ಆಶ್ರಮದಲ್ಲಿಯೇ ನಟಿ ರಂಜಿತಾ ಜೊತೆ ರಾಸಲೀಲೆ ನಡೆಸಿ ದೇಶಾದ್ಯಂತ ವಿವಾದಕ್ಕೀಡಾಗಿದ್ದ ಕಾಮಿ ಪರಮಹಂಸ ನಿತ್ಯಾನಂದ ಸ್ವಾಮಿ ವಿರುದ್ಧ ಕೊನೆಗೂ ತಮಿಳುನಾಡು ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಚಿತ್ರ ನಟಿ ರಂಜಿತಾ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ದೃಶ್ಯವನ್ನು ಖಾಸಗಿ ಚಾನೆಲ್‌ವೊಂದು ಬಿತ್ತರಿಸಿದ ನಂತರ ನಿತ್ಯಾನಂದ ಸ್ವಾಮಿಯ ಮುಖವಾಡ ಬಯಲಾಗಿತ್ತು. ಜೊತೆಗೆ ಲಕ್ಷಾಂತರ ಭಕ್ತರಿಗೆ ಉಪದೇಶ ನೀಡುತ್ತಿದ್ದ ಸ್ವಾಮಿ ರಾಸಲೀಲೆಯ ಸುದ್ದಿ ಬಿತ್ತರವಾದ ನಂತರ ನಾಪತ್ತೆಯಾಗಿದ್ದ.
ಇದೀಗ ಸಾಕಷ್ಟು ರಾಜಕೀಯ ಕಸರತ್ತುಗಳ ನಂತರ ತಮಿಳುನಾಡು ಪೊಲೀಸರು ನಿತ್ಯಾನಂದನ ವಿರುದ್ಧ ಅತ್ಯಾಚಾರ ಯತ್ನ, ವಂಚನೆ, ಕ್ರಿಮಿನಲ್ ಪ್ರಕರಣ ಸೇರಿದಂತೆ ಐಪಿಸಿ(ಭಾರತೀಯ ದಂಡ ಸಂಹಿತೆ) 420, 376, 506(1) ಕಲಂ ಅನ್ವಯ ದೂರು ದಾಖಲಿಸಿದ್ದಾರೆ.
ಸ್ವಾಮಿ ದೇಶ ಬಿಟ್ಟು ಹೋಗಿಲ್ಲ: ಕಾಮಪುರಾಣ ಬಹಿರಂಗಗೊಂಡ ನಂತರ ನಿತ್ಯಾನಂದ ಸ್ವಾಮಿ ಭಾರತ ಬಿಟ್ಟು ಹೋಗಿರುವ ವರದಿಯನ್ನು ಅಲ್ಲಗಳೆದಿರುವ ಸ್ವಾಮಿಯ ವಕೀಲ ತಮಿಳುನಾಡಿನ ಶ್ರೀಧರನ್, ನಿತ್ಯಾನಂದ ಸ್ವಾಮಿ ವಾರಣಾಸಿಯಲ್ಲಿದ್ದು ಅವರು ಕುಂಭಮೇಳದಲ್ಲಿ ಭಾಗವಹಿಸಲಿದ್ದಾರೆ. ಅವರು ಮಾರ್ಚ್ 18ಕ್ಕೆ ಆಶ್ರಮಕ್ಕೆ ವಾಪಸಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಸ್ವಾಮಿ ಮಲೇಶ್ಯಾದಲ್ಲಿ?: ರಾಸಲೀಲೆ ಪ್ರಕರಣ ಬಹಿರಂಗಗೊಂಡ ನಂತರ ಭಕ್ತರ ಆಕ್ರೋಶಕ್ಕೆ ಬೆಂಗಳೂರಿನ ಬಿಡದಿಯಲ್ಲಿರುವ ಧ್ಯಾನಶ್ರಾಮದ ಕುಟೀರಗಳನ್ನು ಧ್ವಂಸಮಾಡಿದ್ದರು. ಅಲ್ಲದೇ ಚೆನ್ನೈನ ವಿವಿಧೆಡೆ ಪ್ರತಿಭಟನೆ ನಡೆದು, ಸ್ವಾಮಿಯ ಬಂಧನಕ್ಕೆ ಆಗ್ರಹಿಸಿದ್ದರು. ಆ ನಂತರ ಸದ್ದಿಲ್ಲದೆ ನಾಪತ್ತೆಯಾಗಿದ್ದ ನಿತ್ಯಾನಂದ ಮೈಸೂರಿನ ಬಳಿ ಠಿಕಾಣಿ ಹೂಡಿದ್ದಾರೆಂಬ ವದಂತಿ ಹರಡಿತ್ತು. ನಂತರ ಇಲ್ಲ ಅವರು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಹೆಚ್ಚು ಎಂದು ಊಹಾಪೋಹಗಳು ಹರಿದಾಡಿತ್ತು. ಇದೀಗ ನಿತ್ಯಾನಂದ ಸ್ವಾಮಿ ಮಲೇಶ್ಯಾದಲ್ಲಿಯೇ ಇದ್ದಿರುವುದಾಗಿ ಹೇಳಲಾಗುತ್ತಿದೆ.
ವರದಿ ನಂತರ ಕ್ರಮ-ಕರ್ನಾಟಕ: ವಂಚಕ ನಿತ್ಯಾನಂದನ ವಿರುದ್ಧ ತಮಿಳುನಾಡು ಪೊಲೀಸರು ಈಗಾಗಲೇ ಮೊಕದ್ದಮೆ ದಾಖಲಿಸಿಕೊಂಡಿದ್ದರೆ, ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರ ವರದಿಗಾಗಿ ಕಾಯಲಾಗುತ್ತಿದೆ ಎಂದು ಕರ್ನಾಟಕದ ಗೃಹ ಸಚಿವ ವಿ.ಎಸ್.ಆಚಾರ್ಯ ಟೈಮ್ಸ್ ನೌಗೆ ತಿಳಿಸಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.