ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜರ್ಮನ್ ಬೇಕರಿ ಸ್ಫೋಟದ ಹಿಂದೆ ಭಟ್ಕಳ ಸಹೋದರರ ನೆರಳು (Indian Mujahideen | Riyaz Ahmed Bhatkal | Iqbal Bhatkal | Pune blast)
Bookmark and Share Feedback Print
 
PR
ಕರ್ನಾಟಕದ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಸೇರಿದಂತೆ ಐವರು ಭಯೋತ್ಪಾದಕರು ಪುಣೆಯ ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ತನಿಖಾ ದಳಗಳ ಪ್ರಕಾರ ಜರ್ಮನ್ ಬೇಕರಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಲಷ್ಕರ್ ಇ ತೋಯ್ಬಾದ ಸಹಸಂಘಟನೆ ಇಂಡಿಯನ್ ಮುಜಾಹಿದೀನ್‌ನ ಐವರಿದ್ದಾರೆ.

ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಅಹ್ಮದ್ ಸಹೋದರರು ಕರ್ನಾಟಕದವರಾದರೆ, ಮೊಹ್ಸಿನ್ ಚೌದರಿ ಎಂಬಾತ ಪುಣೆ ನಿವಾಸಿ. ಮತ್ತೊಬ್ಬ ಅಬ್ದಾಸ್ ಶುಭಾನ್ ಖುರೇಷಿ.

ಐದನೇ ವ್ಯಕ್ತಿ ಮೊಹಮ್ಮದ್ ಅಮ್ಜಾದ್ ಖ್ವಾಜಾ. ಈತನನ್ನು ಇತ್ತೀಚೆಗಷ್ಟೇ ಹೈದರಾಬಾದ್ ಪೊಲೀಸರು ಚೆನ್ನೈಯಲ್ಲಿ ಬಂಧಿಸಿದ್ದರು. ತನಗೆ ಪುಣೆಯಲ್ಲಿ ಸ್ಫೋಟ ನಡೆದ ಜರ್ಮನ್ ಬೇಕರಿ ಪಕ್ಕದಲ್ಲಿರುವ ಓಶೋ ಆಶ್ರಮದ ವೀಡಿಯೋಗಳನ್ನು ತೋರಿಸಲಾಗಿತ್ತು ಎಂದು ತನಿಖೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾನೆ.
PTI

ಯಾರಿವರು ಭಟ್ಕಳದ ಉಗ್ರರು?
ಶಂಕಿತ ಭಯೋತ್ಪಾದಕ ಸಂಘಟನೆ 'ಸಿಮಿ'ಯನ್ನು ಭಾರತ ನಿಷೇಧಿಸಿದ ಬಳಿಕ ಹುಟ್ಟಿಕೊಂಡ ಲಷ್ಕರ್ ಇ ತೋಯ್ಬಾದ ಸಹಸಂಘಟನೆ 'ಇಂಡಿಯನ್ ಮುಜಾಹಿದೀನ್' ಸಂಸ್ಥಾಪಕರಲ್ಲಿ ರಿಯಾಜ್ ಅಹ್ಮದ್ ಭಟ್ಕಳ್ ಯಾನೆ ರೋಶನ್ ಖಾನ್ ಕೂಡ ಒಬ್ಬ. ಆತನ ಸಹೋದರ ಇಕ್ಬಾಲ್ ಭಟ್ಕಳ್.

ಭಟ್ಕಳ ಸಹೋದರರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ. ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿನ ಭಯೋತ್ಪಾದಕರ ಜತೆ ಈತ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ತನಿಖಾ ದಳಗಳು ಆರೋಪಿಸಿವೆ.

ಈ ಹಿಂದಿನ ದೆಹಲಿ, ಸೂರತ್, ಬೆಂಗಳೂರು ಮತ್ತು ಅಹಮದಾಬಾದ್ ಸ್ಫೋಟಕ್ಕೆ ಬಾಂಬುಗಳನ್ನು ಪೂರೈಸಿದ್ದು ಸುಮಾರು 11 ಸ್ಫೋಟ ಪ್ರಕರಣಗಳಲ್ಲಿ ಈತನ ಕೈವಾಡವಿದೆ ಎಂದು ತನಿಖಾದಳಗಳು ಹೇಳಿವೆ. ಪ್ರಸಕ್ತ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರಬಹುದು ಎಂದು ಶಂಕಿಸಲಾಗಿದೆ.

2006ರ ಮುಂಬೈ ರೈಲ್ವೇ ಸರಣಿ ಸ್ಫೋಟದ ನಂತರ ಭಯೋತ್ಪಾದಕರಿಗೆ ಹಣ ಪೂರೈಕೆಯಾಗುತ್ತಿದ್ದ ಜಾಡು ಹಿಡಿದ ಪೊಲೀಸರು ಭಟ್ಕಳ ಮೂಲವನ್ನು ಪತ್ತೆ ಹಚ್ಚಿದ್ದರು. ನಂತರ ಈ ಸಹೋದರರಿಬ್ಬರೂ ಉಗ್ರ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದುದು ಬೆಳಕಿಗೆ ಬಂದಿತ್ತು.
PR


ಸುಮಾರು ಆರು ತಿಂಗಳ ಹಿಂದೆ ಭಾರತದಲ್ಲಿರುವ ತನ್ನ ಸಹಚರರಿಗೆ ರಿಯಾಜ್ ಮಾಡಿದ ದೂರವಾಣಿ ಕರೆಯನ್ನು ಕದ್ದಾಲಿಸಿ, ಪರಿಶೀಲಿಸಿದಾಗ ಆತ ಪಾಕಿಸ್ತಾನದಲ್ಲಿರುವುದು ತನಿಖಾ ಸಂಸ್ಥೆಗಳ ಅರಿವಿಗೆ ಬಂದಿತ್ತು.

ಈ ಹಿಂದೆ ವಿವಿಧೆಡೆ ಸ್ಫೋಟ ನಡೆಸುವುದಕ್ಕೂ ಮೊದಲು ರಿಯಾಜ್ ಮಂಗಳೂರಿನಲ್ಲಿ ತಿರುಗಾಡಿಕೊಂಡಿದ್ದ. ಆದರೆ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಖಯಾಮುದ್ದೀನ್ ಕಪಾಡಿಯಾ ಎಂಬಾತನನ್ನು ಉಜ್ಜೈನಿಯಲ್ಲಿ ಬಂಧಿಸುತ್ತಿದ್ದಂತೆ ರಿಯಾಜ್ ಬಾಂಗ್ಲಾದೇಶಕ್ಕೆ ಪರಾರಿಯಾಗಿ ಬಳಿಕ ನೇಪಾಳದ ಮೂಲಕ ಪಾಕಿಸ್ತಾನ ಸೇರಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ರಿಯಾಜ್ ಪಾಕಿಸ್ತಾನದಲ್ಲಿದ್ದರೂ ಆತನ ಸೋದರ ಇಕ್ಬಾಲ್ ಭಟ್ಕಳ್ ಇನ್ನೂ ಭಾರತದಲ್ಲೇ ಇದ್ದಾನೆ ಎಂದು ಹೇಳಲಾಗುತ್ತಿದೆಯಾದರೂ, ಈಗ ಆತನೂ ಪರಾರಿಯಾಗಿರಬಹುದು ಅಥವಾ ಎಲ್ಲಾದರೂ ಅಡಗಿಕೊಂಡಿರಬಹುದು ಎಂದು ತನಿಖಾ ದಳಗಳು ಶಂಕಿಸಿವೆ.

ಪುಣೆ ಸ್ಫೋಟ: ಕರಾವಳಿಯಲ್ಲಿ ಉಗ್ರರಿಗಾಗಿ ಶೋಧ

ಸಂಬಂಧಿತ ಮಾಹಿತಿ ಹುಡುಕಿ