ಮಡ್ಗಾವ್ ಸ್ಫೋಟದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರಕರಣದ ಎರಡನೇ ಆರೋಪಿ ಯೋಗೀಶ್ ನಾಯ್ಕ್ ಸಾವನ್ನಪ್ಪಿದ್ದಾನೆ.
ಪ್ರಮುಖ ಆರೋಪಿ ಮಾಲ್ಗೊಂಡ ಪಾಟೀಲ್ ಮತ್ತು ಯೋಗೀಶ್ ಸ್ಕೂಟರ್‌ನಲ್ಲಿ ಪೂರ್ವ ನಿಗದಿತ ಸ್ಥಳದಲ್ಲಿ ಬಾಂಬ್ ಇಡಲು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದರು.
ಈ ಸಂದರ್ಭದಲ್ಲಿ ಪಾಟೀಲ್ ಸಾವನ್ನಪ್ಪಿದ್ದರೆ, ತೀವ್ರ ಗಾಯಗೊಂಡಿದ್ದ ಯೋಗೀಶ್‌ನನ್ನು ಗೋವಾ ಮೆಡಿಕಲ್ ಕಾಲೇಜ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮಂಗಳವಾರ ಮುಂಜಾನೆ 5 ಗಂಟೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಓಂಪ್ರಕಾಶ್ ಕುರ್ತಾರ್ಕರ್ ತಿಳಿಸಿದ್ದಾರೆ.
ಗೋವಾದ ಪೊಂಡಾ ನಗರದ ತಲಾವುಲಿಮ್ ಗ್ರಾಮದವನಾದ ಯೋಗೀಶ್ ಪಾಟೀಲ್‌ಗೆ ಆಪ್ತನಾಗಿದ್ದ. ಅವರಿಬ್ಬರ ಗೆಳೆತನ ಸನಾತನ ಸಂಸ್ಥೆಯ ರಾಮನೀತಿ ಆಶ್ರಮದಲ್ಲಿ ಬೆಳೆದಿತ್ತು ಎಂದು ಮೂಲಗಳು ತಿಳಿಸಿವೆ.
ಗೋವಾದ ಮಡ್ಗಾವ್ ನಗರದ ಜನ ನಿಬಿಢ ಗ್ರೇಸ್ ಚರ್ಚ್ ಸಮೀಪ ಅಕ್ಟೋಬರ್ 16ರಂದು ಈ ಪ್ರಬಲ ಸ್ಫೋಟ ಸಂಭವಿಸಿತ್ತು. ಆರಂಭಿಕ ಮಾಹಿತಿಗಳ ಪ್ರಕಾರ ಈ ಸ್ಫೋಟದ ಹಿಂದೆ ಬಲಪಂಥೀಯ ಹಿಂದೂ ಸಂಘಟನೆ ಸನಾತನ ಸಂಸ್ಥೆಯ ಕೈವಾಡವಿತ್ತೆಂದು ಹೇಳಲಾಗಿತ್ತಾದರೂ, ಇದೀಗ ಪೊಲೀಸರು ಯಾವುದೇ ಪ್ರಮುಖ ಸಾಕ್ಷ್ಯಗಳು ಲಭಿಸಿಲ್ಲ ಎಂದು ತಿಳಿಸಿದ್ದಾರೆ.
ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಜತೆ ಸನಾತನ ಸಂಸ್ಥೆ ಒಡನಾಟ ಹೊಂದಿತ್ತು ಎಂದೂ ಮೂಲಗಳು ತಿಳಿಸಿದ್ದವು. ಆದರೆ ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದ ಸನಾತನ ಸಂಸ್ಥೆ, ಆರೋಪದ ಹಿಂದೆ ಪಿತೂರಿಗಳಿವೆ ಎಂದಿತ್ತು. ಮೂರ್ತಿಭಂಗವನ್ನು ವಿರೋಧಿಸಿ ಪ್ರತಿಭಟಿಸಿದ್ದಕ್ಕೆ ಪ್ರತೀಕಾರದ ರೂಪದಲ್ಲಿ ಸಂಘಟನೆ ಮೇಲೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.