ಅಹಮದಾಬಾದ್, ಮಂಗಳವಾರ, 8 ಸೆಪ್ಟೆಂಬರ್ 2009( 11:22 IST )
ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕೊಲೆಗೆ ಸಂಚು ಮಾಡಿದ್ದರು ಎಂಬ ಶಂಕೆಯ ಮೇಲೆ ಓರ್ವ ಕಾಲೇಜು ವಿದ್ಯಾರ್ಥಿನಿ ಹಾಗೂ ಇತರ ಮೂವರ ಮೇಲೆ ನಡೆಸಿರುವ ಎನ್‌ಕೌಂಟರ್ ಖೊಟ್ಟಿ ಎಂಬುದಾಗಿ ನ್ಯಾಯಾಂಗ ತನಿಖೆ ಹೇಳಿದ್ದು, ಇದರಿಂದ ಗುಜರಾತ್ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ ಉಂಟಾಗಿದೆ.
ಪ್ರಕರಣದ ತನಿಖೆ ನಡೆಸಿದ್ದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಪಿ. ತಮಂಗ ಅವರು ಮೆಟ್ರೋಪಾಲಿಟನ್ ಕೋರ್ಟಿನಲ್ಲಿ ಸೋಮವಾರ ಈ ವರದಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಈ ನಾಲ್ವರಿಗೆ ಪಾಕಿಸ್ತಾನ ಮೂಲದ ಲಷ್ಕರ್-ಇ-ತೋಯ್ಬಾ ಸಂಘಟನೆಯೊಂದಿಗೆ ನಂಟಿದೆ ಎಂದು ಶಂಕಿಸಿ ಅವರುಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ವರದಿಯಲ್ಲಿ ಹೇಳಿದ್ದಾರೆ.
ಈ ಮೂವರಿಗೆ ಲಷ್ಕರೆ ಸಂಘಟನೆ ಜತೆಗೆ ಸಂಪರ್ಕ ಇರಲಿಲ್ಲ ಎಂದು ತಮಂಗ್ ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಮುಂಬೈ ಮೂಲದ ಹುಡುಗಿ ಇಶ್ರತ್ ಜಹಾನ್ ಹಾಗೂ ಇತರ ಮೂವರಾದ ಜಾವೇದ್ ಗುಲಾಂ ಶೇಕ್ ಅಲಿಯಾಸ್ ಪ್ರಾಣೇಶ್ ಕುಮಾರ್ ಪಿಳ್ಳೈ, ಅಜ್ಮದ್ ಅಲಿ ಅಲಿಯಾಸ್ ರಾಜ್‌ಕುಮಾರ್ ಅಕ್ಬರ್ ಅಲಿ ರಾಣಾ ಮತ್ತು ಜೈಸನ್ ಜೋಹರ್ ಅಬ್ದುಲ್ ಗಣಿ ಎಂಬವರನ್ನು ಕ್ರೈಂ ಬ್ರಾಂಚ್(ಡಿಸಿಬಿ) ಅಧಿಕಾರಿಗಳು ಅಹಮದಾಬಾದ್‌ನಲ್ಲಿ 2004ರ ಜೂನ್ 15ರಂದು ಗುಂಡಿಕ್ಕಿ ಕೊಂದಿದ್ದರು.
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಿ.ಜಿ. ವಂಜಾರ ಅವರು ಆಗ ಡಿಸಿಬಿಯ ಮುಖ್ಯಸ್ಥರಾಗಿದ್ದರು. ವಂಜಾರ ಈಗ ಜೈಲಿನಲ್ಲಿದ್ದಾರೆ. ಈ ನಾಲ್ವರಿಗೆ ಲಷ್ಕರೆ ಸಂಪರ್ಕವಿದೆ ಮತ್ತು ಅವರೆಲ್ಲ ಮೋದಿಯ ಹತ್ಯಾ ಸಂಚು ಹೂಡಿದ್ದರು ಎಂದು ವಂಜಾರ ಆರೋಪಿಸಿದ್ದರು.
ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಕಳೆದ ತಿಂಗಳು ಗುಜರಾತ್ ಹೈ ಕೋರ್ಚ್ ಎಡಿಜಿಪಿ ರ‌್ಯಾಂಕಿನ ಅಧಿಕಾರಿಯ ನೇತೃತ್ವದ ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಿತ್ತು. ಮೃತ ಇಶ್ರತ್‌ಳ ತಾಯಿ ಶಮಿನ ಅವರು ತನ್ನ ಪುತ್ರಿಯನ್ನು ಗುಜರಾತ್ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದಾರೆ ಎಂಬುದಾಗಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸಮಿತಿಯನ್ನು ನೇಮಿಸಿದೆ.
ನರೇಂದ್ರ ಮೋದಿ ಆಡಳಿತದಲ್ಲಿ ಗುಜರಾತ್ ಪೊಲೀಸರು ಒಳಗೊಂಡಿರುವ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಮರು ತನಿಖೆಗೆ ಆದೇಶಿಸಿರುವ ಎರಡನೆ ಪ್ರಕರಣ ಇದಾಗಿದೆ. ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ತನಿಖೆಗೆ ಆದೇಶಿಸಿ ಆತನ ಮನೆಯವರಿಗೆ ಪರಿಹಾರ ನೀಡಬೇಕು ಎಂಬುದಾಗಿ ನ್ಯಾಯಾಲಯ ಆದೇಶಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.