ಭೀಕರ ನೆರೆಯಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿ, ಲಕ್ಷಗಟ್ಟಲೆ ಮಂದಿ ನಿರಾಶ್ರಿತರಾಗಿರುವುದನ್ನು ಕಂಡು ಮಿಡಿದಿದ್ದ ಭಾರತ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಿಟ್ಟಿದ್ದ ಪ್ರಸ್ತಾಪವನ್ನು ಪಾಕಿಸ್ತಾನ ಸಾರಾಸಗಟಾಗಿ ತಿರಸ್ಕರಿಸಿದೆ.
ಭಾರತದ ಪರಿಹಾರ ಪ್ರಸ್ತಾಪವನ್ನು ಸ್ವೀಕರಿಸಿ ಎಂದು ಅಮೆರಿಕಾ ಸಲಹೆ ನೀಡಿದ ನಂತರವೂ ಪಾಕ್ ಉದ್ಧಟತನ ಮೆರೆದಿದೆ. ಭಾರತವು 24 ಕೋಟಿ ರೂಪಾಯಿಗಳ (5 ಮಿಲಿಯನ್ ಡಾಲರ್) ಆರ್ಥಿಕ ಸಹಕಾರಕ್ಕೆ ಮುಂದಾಗಿತ್ತು.
ಭಾರತವು ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಬಂದಿರುವುದನ್ನು ನಾವು ಪ್ರಶಂಸಿಸುತ್ತೇವೆ. ಆದರೆ ಪ್ರಸಕ್ತ ನಾವು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ಪ್ರಕಟಿಸಿದ್ದಾರೆ.
ಇಂದು ಅಪರಾಹ್ನವಷ್ಟೇ ಪಾಕ್ ಪ್ರಧಾನಿಗೆ ದೂರವಾಣಿ ಕರೆ ಮಾಡಿದ್ದ ಭಾರತದ ಪ್ರಧಾನಿ ಮನಮೋಹನ್ ಸಿಂಗ್, ನೆರೆಯಿಂದ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದರು. ಅಲ್ಲದೆ ಭಾರತ ನೆರವು ನೀಡಲು ಬಯಸುತ್ತಿದೆ ಎಂದು ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರಿಗೆ ನೆನಪಿಸಿದ್ದರು.
ಅದಕ್ಕೂ ಮೊದಲು ಕಳೆದ ವಾರಾಂತ್ಯದಲ್ಲಿ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರಿಗೆ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕರೆ ಮಾಡಿ, ಪ್ರಕೃತಿ ವಿಕೋಪಕ್ಕೆ ಸಂತಾಪ ವ್ಯಕ್ತಪಡಿಸಿ, ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಲು ಭಾರತ ಸಿದ್ಧವಿದೆ ಎಂದು ಹೇಳಿದ್ದರು.
ಈ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪಾಕಿಸ್ತಾನ ಹೇಳಿತ್ತು. ಇತರ ರಾಷ್ಟ್ರಗಳಿಂದ ಪರಿಹಾರದ ಹಣವನ್ನು ಸ್ವೀಕರಿಸಿದರೂ, ಭಾರತದ ಪರಿಹಾರ ಸ್ವೀಕರಿಸುವ ನಿರ್ಧಾರದ ವಿಳಂಬಕ್ಕೆ, ನಮ್ಮ ನಡುವಿನ ಸಂಬಂಧ ಸೂಕ್ಷ್ಮವಾದದ್ದು ಎಂದು ಪಾಕಿಸ್ತಾನ ಹೇಳಿತ್ತು.
ಪಾಕ್ ವಿದೇಶಾಂಗ ಸಚಿವ ಪ್ರಸಕ್ತ ಅಮೆರಿಕಾ ಪ್ರವಾಸದಲ್ಲಿದ್ದು, ನಿನ್ನೆಯಷ್ಟೇ ಭಾರತದ ನೆರೆ ಸಹಾಯ ಪ್ರಸ್ತಾಪಕ್ಕೆ ಧನ್ಯವಾದ ಸಲ್ಲಿಸಿದ್ದರು. ಅದರ ಬೆನ್ನಿಗೆ ಪ್ರಸ್ತಾಪವನ್ನು ತಿರಸ್ಕರಿಸಲಾಗಿದೆ.