ಐಷಾರಾಮಿ ಹೋಟೇಲುಗಳಿಂದ ತಮ್ಮ ವಾಸ್ತವ್ಯವನ್ನು ಸರ್ಕಾರಿ ವಸತಿಗೆ ಬದಲಿಸಬೇಕು ಎಂಬುದಾಗಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಹೇಳಿರುವುದಕ್ಕೆ, ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ಸೆಂ ಕೃಷ್ಣ, ಇದು ತನ್ನ ಖಾಸಗಿ ವ್ಯವಸ್ಥೆಯಾಗಿದ್ದು, ಸರ್ಕಾರಿ ವಸತಿಯ ನವೀಕರಣ ಕಾರ್ಯ ಮುಗಿಯುವ ತನಕ ಇಲ್ಲಿಯೇ ಮುಂದುವರಿಯುವುದಾಗಿ ಹೇಳಿದ್ದಾರೆ.
"ನನಗೆ ಮಂಜೂರಾಗಿರುವ ನಿವಾಸದ ರಿಪೇರಿ ಕೆಲಸ ನಡೆಯುತ್ತಿದ್ದು, ನಾನು ದೆಹಲಿಯಲ್ಲಿ ತಂಗಲು ಖಾಸಗಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ" ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.
ಇದು ನನ್ನ ಹಾಗೂ ಹೋಟೇಲ್ ನಡುವಿನ ವಿಚಾರವಾಗಿದ್ದು, ತನಗೆ ಒದಗಿಸಿರುವ ನಿವಾಸ ವಾಸಯೋಗ್ಯವಾಗುವ ತನಕ ತಾನು ಈ ವ್ಯವಸ್ಥೆಯಲ್ಲೇ ಮುಂದುವರಿಯುವುದಾಗಿ ಕೃಷ್ಣ ಹೇಳಿದ್ದಾರೆ.
ವಿದೇಶಾಂಗ ಇಲಾಖೆಯ ಸಚಿವರಾದ ಎಸ್ಸೆಂ ಕೃಷ್ಣ, ಹಾಗೂ ಶಶಿ ಥರೂರ್ ಅವರುಗಳು ಐಷಾರಾಮಿ ಹೋಟೇಲ್‌ಗಳಲ್ಲಿ ತಂಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಣಬ್ ಮುಖರ್ಜಿ, ಹೋಟೇಲ್ ತ್ಯಜಿಸಿ ಅವರುಗಳಿಗೆ ಒದಗಿಸಲಾಗಿರುವ ಸರ್ಕಾರಿ ನಿವಾಸಗಳಿಗೆ ತೆರಳಬೇಕು ಎಂದು ಹೇಳಿದ್ದರು.