ಅಹಮದಾಬಾದ್, ಮಂಗಳವಾರ, 8 ಸೆಪ್ಟೆಂಬರ್ 2009( 18:10 IST )
ಹದಿಹರೆಯದ ತರುಣಿ ಇಶ್ರತ್ ಜಹಾನ್ ಎಂಬ ವಿದ್ಯಾರ್ಥಿನಿ ಸೇರಿದಂತೆ ನಾಲ್ವರ ಮೇಲೆ ಗುಜರಾತ್ ಸರ್ಕಾರ ನಡೆಸಿರುವ ಎನ್‌ಕೌಂಟರ್ ನಕಲಿ ಎಂಬುದಾಗಿ ನ್ಯಾಯಾಧೀಶ ತಮಂಗ್ ಅವರು ನೀಡಿರುವ ವರದಿಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ.
"ನ್ಯಾಯಾಧೀಶ ತಮಂಗ್ ಅವರ ವರದಿಯು ಅಸಿಂಧುವಾಗಿದ್ದು, ಇದರ ವಿರುದ್ಧ ಗುಜರಾತ್ ಸರ್ಕಾರ ಮೇಲ್ಮನವಿ ಸಲ್ಲಿಸಲಿದೆ" ಎಂಬುದಾಗಿ ಗುಜರಾತ್ ಸರ್ಕಾರದ ವಕ್ತಾರ ಜೈ ನಾರಾಯಣ್ ವ್ಯಾಸ್ ಹೇಳಿದ್ದಾರೆ. 2004ರಲ್ಲಿ ನಡೆಸಿದ್ದ ಎನ್‌ಕೌಂಟರ್ ಖೊಟ್ಟಿಯಾಗಿರಲಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.
ಗುಜರಾತ್ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡದಂತೆ ವರದಿಯನ್ನು ಅವಸರದಿಂದ ತಯಾರಿಸಲಾಗಿದೆ ಎಂದು ಅವರು ದೂರಿದರು. ಇದು ಕಾನೂನಿನಲ್ಲಿ ಕೆಟ್ಟದ್ದು ಎಂದು ಹೇಳಿರುವ ಅವರು ಅಪರಾಧಿಗಳಿಗೆ ತಮ್ಮ ನಿಲುವನ್ನು ವಿವರಿಸಲು ಅವಕಾಶವನ್ನೇ ನೀಡಲಾಗಿಲ್ಲ ಎಂದು ದೂರಿದ್ದಾರೆ.
2009ರ ನವೆಂಬರ್ ತಿಂಗಳೊಳಗಾಗಿ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ತಿಳಿಸಲಾಗಿದೆ. ಆದರೆ ಸಮಿತಿಯ ನೇಮಕವಾಗಿ ತಿಂಗಳೊಳಗೆಯೇ ಅದು ತನ್ನ ವರದಿಯನ್ನು ಸಲ್ಲಿಸಿದೆ ಎಂಬುದಾಗಿ ವ್ಯಾಸ್ ಆಪಾದಿಸಿದ್ದಾರೆ.