ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಬುಧವಾರ ಮಂಡಿಸಿರುವ 2010ರ ರೈಲ್ವೇ ಬಜೆಟಿನಲ್ಲಿ ಕರ್ನಾಟಕಕ್ಕೆ ಮತ್ತೆ ಭರವಸೆಗಳನ್ನಷ್ಟೇ ನೀಡಲಾಗಿದೆ. ಉಳಿದಂತೆ ಪ್ರಯಾಣದರ-ಸರಕು ಸಾಗಣೆ ಯಥಾಸ್ಥಿತಿ, ಇಲಾಖೆಯ ಖಾಸಗೀಕರಣಕ್ಕೆ ನಕಾರ, ಪ್ರಾದೇಶಿಕ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ, ಪ್ರಯಾಣದ ಸೇವಾಶುಲ್ಕಗಳಲ್ಲಿ ಕಡಿತಗೊಳಿಸಿರುವುದು ಮುಂತಾದ ಕೆಲವು ಸೌಲಭ್ಯಗಳನ್ನೂ ಈ ಬಾರಿಯ ರೈಲ್ವೇ ಆಯವ್ಯಯ ಪತ್ರ ಒಳಗೊಂಡಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಸೂಟ್‌ಕೇಸ್ ಬದಲು ಚೀಲವನ್ನೇ ಹಿಡಿದುಕೊಂಡು ಮಧ್ಯಾಹ್ನ 12 ಗಂಟೆ ಸಮಯಕ್ಕೆ ಸಂಸತ್ತಿಗೆ ಬಂದ ಮಮತಾ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮೂರನೇ ಬಾರಿ ಪೂರ್ಣ ಪ್ರಮಾಣದ ಕೇಂದ್ರ ರೈಲ್ವೇ ಬಜೆಟನ್ನು ಮಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನತೆಯ ಸಂಪರ್ಕ ಮಾರ್ಗವೇ ಸರಕಾರಕ್ಕೆ ಪ್ರಮುಖವಾಗಿದೆ, ಆರ್ಥಿಕ ಸ್ಥಿರತೆಗಾಗಿ ಸಾಮಾಜಿಕ ಹೊಣೆಗಾರಿಕೆಗೆ ಒತ್ತು ಕೊಡುತ್ತೇನೆ. ಬಂಡವಾಳ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರೈಲ್ವೇ ಬಜೆಟ್ ಮುಖ್ಯಾಂಶಗಳು: * ಪ್ರಯಾಣ ದರ ಮತ್ತು ಸರಕು ಸಾಗಣೆ ದರದಲ್ಲಿ ಹೆಚ್ಚಳವಿಲ್ಲ. * ರೈಲ್ವೇ ಇಲಾಖೆ ಖಾಸಗೀಕರಣ ಯೋಚನೆಯಿಲ್ಲ, ಸಹಭಾಗಿತ್ವಕ್ಕೆ ಒತ್ತು. * ಹವಾನಿಯಂತ್ರಿತ ದರ್ಜೆಯಲ್ಲಿ ವಿಧಿಸಲಾಗುತ್ತಿದ್ದ 40 ರೂಪಾಯಿ ಸೇವಾ ಶುಲ್ಕ 20 ರೂ.ಗಳಿಗೆ ಇಳಿಕೆ. * ಸ್ಲೀಪರ್ ಕೋಚ್‌ನಲ್ಲಿ ವಿಧಿಸಲಾಗುತ್ತಿದ್ದ ಸೇವಾ ಶುಲ್ಕ 20 ರೂಪಾಯಿಗಳಿಂದ 10 ರೂಪಾಯಿಗಳಿಗೆ ಇಳಿಕೆ. * ಇಂಗ್ಲೀಷ್, ಹಿಂದಿ ಮತ್ತು ಉರ್ದು ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ರೈಲ್ವೇ ನೇಮಕಾತಿ ಪರೀಕ್ಷೆ. * ರೈಲ್ವೇ ಪರೀಕ್ಷೆಗಳಲ್ಲಿ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಶುಲ್ಕವಿಲ್ಲ. * ರೈಲ್ವೇ ನೌಕರಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ. * ಪ್ರಯಾಣಿಕರಿಗೆ ಶುದ್ಧ ನೀರು, ಆಹಾರ, ಶೌಚಾಲಯಗಳು, ಶುಚಿತ್ವ, ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಲಾಗುತ್ತದೆ. * ಬಾಟಲ್ ನೀರಿನ ತಯಾರಿಕೆಗೆ ಅಂಬಾಲಾ, ಅಮೇಠಿ, ಮಾಲ್, ನಾಸಿಕ್, ಪರಕ್ಕಾ, ಮತ್ತು ತಿರುವನಂತಪುರಂಗಳಲ್ಲಿ ಆರು ಘಟಕಗಳ ಸ್ಥಾಪನೆ. 7ರಿಂದ 10 ರೂಪಾಯಿಗಳಲ್ಲಿ ಪ್ರಯಾಣಿಕರಿಗೆ ತಾಜಾ ನೀರು ಪೂರೈಕೆ. * ಜನತಾ ಆಹಾರ್ ಯೋಜನೆಯಡಿಯಲ್ಲಿ ಮಿತದರದ ಆಹಾರ. * ಮಹಿಳಾ ಪ್ರಯಾಣಿಕರಿಗಾಗಿ ಭದ್ರತೆ ಒದಗಿಸಲು 'ಮಹಿಳಾ ವಾಹಿನಿ' ಎಂಬ ಹೊಸ ಪಡೆ ನೇಮಕ. * ರೈಲ್ವೇ ಯೋಜನೆಗಳಿಗೆ ಬಲವಂತದ ಭೂ ಸ್ವಾಧೀನವಿಲ್ಲ. * ಮಹಿಳೆಯರಿಗಾಗಿ ಮದರ್ ಇಂಡಿಯಾ ರೈಲು * ಬಡ ಕಾರ್ಮಿಕರಿಗಾಗಿ ಕರ್ಮಭೂಮಿ ರೈಲು * ಇಂಧನ ಉಳಿಸಲು 2.2 ಕೋಟಿ ಸಿಎಫ್‌ಎಲ್ ದೀಪಗಳ ವಿತರಣೆ * ಅತಿ ವೇಗದ ಪ್ರಯಾಣಿಕ ರೈಲು ಕಾರಿಡಾರ್‌ಗಳ ನಿರ್ಮಾಣ * 80 ಸಾವಿರ ರೈಲ್ವೆ ಮಹಿಳಾ ನೌಕರರ ಮಕ್ಕಳಿಗೆ ಶಿಕ್ಷಣ ಸೌಲಭ್ಯ * ಪ್ರಾದೇಶಿಕ ಚಲನಚಿತ್ರ ತಂತ್ರಜ್ಞರು ಚಿತ್ರ ನಿರ್ಮಾಣಕ್ಕಾಗಿ ಪ್ರಯಾಣಿಸುವಾಗ ದ್ವಿತೀಯ ದರ್ಜೆ ಸ್ಲೀಪರ್‌ನಲ್ಲಿ ಶೇಕಡಾ 75, ಉನ್ನತ ದರ್ಜೆಯಲ್ಲಿ ಶೇ.50ರಷ್ಟು ರಿಯಾಯಿತಿ. * 2009-10ರಲ್ಲಿ ರೈಲ್ವೇ ಇಲಾಖೆಗೆ 1,328 ಕೋಟಿ ರೂಪಾಯಿ ಲಾಭವಾಗಿದೆ. * 20011ರಿಂದ 54 ಹೊಸ ರೈಲುಗಳನ್ನು ಓಡಿಸಲಾಗುತ್ತದೆ. * ಹಳಿ ನಿರ್ಮಾಣಕ್ಕೆಂದು 4,411 ಕೋಟಿ ರೂಪಾಯಿ ಬಿಡುಗಡೆ * ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ಹವಾನಿಯಂತ್ರಿತ ಮತ್ತು ಸ್ಲೀಪರ್ ದರ್ಜೆಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. * ಪತ್ರಕರ್ತರು ಮತ್ತು ಅವರ ಪತ್ನಿ ಅಥವಾ ಪತಿಗೆ ಪ್ರಯಾಣ ದರದಲ್ಲಿ ನೀಡಲಾಗುತ್ತಿದ್ದ ಶೇಕಡಾ 50 ರಿಯಾಯಿತಿಯನ್ನು ಪತಿ/ಪತ್ನಿ ಇಲ್ಲದಿದ್ದಲ್ಲಿ ಜೊತೆಗೆ ಹೋಗುವ ಬೇರೆ ವ್ಯಕ್ತಿಗೆ ನೀಡಲು ಅವಕಾಶ. ಪತ್ರಕರ್ತರ 18 ವರ್ಷದೊಳಗಿನ ಮಕ್ಕಳಿಗೂ ಈ ರಿಯಾಯಿತಿ ಲಭ್ಯ.
ಇತರ ಸಾಮಾನ್ಯ ಅಂಶಗಳು.. * ಇ-ಟಿಕೆಟಿಂಗ್ ಮೊಬೈಲ್ ವ್ಯಾನ್ ವ್ಯವಸ್ಥೆ ಸರಕಾರಿ ಮೆಡಿಕಲ್ ಕಾಜೇಲು ಆಸ್ಪತ್ರೆಗಳು, ಯುನಿವರ್ಸಿಟಿಗಳು, ಹೈಕೋರ್ಟ್‌ಗಳು, ಜಿಲ್ಲಾ ನ್ಯಾಯಾಲಯಗಳು, ಐಟಿ ಹಬ್‌ಗಳು, ಐಐಟಿ ಮತ್ತು ಐಐಎಂಗಳಿಗೂ ಲಭ್ಯವಾಗುವಂತೆ ವಿಸ್ತರಿಸುವುದು. ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಕೇಂದ್ರಗಳಲ್ಲೂ ಟಿಕೆಟ್ ವಿತರಣಾ ಕೌಂಟರುಗಳನ್ನು ತೆರೆಯುವ ಪ್ರಸ್ತಾಪ. * ಎಲ್ಲಾ ರೈಲ್ವೇ ಕ್ರಾಸಿಂಗ್‌ಗಳಲ್ಲಿ ಕಾವಲುಗಾರರ ನೇಮಕ. * ಅಗರ್ತಲಾದಿಂದ ಢಾಕಾಕ್ಕೆ (ಬಾಂಗ್ಲಾದೇಶ) ನೂತನ ರೈಲು. * ರೈಲ್ವೇ ನಿಲ್ದಾಣಗಳಲ್ಲಿ ಆಧುನಿಕ ಶೌಚಾಲಯಗಳ ನಿರ್ಮಾಣ. * ಮತ್ತೆ 10 'ತುರಂತ್' ರೈಲುಗಳ ಘೋಷಣೆ. * ರೈಲೇ ಮೂಲಭೂತ ಸೌಕರ್ಯಕ್ಕೆ ಆದ್ಯತೆ. * ಲಭ್ಯ ಸೌಕರ್ಯಗಳಲ್ಲೇ ಅತ್ಯುತ್ತಮ ಸೌಲಭ್ಯ. * ದೂರದೃಷ್ಟಿಯ ಯೋಜನೆಗಳಿಗೆ ವಿಶೇಷ ನಿಧಿ. * ಮಾರ್ಚ್ 31ರೊಳಗೆ ಹೊಸದಾಗಿ 117 ರೈಲು ಸಂಚಾರ ಆರಂಭ * ದೇಶದಾದ್ಯಂತ ಒಂದೇ ದಿನ ರೈಲ್ವೇ ನೇಮಕಾತಿ ಪರೀಕ್ಷೆ * 10ಕ್ಕೂ ಹೆಚ್ಚು ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸಲು ನಿರ್ಧಾರ. * 94 ರೈಲ್ವೇ ನಿಲ್ದಾಣಗಳು ಮೇಲ್ದರ್ಜೆಗೆ * ಪ್ರಯಾಣಿಕರ ಮೂಲ ಸೌಕರ್ಯಕ್ಕಾಗಿ 1,300 ಕೋಟಿ ರೂಪಾಯಿ ಮೀಸಲು. * ಪ್ರತೀ ವರ್ಷ ಒಂದು ಸಾವಿರ ಕಿಲೋ ಮೀಟರ್ ರೈಲು ಮಾರ್ಗದ ಗುರಿ. * ಆರು ನಗರಗಳಲ್ಲಿ ಕ್ರೀಡಾ ಅಕಾಡೆಮಿಗಳ ಸ್ಥಾಪನೆ * ನವದೆಹಲಿ, ಹೈದರಾಬಾದ್, ಚೆನ್ನೈ, ಕೊಲ್ಕತ್ತಾ, ಸಿಕಂದರಾಬಾದ್‌ಗಳಲ್ಲಿ ರೈಲ್ವೇ ಅಕಾಡೆಮಿ * ಟಾಗೋರ್ ಆನಿವರ್ಸರಿಗಾಗಿ ಹೌರಾದಲ್ಲಿ ರವೀಂದ್ರ ಮ್ಯೂಸಿಯಂ, ಬೋಲ್ಪುರದಲ್ಲಿ ರವೀಂದ್ರ ಅಕಾಡೆಮಿ ಸ್ಥಾಪನೆ. * 14 ಲಕ್ಷ ರೈಲ್ವೇ ಉದ್ಯೋಗಿಗಳಿಗಾಗಿ ವಸತಿ ಯೋಜನೆ * 10 ವರ್ಷದೊಳಗೆ ಎಲ್ಲಾ ಉದ್ಯೋಗಿಗಳಿಗೂ ಇಲಾಖೆಯಿಂದಲೇ ವಸತಿ. * ದೇಶದ ಎಲ್ಲಾ ಯುನಿವರ್ಸಿಟಿಗಳನ್ನೂ ಸಂಪರ್ಕಿಸಲು ರೈಲ್ವೇ ಸಂಪರ್ಕ * ಮಾನವ ರಹಿತ ರೈಲ್ವೇ ಕ್ರಾಸಿಂಗ್ ನಿರ್ಮಾಣ * 93 ರೈಲು ನಿಲ್ದಾಣಗಳ ಆಧುನೀಕರಣ * ರೈಲು ಅಫಘಾತ ತಡೆಗಟ್ಟಲು ಆಧುನಿಕ ಕ್ರಮ * ರೈಲು ಪ್ರಯಾಣಿಕರ ಸುರಕ್ಷತೆಗೆ ಗರಿಷ್ಠ ಆದ್ಯತೆ * ಬಾಕಿ ಯೋಜನೆಗಳ ಪೂರ್ಣಗೊಳಿಸಲು ವಿಶೇಷ ವ್ಯವಸ್ಥೆ * ರೈಲ್ವೇ ಭದ್ರತೆಗೆ ನಿವೃತ್ತ ಸೈನಿಕರು * ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ವಿಶೇಷ ರೈಲುಗಳು. * ಡಬ್ಬಲ್ ಡೆಕ್ಕರ್ ರೈಲುಗಳ ಪರಿಚಯ. * ರೈಲ್ವೇ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳನ್ನು ಹೆಚ್ಚಿಸುವುದು. * ರೈಲ್ವೇ ಆಸ್ತಿ ರಕ್ಷಣೆಗಾಗಿ ರಾಜ್ಯ ಸರಕಾರಗಳ ಜತೆ ಸಹಕಾರ ಕೋರಿಕೆ. * ಮಹಿಳಾ ಪ್ರಯಾಣಿಕರಿಗಾಗಿ ಭದ್ರತೆ ಹೆಚ್ಚಳ