ಭಯೋತ್ಪಾದನಾ ಆರೋಪಗಳನ್ನು ಹೊತ್ತು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ ಹಜ್ ಹೌಸ್ ಇಮಾಮ್ ಗುಲಾಮ್ ಯಾಹ್ಯ ಭಕ್ಷ್ ಸಮಯ ಪೋಲು ಮಾಡಿಲ್ಲವಂತೆ. ಜೈಲಿನಲ್ಲಿ ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯ ಕಂಡುಕೊಂಡಿದ್ದ ಇಮಾಮ್, ಉಭಯ ಧರ್ಮಗಳ ಖೈದಿಗಳು ಪ್ರಾರ್ಥನೆ ಸಲ್ಲಿಸುವಾಗ ನಡೆಯುತ್ತಿದ್ದ ಘರ್ಷಣೆಗಳನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮೂವರು ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಮತ್ತು ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೋಯ್ಬಾ ಜತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ನಾಲ್ಕು ವರ್ಷಗಳ ಹಿಂದೆ ಉಗ್ರ ನಿಗ್ರಹ ದಳದಿಂದ (ಎಟಿಎಸ್) ಬಂಧನಕ್ಕೊಳಗಾಗಿದ್ದ ಇಮಾಮ್ ಸಾಕ್ಷ್ಯಗಳ ಕೊರತೆಯಿಂದ ಇಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಇತ್ತೀಚೆಗಷ್ಟೇ ದೋಷಮುಕ್ತರಾಗಿ ಬಿಡುಗಡೆಗೊಂಡಿದ್ದರು.
ಮೊದಲು ನನ್ನನ್ನು ಬಂಧಿಸಿ ಜೈಲಿಗೆ ಹಾಕಿದಾಗ ಕ್ರೂರ ಕ್ರಿಮಿನಲ್‌ಗಳು ಮತ್ತು ಭಯೋತ್ಪಾದಕರನ್ನು ಇಡಲಾಗುವ 'ಅಂಡಾ' ಎಂಬ ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿತ್ತು. ನಂತರ ನನ್ನನ್ನು ಕೊಲೆ ಆರೋಪದ ಮೇಲೆ ಸೆರೆಮನೆ ಸೇರಿರುವವರ ಜತೆ ಸೆಲ್‌ಗೆ ಸ್ಥಳಾಂತರಿಸಲಾಯಿತು ಎಂದು ಇಮಾಮ್ ಭಕ್ಷ್ ತನ್ನ ಅನುಭವಗಳನ್ನು ವಿವರಿಸಿದ್ದಾರೆ.
ಈ ಸೆಲ್‌ನಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿದ್ದರು. ಆಗ ಹಿಂದೂ ಮತ್ತು ಮುಸ್ಲಿಂ ಧರ್ಮೀಯರ ಪ್ರಾರ್ಥನೆಗಳ ಸಂದರ್ಭಗಳಲ್ಲಿ ಘರ್ಷಣೆಗಳು ನಡೆಯುತ್ತಿದ್ದವು. ಆದರೆ ನಾವು ನಮಾಜ್ ಮಾಡುವ ಮೊದಲು ಅಥವಾ ನಂತರ ನೀವು ಪ್ರಾರ್ಥನೆ ಮಾಡಿ ಎಂದು ಹಿಂದೂ ಸಹೋದರರಲ್ಲಿ ನಾನು ಮನವಿ ಮಾಡಿದೆ. ಇದಕ್ಕೆ ಒಪ್ಪಿದ ನಂತರ ಯಾವುದೇ ಸಮಸ್ಯೆಗಳೂ ಉದ್ಭವಿಸಲಿಲ್ಲ ಎಂದರು.
ಜೈಲಿನಲ್ಲೂ ನಮಾಜ್ ಮಾಡುವಾಗ ನಾನೇ ಮುಂದಾಳುತ್ವ ವಹಿಸುವುದನ್ನು ಮುಂದುವರಿಸಿದ್ದೆ. ಹಾಗಾಗಿ ಜೈಲಿನಲ್ಲಿದ್ದರೂ ಇಮಾಮ್ ಆಗಿದ್ದುದು ನನಗೆ ಸಂತೋಷ ತಂದಿತ್ತು ಎಂದು ನಗರದ ಹಲವು ಮಸೀದಿಗಳಲ್ಲಿ 24ಕ್ಕೂ ಹೆಚ್ಚು ವರ್ಷಗಳ ಕಾಲ ಇಮಾಮ್ ಆಗಿ ಸೇವೆ ಸಲ್ಲಿಸಿರುವ ಭಕ್ಷ್ ಹೇಳಿದ್ದಾರೆ.
ಜೈಲಿನಲ್ಲಿದ್ದಾಗ ಹಿಂದೂ ಒಡನಾಡಿಗಳಿಂದ ಭಾವನಾತ್ಮಕ ಬೆಂಬಲ ಪಡೆದುಕೊಂಡಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ನಾನು ಸಂಪೂರ್ಣ ಘಾಸಿಗೊಂಡಿದ್ದ ಸಂದರ್ಭದಲ್ಲಿ ನನ್ನ ಪಕ್ಕ ಕೂರುತ್ತಿದ್ದ ಹಿಂದೂ ಸಹೋದರರು, ನನ್ನನ್ನು ಸಮಾಧಾನ ಮಾಡುತ್ತಿದ್ದರು. ನೀವೇನೂ ತಪ್ಪೇ ಮಾಡಿಲ್ಲವಾದರೆ ಖಂಡಿತಾ ಬಿಡುಗಡೆಯಾಗುತ್ತೀರಿ ಎಂದು ಅವರು ಹೇಳುತ್ತಿದ್ದರು ಎಂದು ಕಣ್ತುಂಬಿ ವಿವರಿಸುತ್ತಾರೆ ಭಕ್ಷ್.