ಪ್ರತಿಮೆ ಸ್ಥಾಪನಾ ಅಭಿಯಾನ ನಡೆಸಿದಂತೆ ತೋರುತ್ತಿರುವ ಪ್ರತಿಮಾ-ಪ್ರಿಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ತನ್ನದೇ ಆರು ಸೇರಿದಂತೆ ಒಟ್ಟು 40 ಪ್ರತಿಮೆಗಳನ್ನು ರಾಜ್ಯದ ವಿವಿಧೆಡೆ ಜುಲೈ 3ರಂದು ಅನಾವರಣಗೊಳಿಸಲಿದ್ದಾರೆ. ರಾಜ್ಯದ ಖಜಾನೆಗೆ ಭಾರೀ ರಂಧ್ರ ಕೊರೆಯಬಹುದಾದ ಈ ಯೋಜನೆಗಳೊಂದಿಗೆ, ಕಾನ್ಶಿರಾಂ ಸ್ಮಾರಕ ಮತ್ತು ಗೌತಮ ಬುದ್ಧಸ್ಥಳಗಳನ್ನೂ ಉದ್ಘಾಟಿಸಲಾಗುತ್ತದೆ.
ಲಖ್ನೋ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ದೊರೆತ ಉತ್ತರ ಪ್ರಕಾರ, ಲಖ್ನೋದ ವಿವಿಧೆಡೆ ನಿರ್ಮಿಸಲಾಗಿದ್ದ ಕಾನ್ಶಿರಾಂ ಮತ್ತು ಮಾಯಾವತಿ ಪ್ರತಿಮೆಗಳಿಗೆ 6.68 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಅಂತೆಯೇ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಸ್ಥಾಪಿಸಲಾಗಿದ್ದ 60 ಅಮೃತಶಿಲಾ ಆನೆ (ಮಾಯಾವತಿ ಪಕ್ಷ ಬಿಎಸ್ಪಿ ಚಿಹ್ನೆ)ಯ ವಿಗ್ರಹಗಳಿಗೆ ರಾಜ್ಯ ಖಜಾನೆಯಿಂದ 52 ಕೋಟಿ ರೂಪಾಯಿ ವೆಚ್ಚವಾಗಿದೆ!
ಉತ್ತರ ಪ್ರದೇಶದ ಸರಕಾರವು ಬಜೆಟ್‌ನಲ್ಲಿ ಇದಕ್ಕಾಗಿ ಮೀಸಲಾಗಿಟ್ಟ ನಿಧಿಯನ್ನು ಗಣನೆಗೆ ತೆಗೆದುಕೊಂಡರೆ, ಈಗ ಆಗಿರುವ ವೆಚ್ಚವೆಲ್ಲಾ ನಗಣ್ಯ. ಉತ್ತರ ಪ್ರದೇಶ ಸಾಂಸ್ಕೃತಿಕ ಇಲಾಖೆಯ 2009-10 ಬಜೆಟ್‌ನಲ್ಲಿ, ಹಿಂದಿನ ಹಣಕಾಸು ವರ್ಷದಲ್ಲಿ ಇಲಾಖೆಯು 'ಮಹಾನ್ ನಾಯಕರ' ಪ್ರತಿಮೆಗಳನ್ನು ಸ್ಥಾಪಿಸುವುದಕ್ಕೆ 194 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು ಮತ್ತು ಅದನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಲಾಗಿದೆ!
ಬಡವರ, ದಲಿತರ ಉದ್ಧಾರಕ್ಕೆ ಈ ಪ್ರಮಾಣದ ಹಣ ಬಳಸುವ ಬದಲು ಬಿಳಿಯಾನೆ ಸಾಕೋದೆಂದರೆ ಇದೇ ಇರಬಹುದೇ? |