ನವದೆಹಲಿ, ಶುಕ್ರವಾರ, 18 ಸೆಪ್ಟೆಂಬರ್ 2009( 16:30 IST )
ಕಾನ್ಶೀರಾಮ್ ಸ್ಮಾರಕ ಸ್ಥಳ ಕಾಮಗಾರಿಯನ್ನು ಮುಂದುವರಿಸದಂತೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗೆ ತೀವ್ರ ಅಸಮಾಧಾನ ಸೂಚಿಸಿದ ಸುಪ್ರೀಂಕೋರ್ಟ್ ಇಂತಹ ಎಲ್ಲಾ ಚಟುವಟಿಕೆಗಳ ವಿರುದ್ಧ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಹೇಳಿದೆ.
"ಉತ್ತರ ಪ್ರದೇಶ ಸರ್ಕಾರ ಸಲ್ಲಿಸಲಾಗಿರುವ ಅಫಿದಾವಿತ್ ತೃಪ್ತಿಕರವಾಗಿಲ್ಲ" ಎಂಬುದಾಗಿ ನ್ಯಾಯಮೂರ್ತಿಗಳಾದ ಬಿ.ಎನ್. ಅಗರ್ವಾಲ್ ಹಾಗೂ ಅಫ್ತಾಬ್ ಆಲಂ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಮಧ್ಯಂತರ ಆಜ್ಞೆ ಮುಂದುವರಿಯಬೇಕೆ ಎಂಬುದನ್ನು ನಿರ್ಧರಿಸಬೇಕಾಗಿದೆ ಮತ್ತು ತನ್ನ ನಿರ್ದೇಶನದ ಬಳಿಕ ಏನಾಗಿದೆ ಎಂಬುದನ್ನು ನೋಡಬೇಕಿದೆ ಎಂಬುದಾಗಿ ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಹಲವು ವಿಚಾರಗಳು ಅಡಕವಾಗಿವೆ. ಈ ಉದ್ದೇಶಕ್ಕಾಗಿ ಸಾರ್ವಜನಿಕರ ಬೊಕ್ಕಸದಿಂದ ಇಷ್ಟೊಂದು ದೊಡ್ಡಮಟ್ಟದ ಹಣ ವಿನಿಯೋಗಿಸುವುದು ಸೂಕ್ತವೇ ಎಂಬುದನ್ನು ನೋಡಬೇಕಿದೆ. ಒಂದೊಮ್ಮೆ ಶಾಸಕಾಂಗವು ಸ್ಮಾರಕಗಳು ಹಾಗೂ ಪ್ರತಿಮೆಗಳಿಗಾಗಿ ಶೇ.80ರಷ್ಟು ವ್ಯಯಿಸಬೇಕು ಎಂಬುದಾಗಿ ತೀರ್ಮಾನಿಸಿದರೆ ಅದು ನ್ಯಾಯಸಮ್ಮತವಲ್ಲ ಎಂಬುದಾಗಿ ನ್ಯಾಯಪೀಠ ಹೇಳಿದೆ.
ಈ ಅರ್ಜಿಯಿಂದಾಗಿ ಗಂಭೀರ ಪ್ರಶ್ನೆಗಳು ಉದ್ಭವಿಸಿದ್ದು, ಸಂಪುಟ ಹಾಗೂ ಶಾಸಕಾಂಗವು ಸಂವಿಧಾನಬದ್ಧವಾಗಿ ಕಾರ್ಯಾಚರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 5ರಂದು ನಿಗದಿಪಡಿಸಲಾಗಿದ್ದು, ಪ್ರತಿವಾದಿ ಪಕ್ಷಗಳು ತಮ್ಮ ಉತ್ತರಗಳನ್ನು ಸೆಪ್ಟೆಂಬರ್ 29ರೊಳಗಾಗಿ ಸಲ್ಲಿಸಬೇಕು ಎಂದು ಹೇಳಿದೆ.
ಉತ್ತರ ಪ್ರದೇಶ ಸರ್ಕಾರವು ಗುರುವಾರ ನ್ಯಾಯಾಲಯಕ್ಕೆ ಕ್ಷಮಾಪಣೆ ಅರ್ಜಿ ಸಲ್ಲಿಸಿದೆ. ನ್ಯಾಯಾಲಯವು ಸೆಪ್ಟೆಂಬರ್ 11ರಂದು ಸಲ್ಲಿಸಿರುವ ಶೋಕಾಸ್ ನೋಟೀಸಿಗೆ ಉತ್ತರ ನೀಡಿದ್ದು, ಸುಪ್ರೀಂ ಕೋರ್ಟ್ ಮೇಲೆ ತನಗೆ ಅತೀವ ಗೌರವವಿದೆ ಎಂದು ಹೇಳಿದ್ದು, ನ್ಯಾಯಾಲಯದ ನಿರ್ದೇಶನಗಳನ್ನು ಅಕ್ಷರಶಃ ಪಾಲಿಸುವುದರಲ್ಲಿ ತನಗೆ ನಂಬುಗೆ ಇದೆ ಎಂದು ಹೇಳಿದೆ.