ಸೌದಿ ಅರೇಬಿಯಾದಿಂದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಕುಳಿತು ತಾಯ್ನಾಡಿಗೆ ವಾಪಸಾದ ಹಬೀಬ್ ಹುಸೇನ್ ಎಂಬಾತನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದ್ದು, ಶನಿವಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಜೈಪುರದ ನ್ಯಾಯಾಲಯವೊಂದು ಗುರುವಾರ ಹುಸೇನ್‌ಗೆ ಜಾಮೀನು ನೀಡಿತ್ತು. ನ್ಯಾಯಾಧೀಶರು ನೀಡಿದ ಆದೇಶ ಜಾರಿಯಾಗುವಲ್ಲಿ ವಿಳಂಬವಾದ ಕಾರಣ ಅದೇ ದಿನ ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಿರಲಿಲ್ಲ. ತಡವಾಗಿ ಜೈಲಿಗೆ ಆದೇಶ ತಲುಪಿದ ನಂತರ ಶನಿವಾರ ಆತನನ್ನು ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆ ಹೊಂದಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಹುಸೇನ್, ಮತ್ತೆ ಸೌದಿ ಅರೇಬಿಯಾದ ಯೋಚನೆಯನ್ನೂ ಮಾಡಲಾರೆ ಎಂದಿದ್ದಾನೆ. ಅಲ್ಲದೆ ತಾಯ್ನಾಡಿಗೆ ಮರಳಲು ಸಾಧ್ಯವಾಗಿರುವುದಕ್ಕೆ ದೇವರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾನೆ.
ಬಳಿಕ ಆತ ಸಂಬಂಧಿಕರೊಂದಿಗೆ ಉತ್ತರ ಪ್ರದೇಶದಲ್ಲಿನ ತನ್ನ ಮನೆಗೆ ಹೊರಟು ಹೋಗಿದ್ದಾನೆ.
ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆತ ಮದೀನಾ ವಿಮಾನ ನಿಲ್ದಾಣದಲ್ಲಿ ಕ್ಲೀನರ್ ಆಗಿದ್ದ. ಡಿಸೆಂಬರ್ 25ರಂದು ಟಿಕೆಟ್ ಮತ್ತು ಪ್ರಯಾಣದ ದಾಖಲೆಗಳಿಲ್ಲದೆ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಆತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ರಾಜಸ್ತಾನದ ಮೊರಾದಾಬಾದ್‌ನ ಹುಸೇನ್ ತನ್ನ ಸ್ವಂತ ಜಮೀನನ್ನು ಮಾರಿ ಮಹತ್ವಾಕಾಂಕ್ಷೆಯೊಂದಿಗೆ ಸೌದಿ ಅರೇಬಿಯಾಕ್ಕೆ ತೆರಳಿದ್ದ. ಆದರೆ ಆತನನ್ನು ಅಲ್ಲಿ ಜೀತದಾಳುವಿನಂತೆ ನೋಡಿಕೊಳ್ಳಲಾಯಿತು. ಹಲವರ ಕೈಗಳ ಮೂಲಕ ಮಾರಲ್ಪಟ್ಟ ಹುಸೇನ್ ಊಟಕ್ಕೂ ತತ್ವಾರ ಎದುರಾಗಿತ್ತು. ಸಂಬಳವನ್ನೇ ನೀಡದೆ ದಿನಕ್ಕೆ 18 ಗಂಟೆಗಳಷ್ಟು ಸುದೀರ್ಘ ಕಾಲ ಕೆಲಸ ಮಾಡಿಸುತ್ತಿದ್ದ ಆತನ ಮಾಲಕರ ಕೈಯಿಂದ ವಿಮಾನದ ಶೌಚಾಲಯದಲ್ಲಿ ಅಡಗಿಕೊಂಡು ಭಾರತಕ್ಕೆ ಮರಳಿದ್ದ.