ಬೆಲೆಯೇರಿಕೆ ಕುರಿತು ತಾನು ಕೇಂದ್ರ ಸರಕಾರಕ್ಕೆ ಇಟಾಲಿಯನ್ ಭಾಷೆಯಲ್ಲಿ ಪತ್ರ ಬರೆಯುವುದಾಗಿ ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಕೆದಕಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 'ಹುಚ್ಚ' ಎಂದು ಕಾಂಗ್ರೆಸ್ ವಾಕ್ ಪ್ರಹಾರ ನಡೆಸಿದೆ.
ಅಗತ್ಯ ವಸ್ತುಗಳ ಬೆಲೆಯೇರಿಕೆ ಕುರಿತು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಅರ್ಥವಾಗುವ ಭಾಷೆಗಳಲ್ಲಿ ಪತ್ರಗಳನ್ನು ಬರೆದು ಸುಸ್ತಾಗಿದ್ದೇನೆ. ಹಾಗಾಗಿ ಈಗ ಇಟಾಲಿಯನ್ ಭಾಷೆಯಲ್ಲಿ ಪತ್ರ ಬರೆಯಲಿದ್ದೇನೆ ಎಂದು ಸೋನಿಯಾ ಇಟಲಿ ಮೂಲವನ್ನು ಮೋದಿ ಕುಟುಕಿದ್ದರು.
ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೀಗ ಅರುಳು ಮರುಳು. ಓರ್ವ ಅನಾಗರಿಕ ವ್ಯಕ್ತಿಯಿಂದ ಮಾತ್ರ ಇಂತಹ ವಿವೇಚನಾರಹಿತ ಢಾಂಬಿಕ ಭಾಷೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.
ಮೋದಿಯವರ ಇಂತಹ ಅಸಂಬದ್ಧ ಹೇಳಿಕೆಗಳನ್ನು ನಾನು ಗಂಭೀರವಾಗಿ ಪರಿಗಣಿಸಲು ಇಚ್ಛಿಸುವುದಿಲ್ಲ. ಇದು ಮಹತ್ವದ ಹೇಳಿಕೆಯ ಯೋಗ್ಯತೆ ಹೊಂದಿಲ್ಲ. ಅಂತಹ ಅರ್ಹತೆಯನ್ನು ಮೋದಿ ಕಳೆದುಕೊಂಡಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿಯವರ ಹೇಳಿಕೆಯನ್ನು ಉಲ್ಲೇಖಿಸುತ್ತಾ ತಿವಾರಿ ಹೇಳಿದರು.
ಬಿಜೆಪಿಯ ಕೇಂದ್ರೀಯ ನಾಯಕತ್ವವು ತನ್ನ ಮುಖ್ಯಮಂತ್ರಿಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದು, ಮೋದಿಯವರ ಲಂಗು ಲಗಾಮಿಲ್ಲದ, ಮತ್ತೊಬ್ಬರಿಗೆ ನೋವುಂಟು ಮಾಡುವ, ಅವಮಾನ ಮಾಡುವ ಹೇಳಿಕೆಗಳು ಇದನ್ನು ರುಜುವಾತುಪಡಿಸಿವೆ. ಇದನ್ನೇ ಅಸ್ತ್ರವಾಗಿಸುವ ಯೋಜನೆಯೀಗ ಕಾಂಗ್ರೆಸ್ಸಿನದ್ದು.
ಕಾಂಗ್ರೆಸ್ ಮುಖ್ಯಸ್ಥರ ಬಗ್ಗೆ ಅನಾಗರಿಕ ಹೇಳಿಕೆ ನೀಡುತ್ತಿದ್ದ ಪ್ರಮೋದ್ ಮಹಾಜನ್ ಅವರನ್ನು ಅಟಲ್ ಬಿಹಾರಿ ವಾಜಪೇಯಿಯವರು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಈಗಿನ ನಾಯಕತ್ವಕ್ಕೆ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿವಾರಿ ಬಿಜೆಪಿಯ ಪ್ರಸಕ್ತ ನಾಯಕತ್ವವನ್ನು ವಿಶ್ಲೇಷಿಸಿದ್ದಾರೆ.