ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೊಹ್ರಾಬುದ್ದೀನ್ ಎನ್‌ಕೌಂಟರ್ ವೇಳೆ ಆಂಧ್ರ ಪೊಲೀಸರು ಗುಜರಾತ್ ಪೊಲೀಸರಿಗೆ ಸಹಾಯ ಮಾಡಲು ಕಾರಣವೇನು: ಸು.ಕೋ ಪ್ರಶ್ನೆ (Supreme Court | Sohrabuddin Sheikh | Andhra Police | Gujarat)
ಸೊಹ್ರಾಬುದ್ದೀನ್ ಎನ್‌ಕೌಂಟರ್ ವೇಳೆ ಆಂಧ್ರ ಪೊಲೀಸರು ಗುಜರಾತ್ ಪೊಲೀಸರಿಗೆ ಸಹಾಯ ಮಾಡಲು ಕಾರಣವೇನು: ಸು.ಕೋ ಪ್ರಶ್ನೆ
ನವದೆಹಲಿ, ಗುರುವಾರ, 17 ಸೆಪ್ಟೆಂಬರ್ 2009( 09:36 IST )
ಆರೋಪಿತ ಗ್ಯಾಂಗ್‌ಸ್ಟರ್ ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್ ಬಿ ಹಾಗೂ ಇನ್ನೊಬ್ಬ ವ್ಯಕ್ತಿಯ 'ನಕಲಿ' ಎನ್‌ಕೌಂಟರ್ ವೇಳೆಗೆ ಆಂಧ್ರ ಪೊಲೀಸರು ಗುಜರಾತ್ ಪೊಲೀಸರಿಗೆ ಸಹಾಯ ಹಸ್ತ ನೀಡಿರುವ ಹಿಂದಿನ ಕಾರಣವೇನಿರಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ತಿಳಿಯಬಯಸಿದೆ.
"ಈ ಎನ್‌ಕೌಂಟರನ್ನು ಅಧಿಕೃತವಾಗಿ ಮಾಡಿಲ್ಲ ಎಂಬುದಾದರೆ, ಆಂಧ್ರಪ್ರದೇಶದ ಪೊಲೀಸರು ಈ ಸಂಚಿನಲ್ಲಿ ಭಾಗಿಯಾಗಲು ಉತ್ತೇಜನವಾದರೂ ಏನಿರಬಹುದು" ಎಂಬುದಾಗಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಆಫ್ತಾಬ್ ಆಲಂ ಅವರನ್ನೊಳಗೊಂಡ ವಿಭಾಗೀಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ(ನ್ಯಾಯಾಲಯ ಸ್ನೇಹಿ) ಆಗಿರುವ ಸಾಲಿಸಿಟರ್ ಗೋಪಾಲ್ ಸುಬ್ರಮಣಿಯಂ ಅವರನ್ನು ಪ್ರಶ್ನಿಸಿದೆ.
ನಕಲಿ ಎಂದು ಆಪಾದಿಸಲಾಗುತ್ತಿರುವ ಈ ಎನ್‌ಕೌಂಟರ್‌ಗೆ ಆಂಧ್ರಪ್ರದೇಶ ಪೊಲೀಸರು ಬೆಂಬಲ ನೀಡಿದ್ದರು ಎಂಬುದಾಗಿ ಸುಬ್ರಮಣಿಯಂ ನ್ಯಾಯಾಲಯದಲ್ಲಿ ಹೇಳಿರುವುದಕ್ಕೆ ಪ್ರತಿಯಾಗಿ ನ್ಯಾಯಪೀಠ ಈ ಪ್ರಶ್ನೆ ಎಸೆದಿದೆ.
ಎನ್‌ಕೌಂಟರ್ ನಡೆದ ವೇಳೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಗುಜರಾತಿನಲ್ಲಿ ಬಿಜೆಪಿ ಸರ್ಕಾರ ಆಡಳಿತವಿದ್ದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ಪ್ರಶ್ನೆ ಮಹತ್ವ ಪಡೆದುಕೊಂಡಿದೆ. 2007ರಲ್ಲಿ ನಡೆಸಲಾಗಿದ್ದ ಈ ವಿವಾದಿತ ಎನ್‌ಕೌಂಟರ್‌ನಲ್ಲಿ ಸೊಹ್ರಾಬುದ್ದೀನ್ ಹಾಗೂ ಇನ್ನಿಬ್ಬರು ಹತರಾಗಿದ್ದರು. ಪೊಲೀಸರು ನಡೆಸಿರುವುದು ನಕಲಿ ಎನ್‌ಕೌಂಟರ್ ಎಂಬುದಾಗಿ ಆರೋಪಿಸಲಾಗಿದ್ದು, ಈ ಪ್ರಕರಣವು ತೀವ್ರ ವಿವಾದಕ್ಕೆ ನಾಂದಿಯಾಗಿತ್ತು.