ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯಕ್ಕೆ ಮಮತಾ 'ಭರವಸೆಯ ಬಂಪರ್ ರೈಲು' (Raiway Budget 2010 | Karnataka railway | kh muniyappa | parliament | mamata banerjee)
ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಬುಧವಾರ ಸಂಸತ್‌ನಲ್ಲಿ 2010-11ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದ್ದು, ಈ ಬಾರಿ 20ಕ್ಕೂ ಹೆಚ್ಚು ಹೊಸ ರೈಲು, ಜೋಡಿಮಾರ್ಗಗಳು, ಹೊಸ ರೈಲು ಸಂಚಾರಗಳ ಮಾರ್ಗ ಸಮೀಕ್ಷೆಯ ಘೋಷಣೆಯೊಂದಿಗೆ ಮಮತಾ ಕೃಪಾಕಟಾಕ್ಷಕ್ಕಿಂತ ಭರವಸೆಯೇ ಹೆಚ್ಚು ದೊರೆತಂತಾಗಿದೆ.
ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಮನವಿಯನ್ನೂ ನೀಡಿದ್ದರು. ಈ ಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಸಹ ಈ ಬಾರಿ ರಾಜ್ಯಕ್ಕೆ ಗರಿಷ್ಠ ಆದ್ಯತೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ಬಹುತೇಕ ನಿರೀಕ್ಷೆಗಳು ಹುಸಿಯಾಗಿದ್ದರು ಕೂಡ ರಾಜ್ಯಕ್ಕೆ ಕೆಲವು ಕೊಡುಗೆ ದೊರೆತಂತಾಗಿದೆ.
ಬೆಂಗಳೂರಿನಲ್ಲಿ ಅಚ್ಚು ಮತ್ತು ಗಾಲಿ ವಿನ್ಯಾಸ ಅಭಿವೃದ್ಧಿ ಕೇಂದ್ರ, ವಿಶೇಷ ಕಾರಿಡಾರ್‌ನಲ್ಲಿ ಕರ್ನಾಟಕ ಸೇರ್ಪಡೆ, ಬಳ್ಳಾರಿ-ಗುಂತ್‌ಕಲ್ ಮಾರ್ಗ ವಿದ್ಯುದ್ದೀಕರಣ, ನಡೆಸಲಾಗುವುದು ಎಂದು ಘೋಷಿಸಿದರು.
PTI
ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕ... * ಬಾಗಲಕೋಟೆ, ಚಿಕ್ಕಬಳ್ಳಾಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಯಲಹಂಕ ಜಂಕ್ಷನ್ ರೈಲ್ವೇ ನಿಲ್ದಾಣಗಳು ಸೇರಿದಂತೆ ದೇಶದ 94 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ 'ಆದರ್ಶ ನಿಲ್ದಾಣ'ಗಳ ಪಟ್ಟಿಗೆ ಸೇರಿಸಲಾಗಿದೆ. * ರೈಲ್ವೇ ಇಲಾಖೆಯಿಂದ ನಿರ್ಮಾಣಗೊಳ್ಳುವ ಬಹುಮಳಿಗೆಗಳ ಸಂಕೀರ್ಣಗಳಿಗೆ ಕರ್ನಾಟಕದ ಬಳ್ಳಾರಿ ಜಂಕ್ಷನ್, ಗುಲ್ಬರ್ಗಾ, ಶಿವಮೊಗ್ಗ ನಗರ, ತುಮಕೂರು, ಯಶವಂತಪುರ ಮತ್ತು ಕಾಸರಗೋಡು (ಕೇರಳ)ಗಳನ್ನು ಆಯ್ಕೆಗೊಳಿಸಲಾಗಿದೆ. * ಬೆಂಗಳೂರು ನಗರ, ಬಂಗಾರಪೇಟೆ, ಬಳ್ಳಾರಿ, ಭದ್ರಾವತಿ, ಬೀದರ್, ಹೊಸಪೇಟೆ, ಹೊಸೂರು ನಗರ, ಮಂಡ್ಯ, ರಾಯಚೂರು, ತುಮಕೂರು, ಯಾದಗಿರಿ, ಯಶವಂತಪುರಗಳಲ್ಲಿ ಹೊರರೋಗಿಗಳ ವಿಭಾಗ ಮತ್ತು ಪರೀಕ್ಷಾ ಕೇಂದ್ರಗಳ ಸ್ಥಾಪನೆ. * ಧಾರವಾಡ, ಹುಬ್ಬಳ್ಳಿ ಎರಡನೇ ದರ್ಜೆಯ ಜನರಲ್ ಸ್ಪೆಷಾಲಿಟಿ ಆಸ್ಪತ್ರೆಗಳು. * ಬಂದರು ಉದ್ಯಮ ಚಟುವಟಿಕೆಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾರವಾರ ಬಂದರಿಗೆ ಸೇವೆ ವಿಸ್ತರಣೆ. * ಬೆಂಗಳೂರಿಗೆ ರೈಲ್ವೇ ಅಚ್ಚು ಮತ್ತು ಗಾಲಿ ನಿರ್ಮಾಣ ಮತ್ತು ವಿನ್ಯಾಸ ಕೇಂದ್ರ * ವಿಶೇಷ ಕಾರಿಡಾರಿನಲ್ಲಿ ಕರ್ನಾಟಕ ಸೇರ್ಪಡೆ, ವಿಶೇಷ ಸೌಲಭ್ಯ. * ಬೀರೂರು - ಚಿಕ್ಕಜಾಜೂರ್ ಡಬ್ಬಲ್ ಟ್ರ್ಯಾಕ್ ನಿರ್ಮಾಣ * ಬಳ್ಳಾರಿ-ಗುಂತಕಲ್-ಹೊಸಪೇಟೆ-ವಾಸ್ಕೋ ಡಿ ಗಾಮಾ ಮಾರ್ಗ ವಿದ್ಯುದೀಕರಣ.
ಕರ್ನಾಟಕಕ್ಕೆ ಹೊಸ ರೈಲುಗಳು... * ಯಶವಂತಪುರ - ದೆಹಲಿ ತುರಂತೋ ಎಕ್ಸ್‌ಪ್ರೆಸ್ (ವೀಕ್ಲೀ, ಎಸಿ) * ನಾಗರಕೊಯಿಲ್- ಮಧುರೈ - ಹೊಸೂರು - ಬೆಂಗಳೂರು ಎಕ್ಸ್‌ಪ್ರೆಸ್ (ವೀಕ್ಲೀ) * ಮಂಗಳೂರು - ತಿರುಚ್ಚಿರಾಪಳ್ಳಿ ಎಕ್ಸ್‌ಪ್ರೆಸ್ (ವೀಕ್ಲೀ) * ಶಿವಮೊಗ್ಗ - ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ಡೈಲೀ) * ಬೆಂಗಳೂರು - ಬಂಗಾರಪೇಟೆ - ತಿರುಪತಿ ಇಂಟರ್ಸಿಟಿ ಎಕ್ಸ್‌ಪ್ರೆಸ್ (ವಾರಕ್ಕೆ ಮೂರು ಬಾರಿ) * ಬೆಂಗಳೂರು-ಹುಬ್ಬಳ್ಳಿ- ಹಂಪಿ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್‌ಗಳೆಂದು ಓಡುತ್ತಿದ್ದ ಲಿಂಕ್ ರೈಲುಗಳನ್ನು ಪ್ರತ್ಯೇಕಿಸಿ ಬೆಂಗಳೂರು - ಹುಬ್ಬಳ್ಳಿ ಮತ್ತು ಬೆಂಗಳೂರು -ನಾಂದೇಡ್‌ಗಳೆಂದು ಸ್ವತಂತ್ರವಾಗಿ ಓಡಿಸಲಾಗುತ್ತದೆ. * ಬೆಂಗಳೂರು - ನೆಲಮಂಗಲ ಪ್ಯಾಸೆಂಜರ್ * ಬಾಗಲಕೋಟೆ - ಗದಗ್ ಪ್ಯಾಸೆಂಜರ್ * ಹೊಸಪೇಟೆ - ಹರಿಹರ ಪ್ಯಾಸೆಂಜರ್ (ಗೇಜ್ ಪರಿಪರ್ತನೆ ಮುಗಿದ ಮೇಲೆ) * ಶಿವಮೊಗ್ಗ-ಮಂಗಳೂರು-ರಾಯಗೊಂಡಂ ನಡುವೆ ರಾಜ್ಯದ ಸಹಭಾಗಿತ್ವದಲ್ಲಿ ಹೊಸ ರೈಲು * ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ಗೋವಾ ನಡುವೆ ರೈಲು. * ಕಡೂರು-ಚಿಕ್ಕಮಗಳೂರು-ಅರಸೀಕೆರೆ ಹೊಸ ರೈಲು * ಯಶವಂತಪುರ-ಬೆಂಗಳೂರು-ದೆಹಲಿ-ನಾಗರಕೊಯಿಲ್-ಬೆಂಗಳೂರು ಏಕ್ಸ್‌ಪ್ರೆಸ್ * ಬೆಂಗಳೂರು - ಪಾಟ್ನಾ ಹೊಸ ರೈಲು * ಹೊಸಪೇಟೆ-ಹರಿಹರ ಹೊಸ ರೈಲು
2010-11ರಲ್ಲಿ ನಡೆಯುವ ಗೇಜ್ ಪರಿವರ್ತನೆಯ ಮಾರ್ಗಗಳು... * ಆನಂತಪುರ-ಶಿವಮೊಗ್ಗ-ತಾಳಗುಪ್ಪ * ಚಿಂತಾಮಣಿ-ಕೋಲಾರ-ಚಿಕ್ಕಬಳ್ಳಾಪುರ
2010-11ರಲ್ಲಿ ಹಳಿ ದ್ವಿಗುಣಗೊಳ್ಳುವ ಮಾರ್ಗಗಳು... * ಬೀರೂರು-ಶಿವಾನಿ * ಹೊಸದುರ್ಗಾ ರೋಡ್ - ಚಿಕ್ಕಜಾಜೂರ್ * ಹೊಸಪೇಟೆ-ಹುಬ್ಬಳ್ಳಿ-ಲೊಂಡಾ-ವಾಸ್ಕೋ ಡಿ ಗಾಮಾ
ಕರ್ನಾಟಕ ಸರಕಾರದ ಸಹಭಾಗಿತ್ವದೊಂದಿಗೆ ನಡೆಯುತ್ತಿರುವ ಯೋಜನೆಗಳು... * ಹಾಸನ - ಬೆಂಗಳೂರು ಹೊಸ ಮಾರ್ಗ. * ಕಡೂರು - ಚಿಕ್ಕಮಗಳೂರು - ಸಕಲೇಶಪುರ ಹೊಸ ಮಾರ್ಗ * ಅರಸೀಕೆರೆ - ಬೀರೂರು ಹಳಿ ದ್ವಿಗುಣ * ಕೋಲಾರ - ಚಿಕ್ಕಬಳ್ಳಾಪುರ ಗೇಜ್ ಪರಿವರ್ತನೆ
ಕರ್ನಾಟಕದ ಸಹಭಾಗಿತ್ವದೊಂದಿಗೆ ಪ್ರಸ್ತಾವಿತ ಯೋಜನೆಗಳು... * ತಾಳಗುಪ್ಪಾ - ಹೊನ್ನಾವರ * ಶಿವಮೊಗ್ಗ - ಹರಿಹರ * ವೈಟ್‌ಫೀಲ್ಡ್ - ಕೋಲಾರ * ಗದಗ - ಹಾವೇರಿ * ತುಮಕೂರು - ದಾವಣಗೆರೆ * ಬಿಜಾಪುರ - ಶಾಹಾಬಾದ್ * ಧಾರವಾಡ - ಬೆಳಗಾವಿ
ಈಡೇರದ ಬೇಡಿಕೆ: ಯಲಹಂಕ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ಮುಕ್ತ ರೈಲಿನ ಮಾರ್ಗ ಸುಮಾರು ಹತ್ತು ವರ್ಷಗಳ ಹಿಂದೆ ನ್ಯಾರೋಗೇಜ್ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡಿತ್ತು. ಆದರೆ ಈ ಕಾರ್ಯ ಆಮೆ ಗತಿಯಲ್ಲಿ ಸಾಗುತ್ತಿದೆ.
ಕಳೆದ ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗದ ರೈಲು ಹಳಿಯಯನ್ನು ಬ್ರಾಡ್‌ಗೇಜ್ ಮಾಡಲು ಪುಟ್ಟಪರ್ತಿಯ ಪ್ರಶಾಂತಿ ನಿಲಯದ ತನಕ ಸರ್ವೆ ಕಾರ್ಯ ಆರಂಭಿಸುವ ಬಗ್ಗೆ ಪ್ರಸ್ತಾವನೆ ಇತ್ತು. ಈ ಬಾರಿ ನಡೆದ ಬಜೆಟ್‌ನಲ್ಲಿ ಆ ಪ್ರಸ್ತಾವನೆಗೆ ಹಣಕಾಸು ನಿಗದಿಗೊಳಿಸಲಾಗಿದೆ.
ಚಿಕ್ಕಬಳ್ಳಾಪುರದಿಂದ ಚಿಂತಾಮಣಿಯ ತನಕ ರೈಲ್ವೆ ಹಳಿ ಅಗಲೀಕರಣ ಆಗಬೇಕಾಗಿದೆ. ಅಲ್ಲದೆ, ಕೋಲಾರ ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ 96.5ಕಿ.ಮೀ.ನ್ಯಾರೋಗೇಜ್ ಮಾರ್ಗ ಹಲವಾರು ವರ್ಷಗಳಿಂದ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಳ್ಳುವ ಕಾಮಗಾರಿ ನಡೆಯುತ್ತಿದೆ. ಆದರೆ ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ದಶಕಗಳ ಹಿಂದಿನ ಯಾವುದೇ ಪ್ರಸ್ತಾಪಕ್ಕೆ ಈ ಬಾರಿಯೂ ಮಹತ್ವ ಸಿಗದಂತಾಗಿದೆ.