ಗುಜರಾತ್ ಪೊಲೀಸರ ಗುಂಡಿಗಾಹುತಿಯಾಗಿ ಸಾವನ್ನಪ್ಪಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಎನ್ನಲಾಗಿದ್ದ ಸೊಹ್ರಾಬುದ್ದೀನ್ ಶೇಕ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಅಫ್ತಾಬ್ ಅಲಂ ಅವರನ್ನೊಳಗೊಂಡ ವಿಶೇಷ ಪೀಠವು ಯಾವ ಮೊತ್ತವನ್ನು ನೀಡಬೇಕು ಎಂಬ ನಿರ್ಧಾರದಿಂದ ಹಿಂತೆಗೆದಿದೆ. ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ ಹಿರಿಯ ವಹಕೀಲ ಮುಕುಲ್ ರೋಹಟ್ಗಿ ಅವರು ಪರಿಹಾರದ ಪ್ರಮಾಣದ ನಿರ್ಧಾರವನ್ನು ರಾಜ್ಯದ ವಿವೇಚನೆಗೆ ಬಿಡಬೇಕು ಎಂದು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ವಿಚಾರವನ್ನು ಸರ್ಕಾರಕ್ಕೆ ಬಿಟ್ಟಿದೆ.
ಇದಲ್ಲದೆ, ಈ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಪ್ರಸಕ್ತ ಗೋಧ್ರಾ ನಂತರದ ಕೋಮುಗಲಭೆ ಪ್ರಕರರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಸಿಟ್)ಗೆ ವರ್ಗಾಯಿಸುವುದನ್ನೂ ನ್ಯಾಯಾಲಯ ಪರಿಗಣಿಸುವುದಾಗಿ ಹೇಳಿದೆ.
2007ರಲ್ಲಿ ಸೊಹ್ರಾಬುದ್ದೀನ್ ಹಾಗೂ ಇನ್ನಿಬ್ಬರು ಪೊಲೀಸರ ಎನ್‌ಕೌಂಟರ್‌ನಲ್ಲಿ ಹತರಾಗಿದ್ದರು. ಪೊಲೀಸರು ನಡೆಸಿರುವುದು ನಕಲಿ ಎನ್‌ಕೌಂಟರ್ ಎಂಬುದಾಗಿ ಈ ಪ್ರಕರಣವು ತೀವ್ರ ವಿವಾದಕ್ಕೆ ನಾಂದಿಯಾಗಿತ್ತು.