ತನಗೆ ದಿನಕ್ಕೆ ಮೂರು ಕೇಜಿ ಮಾಂಸ ನೀಡದಿದ್ದರೆ ಊಟವೇ ಮಾಡಲ್ಲ ಎಂದು ಬೆದರಿಕೆ ಹಾಕಿದ್ದ ಬಂಧಿತ ಶಂಕಿತ ತಾಲಿಬಾನ್ ಉಗ್ರ ಕನ್ನಡ ಭಾಷೆಯಲ್ಲೂ ಮಾತನಾಡುತ್ತಾನಂತೆ.
ಬಾಂಗ್ಲಾದೇಶದ ಗಡಿಯೊಳಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದಾಗ ಬಿಹಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಗುಲಾಂ ರಸೂಲ್ ಖಾನ್ ಆಲಿಯಾಸ್ ಖಾನ್ ಮಿರ್ಜಾ ಎಂಬ ಅಫಘಾನಿಸ್ತಾನ ಪ್ರಜೆ ತಾಲಿಬಾನ್ ಭಯೋತ್ಪಾದಕ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ಆತ ಉರ್ದು, ಹಿಂದಿ, ಮಲಯಾಳಂ, ತೆಲುಗು, ಕನ್ನಡ ಮತ್ತು ಇಂಗ್ಲೀಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಗುಲಾಂ ಮಾತನಾಡುತ್ತಾನೆ. ಆತನಿಗೆ ಪರ್ಷಿಯನ್ ಭಾಷೆಯೂ ಗೊತ್ತು ಎಂದು ವಿಚಾರಣೆ ನಡೆಸಿದ ಪೂರ್ಣಿಯಾ ಜೈಲಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತನಿಗೆ ಹಲವು ಭಾಷೆಗಳ ಜ್ಞಾನವಿರುವುದು ಆತನ ಕಾರ್ಯಾಚರಣೆಯ ಶೈಲಿಯನ್ನು ಬಿಂಬಿಸುತ್ತಿದೆ. ಬಿಹಾರದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿರದ ಭಾರತೀಯ ಭಾಷೆಗಳಲ್ಲೂ ಆತ ಮಾತನಾಡುತ್ತಿರುವುದು ವಿಚಾರಣೆ ಸಂದರ್ಭದಲ್ಲಿ ಅಚ್ಚರಿ ಹುಟ್ಟಿಸಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಕಳೆದೆರಡು ದಿನಗಳಿಂದ ಜೈಲಿನಲ್ಲಿ ನೀಡುತ್ತಿರುವ ಸಸ್ಯಾಹಾರಗಳನ್ನು ಆತ ಸೇವಿಸಲು ನಿರಾಕರಿಸಿದ್ದಾನೆ. ತನಗೆ ದಿನಕ್ಕೆ ಎರಡು ಕಿಲೋ ಗ್ರಾಂ ಮಾಂಸ ಮತ್ತು ಒಂದು ಕಿಲೋ ಕೋಳಿ ಮಾಂಸ ಬೇಕೇ ಬೇಕೆಂದು ಹಠ ಮಾಡುತ್ತಿದ್ದಾನೆ. ಮಾಂಸಾಹಾರವಿಲ್ಲದೆ ಊಟ ಮಾಡೋದೇ ತನಗೆ ಗೊತ್ತಿಲ್ಲ, ಕಳೆದ ಐದು ವರ್ಷಗಳಿಂದ ಹೀಗೆ ಬೆಳೆಯುತ್ತಾ ಬಂದಿದ್ದೇನೆ ಎಂದು ಖಾನ್ ಹೇಳಿದ್ದನೆಂದು ಪೊಲೀಸರು ನಿನ್ನೆಯಷ್ಟೇ ತಿಳಿಸಿದ್ದರು.
ಅಫಘಾನಿಸ್ತಾನದ ತಾಲಿಬಾನ್ ಜತೆ ಸಂಬಂಧವಿರುವುದನ್ನು ಒಪ್ಪಿಕೊಂಡಿದ್ದ ಆತನಿಂದ, ಪಾಕಿಸ್ತಾನಿ ಪಾಸ್‌ಪೋರ್ಟ್ ಮತ್ತು ಇತರ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ಜನವರಿ 13ರಂದು ಭಾರತ-ಬಾಂಗ್ಲಾ ಗಡಿ ಪ್ರದೇಶದಲ್ಲಿ ಖಾನ್‌ನನ್ನು ಬಂಧಿಸಲಾಗಿತ್ತು.