ಒಂದೆಡೆ ಖರ್ಚು ಕಮ್ಮಿ ಮಾಡಲು ಸರ್ಕಾರ ಕ್ರಮಕೈಗೊಳ್ಳುತ್ತಿದ್ದರೆ ಇತ್ತ ಕೆಲವು ವಿಲಾಸೀ ಮಂತ್ರಿಗಳು ಪಂಚತಾರ ಹೋಟೇಲಿನಲ್ಲಿ ತಂಗಿ ದಿನ ಒಂದರ ಒಂದು ಲಕ್ಷರೂಪಾಯಿಗೂ ಅಧಿಕ ವ್ಯಯಿಸುತ್ತಿರುವ ಕ್ರಮದಿಂದ ತೀವ್ರ ಮುಜುಗರಗೊಂಡಿರುವ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಪಂಚತಾರ ಹೋಟೇಲ್ ಬಿಟ್ಟು ಅಧಿಕೃತ ನಿವಾಸಕ್ಕೆ ತೆರಳುವಂತೆ ಅವರುಗಳಿಗೆ ತಾಕೀತು ಮಾಡಿದ್ದಾರೆ.
ಶೋಕಿವಾಲರೆಂದೇ ಕರೆಸಿಕೊಂಡಿರುವ ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಹಾಗೂ ಅವರ ಸಹಾಯಕ ಸಚಿವ ಶಶಿ ಥರೂರ್ ಅವರುಗಳು ಪಂಚತಾರಾ ಹೋಟೇಲುಗಳಲ್ಲಿ ಕಳೆದ ಮೂರು ತಿಂಗಳಿಂದ ತಂಗಿದ್ದು, ಇದು ಪ್ರಣಬ್ ಅವರ ಕಣ್ಣು ಕೆಂಪಾಗಿಸಿದೆ. ಈ ಇಬ್ಬರೂ ತಮ್ಮ ಪಂಚತಾರ ಸೂಟ್‌ಗಳನ್ನು ತ್ಯಜಿಸಿ ಸರ್ಕಾರಿ ಅತಿಥಿಗೃಹಗಳಿಗೆ ತೆರಳುವಂತೆ ತಾಕೀತು ಮಾಡಿದ್ದಾರೆ.
ದೇಶವು ಅರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಈ ಇಬ್ಬರು ಹೈ ಪ್ರೊಫೈಲ್ ಸಚಿವರುಗಳು ಸರ್ಕಾರ ಒದಗಿಸಿರುವ ಬಂಗ್ಲೆಗಳಿಗೆ ಬದಲಾಗಿ ದುಬಾರಿ ಹೋಟೇಲ್‌ಗಳಲ್ಲಿ ತಂಗಿದ್ದಾರೆ ಎಂಬ ಪತ್ರಿಕಾ ವರದಿಯ ಹಿನ್ನೆಲೆಯಲ್ಲಿ ಇವರು ತಾವು ತಂಗಿರುವ ಹೋಟೇಲ್ ತ್ಯಜಿಸಬೇಕು ಎಂದು ಪ್ರಣಬ್ ಬಹಿರಂಗವಾಗಿ ಹೇಳಿದ್ದಾರೆ.
"ಇಬ್ಬರು ಸಚಿವರಿಗೆ ಹೋಟೇಲು ಕೊಠಡಿಗಳನ್ನು ತ್ಯಜಿಸಿ ಅವರಿಗೆ ಸಂಬಂಧಿಸಿದ ಭವನಗಳಿಗೆ ತೆರಳಲು ಸೂಚಿಸಲಾಗಿದೆ" ಎಂಬುದಾಗಿ ಮುಖರ್ಜಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಈ ಇಬ್ಬರೂ ವಿದೇಶಾಂಗ ಇಲಾಖಾ ಸಚಿವರಾಗಿದ್ದು, ಹೈದರಾಬಾದ್ ಹೌಸ್‌ನಲ್ಲಿ ಅವರಿಬ್ಬರಿಗೆ ಗೆಸ್ಟ್ ಬ್ಲಾಕ್ ಇದೆ ಎಂದು ಪ್ರಣಬ್ ತಿಳಿಸಿದರು. ಇಂದಿನಿಂದಲೇ ಹೋಟೇಲ್ ಖಾಲಿ ಮಾಡುವುದಾಗಿ ಇಬ್ಬರೂ ಒಪ್ಪಿದ್ದಾರೆ ಎಂದೂ ಅವರು ಹೇಳಿದ್ದಾರೆ.
ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿದ ಬಳಿಕ ಕಳೆದ ಮೂರು ತಿಂಗಳಿಂದ ಎಸ್.ಎಂ. ಕೃಷ್ಣ ಅವರು ಐಟಿಸಿ ಮೌರ್ಯ ಶೆರ್ಟನ್ ಹೋಟೇಲಿನ ಪ್ರೆಸಿಡೆನ್ಶಿಯಲ್ ಸೂಟ್‌ನಲ್ಲಿ ತಂಗಿದ್ದಾರೆ. ಇಂತಹ ಸೂಟ್ ಕೊಠಡಿಗೆ ಮೌರ್ಯ ಶೆರ್ಟನ್ ಹೋಟೇಲ್ ಒಂದು ರಾತ್ರಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ದರ ವಿಧಿಸುತ್ತದೆ. ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾದ ಶಶಿ ಥರೂರ್ ಅವರು ಮಾನ್ ಸಿಂಗ್ ರಸ್ತೆಯಲ್ಲಿರುವ ಹೋಟೇಲ್ ತಾಜ್ ಮಹಲ್‌ನಲ್ಲಿ ತಂಗಿದ್ದಾರೆ.
ಈ ಇಬ್ಬರೂ ತಮ್ಮ ಆಸ್ತಿ 10 ಕೋಟಿಗೂ ಅಧಿಕವಿದೆ ಎಂಬುದಾಗಿ ಚುನಾವಣೆ ವೇಳೆ ಘೋಷಿಸಿದ್ದು, ತಮ್ಮ ಹೋಟೇಲು ಬಿಲ್ಲುಗಳನ್ನು ತಾವೇ ಪಾವತಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರೂ, ಅವರು ತಮ್ಮ ವಾಸ್ತವ್ಯಕ್ಕಾಗಿ ಎಷ್ಟು ಪಾವತಿ ಮಾಡುತ್ತಿದ್ದಾರೆ ಎಂಬ ವಿಚಾರ ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.
ತಮಗೆ ಮಂಜೂರಾಗಿರುವ ಸರ್ಕಾರಿ ಬಂಗಲೆಗಳ ನವೀಕರಣ ಕಾರ್ಯ ನಡೆಯುತ್ತಿದ್ದು ಅದು ಪೂರ್ಣಗೊಳ್ಳದಿರುವ ಹಿನ್ನೆಲೆಯಲ್ಲಿ ತಾವು ಹೋಟೇಲುಗಳಲ್ಲಿ ತಂಗಿದ್ದೇವೆ ಎಂದು ಇಬ್ಬರೂ ಸಚಿವರು ಸಬೂಬು ನೀಡಿದ್ದಾರೆ.
ಎಲ್ಲಾ ಕಾಂಗ್ರೆಸ್ ಸಚಿವರು ದುಬಾರಿ ವೆಚ್ಚವನ್ನು ಕಡಿತಗೊಳಿಸಿ ಸರಳ ಜೀವನ ನಡೆಸಬೇಕು ಮತ್ತು ಸಾರ್ವಜನಿಕ ಜೀವನದಲ್ಲಿರುವವರು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಚಿವರು ಈ ರೀತಿ ದುಬಾರಿ ಹೋಟೇಲುಗಳಲ್ಲಿ ತಂಗಿರುವುದು ಕಾಂಗ್ರೆಸ್‌ಗೆ ಮುಖಭಂಗ ಉಂಟುಮಾಡಿದೆ.
ಶಶಿಥರೂರ್ ಪ್ರತಿಕ್ರಿಯೆ: ಈ ಮಧ್ಯೆ ದುಬಾರಿ ಹೋಟೇಲ್‌ಗಳಲ್ಲಿ ತಂಗಿರುವ ವಿಚಾರದ ವರದಿಗಳು ಪ್ರಕಟಗೊಳ್ಳುತ್ತಿರುವಂತೆ ಇದಕ್ಕೆ ಪ್ರತಿಕ್ರಿಯಿಸಿರುವ ಥರೂರ್, ತಾನು ಸೆಪ್ಟೆಂಬರ್ ಒಂದರಂದೇ ಹೋಟೇಲ್ ಕೊಠಡಿ ತೆರವು ಗೊಳಿಸಿರುವುದಾಗಿ ಹೇಳಿದ್ದಾರೆ.