ಉತ್ತರ ಪ್ರದೇಶ ಸರ್ಕಾರವು ಮುಖ್ಯಮಂತ್ರಿ ಮಾಯಾವತಿ ಹಾಗೂ ಇತರ ದಲಿತ ನಾಯಕರ ಸ್ಮಾರಕ ಹಾಗೂ ಪ್ರತಿಮೆಗಳನ್ನು ನಿರ್ಮಿಸುವ ಕಾರ್ಯವನ್ನು ನಿಲ್ಲಿಸಬೇಕು ಎಂಬುದಾಗಿ ಮಂಗಳವಾರ ಸುಪ್ರೀಂಕೋರ್ಟ್ ತಾಕೀತುಮಾಡಿದೆ. ಅಲ್ಲದೆ ತೆರಿಗೆದಾರರ ಹಣವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಹೇಳಿದೆ.
"ಇಷ್ಟು ಬೃಹತ್ ಪ್ರಮಾಣದ ಹಣವನ್ನು ಹೇಗೆ ಬಳಸಲಾಗಿದೆ ಎಂಬುದಾಗಿ ಕೋರ್ಟ್ ಸರ್ಕಾರವನ್ನು ಪ್ರಶ್ನಿಸಬಹುದಾಗಿದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಬಿ.ಎನ್. ಅಗರ್ವಾಲ್ ಹಾಗೂ ಅಫ್ತಾಬ್ ಅಲಂ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ಈ ಯೋಜನೆಯಲ್ಲಿ ತೆರಿಗೆದಾರರ ಹಣವಿರುವ ಕಾರಣ ಸರ್ಕಾರವು ಮನಸೋಇಚ್ಚೆ ಇಂತಹ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಉತ್ತರಪ್ರದೇಶ ಸರ್ಕಾರವು ಮುಖ್ಯಮಂತ್ರಿ ಮಾಯಾವತಿ, ಅವರ ರಾಜಕೀಯ ಗುರು ಕಾನ್ಶೀರಾಮ್ ಹಾಗೂ ದಲಿತ ಚಳುವಳಿಯ ಆದರ್ಶನಾಯಕ ಭೀಮರಾವ್ ಅಂಬೇಡ್ಕರ್ ಅವರ 12 ಸ್ಮಾರಕಗಳು ಮತ್ತು ಬಿಎಸ್ಪಿ ಪಕ್ಷದ ಚಿನ್ನೆ ಯಾಗಿರುವ ಆನೆಗಳ ಪ್ರತಿಮೆಗಳನ್ನು ಲಕ್ನೋದಲ್ಲಿ 2,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದೆ.
ತಕ್ಷಣದಿಂದ ಯೋಜನೆ ನಿಲುಗಡೆಗೆ ಒಪ್ಪಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ಸ್ಮಾರಕಗಳ ನಿರ್ಮಾಣವನ್ನು ನಿಲ್ಲಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಬಿಎಸ್ಪಿ ನಾಯಕ ಹಾಗೂ ಹಿರಿಯ ವಕೀಲರಾಗಿರುವ ಸತೀಶ್ ಚಂದ್ರ ಮಿಶ್ರಾ ಅವರು, ಈ ಕುರಿತು ಔಪಚಾರಿಕ ಆದೇಶವನ್ನು ನೀಡುವುದು ಬೇಡ ಎಂದು ನ್ಯಾಯಾಲಯವನ್ನು ವಿನಂತಿಸಿದರು.
ರಾಜಕೀಯ ಕಾರಣಗಳಿಗಾಗಿ ಉತ್ತರ ಪ್ರದೇಶದ ಈ ಸ್ಮಾರಕ ಯೋಜನೆಯನ್ನು ವಿರೋಧಿಸಲಾಗುತ್ತಿದೆ ಎಂದು ವಾದಿಸಿದ ಅವರು ಸುಮಾರು 10,000 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾಗಿರುವ ನೆಹರೂ ಗಾಂಧಿ ಕುಟುಂಬದ ಸ್ಮಾರಕಗಳನ್ನು ಯಾರೂ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.