಳಿಸೀತೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಹಿಂದಿನದು|ಮುಂದಿನದು
ಇವನ್ನೂ ಓದಿ