ತನ್ನದೂ ಸಹಿತ ಹದಿನೈದು ಪ್ರತಿಮೆಗಳನ್ನು ಉತ್ತರ ಪ್ರದೇಶದಲ್ಲಿ ತರಾತುರಿಯಲ್ಲಿ ಅನಾವರಣಗೊಳಿಸಿ ಇಡೀ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಇದೀಗ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗ್ರಾಸವಾಗಿದ್ದು, ತಾನು ಅಧಿಕಾರಕ್ಕೆ ಬಂದರೆ ಈ ಪ್ರತಿಮೆಗಳ ಮೇಲೆಲ್ಲಾ ಬುಲ್‌ಡೋಜರ್ ಹರಿಸಿ ಧ್ವಂಸಗೊಳಿಸುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಶುಕ್ರವಾರ ಘೋಷಿಸಿದ್ದಾರೆ.ಇಷ್ಟೊಂದು ಪ್ರಮಾಣದಲ್ಲಿ ಪ್ರತಿಮೆಗಳನ್ನು ಸ್ಥಾಪಿಸಲು ಹಣವೆಲ್ಲಿಂದ ಬಂತು ಎಂಬ ಬಗ್ಗೆ ತನಿಖೆಯಾಗಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ. ಹಿರಿಯ ಮುಖಂಡ, ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ಮಾತನಾಡಿ, ಮಾಯಾವತಿಯನ್ನು ಜನರು ಆರಿಸಿದ್ದು ಉತ್ತರ ಪ್ರದೇಶದ ಜನರ ಕಲ್ಯಾಣಕ್ಕೋಸ್ಕರ ಮತ್ತು ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಕ್ಕಾಗಿ. ಅದರ ಬಗ್ಗೆ ಗಮನ ಹರಿಸುವ ಬದಲು, ಆಕೆ ಸಾರ್ವಜನಿಕ ಹಣವನ್ನು ಯದ್ವಾತದ್ವಾ ಖರ್ಚು ಮಾಡುತ್ತಿದ್ದಾರೆ. ಆಕೆಯ ವಿರುದ್ಧ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಜುಲೈ 3ರಂದು ವಿಚಾರಣೆಗೆ ಬರಲಿದ್ದು, ಗಮನ ಬೇರೆಡೆ ಸೆಳೆಯುವುದಕ್ಕಾಗಿಯೇ ಆಕೆ ಈ ತರಾತುರಿಯ ಕ್ರಮ ಕೈಗೊಂಡಿದ್ದಾರೆ ಎಂದರು.ರಾಜ್ಯದ ಜನತೆ ಆಕೆಯನ್ನು ಕ್ಷಮಿಸಲಾರರು. 2012ರ ವಿಧಾನಸಭಾ ಚುನಾವಣೆಗಳಲ್ಲಿ ಬಿಎಸ್ಪಿ ಸರ್ವನಾಶವಾಗಲಿದೆ ಎಂದೂ ಅವರು ಹೇಳಿದ್ದಾರೆ.ಬಿಎಸ್ಪಿಯ ಬದ್ಧ ವಿರೋಧಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಪ್ರತಿಕ್ರಿಯೆ ನೀಡಿ, ತಾನು ಅಧಿಕಾರಕ್ಕೆ ಬಂದಲ್ಲಿ, ಎಲ್ಲ ಪ್ರತಿಮೆಗಳನ್ನೂ ಧ್ವಂಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.ಗುರುವಾರ ಮಾಯಾವತಿ ಅವರು ನಿಗದಿತ ದಿನಕ್ಕೆ ಎಂಟು ದಿನಗಳ ಮೊದಲೇ ತರಾತುರಿಯಲ್ಲಿ 15 ಪ್ರತಿಮೆಗಳನ್ನು ಅನಾವರಣಗೊಳಿಸಿದ್ದರು. ವಾಸ್ತವವಾಗಿ ಜುಲೈ 3ಕ್ಕೆ 40 ಪ್ರತಿಮೆಗಳು, ಸ್ಮಾರಕಗಳ ಉದ್ಘಾಟನೆಗೆ ದಿನ ನಿಗದಿಯಾಗಿತ್ತು. ಆದರೆ, ದೆಹಲಿಯ ವಕೀಲ ರವಿಕಾಂತ್ ಅವರು ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ, ಆಕೆಯ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮಗಳಿಗೆ ತಡೆಯೊಡ್ಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ಗುರುವಾರ ರಾತ್ರಿಯೇ ಕೆಲವನ್ನು ಅನಾವರಣಗೊಳಿಸಿಬಿಟ್ಟಿದ್ದರು.ಹಿಂದಿನ ವರದಿ:ಪ್ರತಿಮಾ ಪ್ರಿಯೆ ಮಾಯೆ: ಬೊಕ್ಕಸಕ್ಕೆ ಕೋಟಿ ಕೋಟಿ ಕನ್ನಮಾಯಾ ಕರಾಮತ್ತು: ರಾತೋರಾತ್ರಿ ಪ್ರತಿಮೆ ಅನಾವರಣ |