ಶೋಯಿಬ್ ಮಲಿಕ್‌ರನ್ನು ತನ್ನ ಗಂಡ ಎಂದು ಹೇಳಿಕೊಳ್ಳುತ್ತಿರುವ ಹೈದರಾಬಾದ್ ಯುವತಿ ಆಯೇಶಾ ಸಿದ್ಧಿಕಿ ವಿವಾದದ ಕುರಿತು ಮೊತ್ತ ಮೊದಲ ಬಾರಿ ಬಹಿರಂಗ ಹೇಳಿಕೆ ನೀಡಿದ್ದು, ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಪಾಕಿಸ್ತಾನಿ ಕ್ರಿಕೆಟ್ ಆಟಗಾರನಿಗೆ ಪರಿಚಯ ಮಾಡಿಕೊಟ್ಟದ್ದೇ ನಾನು ಎಂದು ಹೇಳಿಕೊಂಡಿದ್ದಾಳೆ.
'ಜೀ ನ್ಯೂಸ್' ಚಾನೆಲ್ ಜತೆ ಮಾತನಾಡುತ್ತಿದ್ದ ಆಯೇಶಾ, 'ಶೋಯಿಬ್ ಮಲಿಕ್‌ಗೆ ಸಾನಿಯಾ ಮಿರ್ಜಾರನ್ನು ನಾನೇ ಪರಿಚಯ ಮಾಡಿಕೊಟ್ಟಿದ್ದೆ. ಆದರೆ ಅವರ ನಡುವಿನ ಸಂಬಂಧ ಗಟ್ಟಿಯಾಗುತ್ತಿದ್ದಂತೆ ಶೋಯಿಬ್ ನನ್ನನ್ನು ತ್ಯಜಿಸಲು ನಿರ್ಧರಿಸಿದರು. ಈ ಸಂಪೂರ್ಣ ಪ್ರಕರಣದಲ್ಲಿ ಶೋಯಿಬ್ ಕುಟುಂಬ ನಡೆದುಕೊಂಡ ರೀತಿ ನನಗೆ ಆಘಾತ ತಂದಿದೆ' ಎಂದಿದ್ದಾಳೆ.
PR
ಶೋಯಿಬ್ ನನ್ನನ್ನು ಮದುವೆಯಾಗಿರುವುದಕ್ಕೆ ನನ್ನಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂದಿರುವ ಆಯೇಶಾ, ನನ್ನನ್ನು ಪತ್ನಿ ಎಂದು ಹೇಳಿಕೊಳ್ಳುವುದು ಅಪಮಾನ ಎಂಬುದು ಅವರ ಭಾವನೆಯಾಗಿತ್ತು ಎಂದು ಟೀಕಿಸಿದ್ದಾಳೆ.
ಅವರು ಸಾನಿಯಾ ಮಿರ್ಜಾರನ್ನು ಮದುವೆಯಾಗುವುದಾದರೆ ಮೊದಲು ನನಗೆ ಬಹಿರಂಗವಾಗಿ ವಿಚ್ಛೇದನ ನೀಡಲಿ ಎಂದು 'ಟೈಮ್ಸ್ ನೌ' ಚಾನೆಲ್ ಜತೆ ಮಾತನಾಡುತ್ತಾ ಆಯೇಶಾ ಆಗ್ರಹಿಸಿದ್ದಾಳೆ.
ಶೋಯಿಬ್ ತನಗೆ ಮದುವೆಯಾಗಿರುವ ವರದಿಗಳನ್ನು ತಳ್ಳಿ ಹಾಕುತ್ತಿದ್ದಾರಲ್ಲವೇ ಎಂದು ಆಕೆಯಲ್ಲಿ ಪ್ರಶ್ನಿಸಿದಾಗ, 'ಅವರು ನನ್ನನ್ನು ಮದುವೆಯಾಗಿದ್ದಾರೆಂದು ಸ್ವತಃ ಅವರಿಗೆ ಗೊತ್ತಿದೆ. ನಮ್ಮ ನಡುವೆ ನಿಖಾ ನಡೆದಿರುವುದಕ್ಕೆ ನನ್ನಲ್ಲಿ ಪುರಾವೆಗಳಿವೆ. ನನಗೆ ಶೋಯಿಬ್‌ರಿಂದ ಏನೂ ಬೇಕಾಗಿಲ್ಲ ಅಥವಾ ಪ್ರಚಾರಕ್ಕಾಗಿಯೂ ನಾನಿದನ್ನು ಮಾಡುತ್ತಿಲ್ಲ' ಎಂದಿದ್ದಾಳೆ.
ಶೋಯಿಬ್ ಸಿಕ್ಕಿ ಹಾಕಿಕೊಂಡಂತೆ ಚಡಪಡಿಸುತ್ತಿದ್ದರು. ನನಗೆ ಕೆಟ್ಟ ಹೆಸರು ನೀಡಬೇಕೆಂದು ಅವರು ಬಯಸಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಹಲವು ವಿಚಾರಗಳನ್ನು ಹೇಳುತ್ತಾ ಬಂದಿದ್ದಾರೆ. ಅವರ ಪ್ರಕಾರ ಶೋಯಿಬ್ ಈ ವರ್ತನೆಗೆ ನಾನೇ ಕಾರಣ. ಏನು ಬೇಕಾದರೂ ಹೇಳಲು ಅವರೇನೂ ಚಿಕ್ಕ ಮಗುವಲ್ಲ ಎಂದು ಆಯೇಶಾ ವಿವರಣೆ ನೀಡಿದ್ದಾಳೆ.
ಮದುವೆಯ ನಂತರ ಶೋಯಿಬ್ ಜತೆ ನೀವು ಯಾಕೆ ವಾಸಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, 'ಮದುವೆಯ ನಂತರ ನಮ್ಮ ವೃತ್ತಿ ಜೀವನದ ಕಾರಣದಿಂದಾಗಿ ದೂರವೇ ಉಳಿಯಬೇಕಾಯಿತು. ಈ ಹೊತ್ತಿಗೆ ಹಲವು ಬದಲಾವಣೆಗಳು ನಡೆದು ಹೋಗಿದ್ದವು. ಶೋಯಿಬ್ ಸ್ಟಾರ್ ಆಗಿದ್ದರು. ನಾನು ತಕ್ಕ ಜೋಡಿಯಾಗಿ ಕಾಣಿಸುತ್ತಿಲ್ಲ, ನಿನ್ನಿಂದ ನನಗೆ ಮುಜುಗರವಾಗುತ್ತಿದೆ ಎಂದೆಲ್ಲಾ ಫೋನ್ ಮೂಲಕ ನನ್ನನ್ನು ದೂಷಿಸಲಾರಂಭಿಸಿದರು. ಅದನ್ನೆಲ್ಲ ಕೆದಕುವ ಮೂಲಕ ಕೆಟ್ಟ ನೆನಪುಗಳನ್ನು ಮರುಕಳಿಸುವಕ್ಕೆ ನಾನು ಇಷ್ಟಪಡುವುದಿಲ್ಲ' ಎಂದು ನೋವಿನಿಂದ ಹೇಳಿಕೊಂಡಳು.
ಇದನ್ನೆಲ್ಲ ನಾನು ಮೊಹಮ್ಮದ್ ಯೂಸುಫ್ ಪತ್ನಿಯನ್ನು ಭೇಟಿಯಾದಾಗಲೆಲ್ಲ ಆತ್ಮೀಯವಾಗಿ ಹೇಳಿಕೊಳ್ಳುತ್ತಿದ್ದೆ. ತಾನು ಸಾಯಿಲ್‌ಕೋಟ್‌ನಲ್ಲಿ ಮದುವೆ ನೋಂದಣಿ ಮಾಡಿಸುವುದಾಗಿ ಶೋಯಿಬ್ ಈ ಸಂದರ್ಭದಲ್ಲಿ ಹೇಳುತ್ತಿದ್ದರು. ಅವರು ಯಶಸ್ಸಿನಿಂದ ಕುರುಡರಾಗಿದ್ದಾರೆ. ಆದರೆ ನಮ್ಮ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತ್ಯಕ್ಷದರ್ಶಿಗಳನ್ನು ಏನು ಮಾಡುವುದು. ಶೋಯಿಬ್‌ಗೆ ನನ್ನನ್ನು ತ್ಯಜಿಸುವ ಮನಸ್ಸಿದ್ದರೆ ಅದನ್ನು ಬಹಿರಂಗವಾಗಿ ಹೇಳಲಿ ಎಂದಿದ್ದಾಳೆ.