ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶೋಯಿಬ್ ಮಲಿಕ್ ಹೈದರಾಬಾದ್‌ನಲ್ಲಿರುವ ಸಾನಿಯಾ ಮಿರ್ಜಾ ಮನೆಗೆ ಆಗಮಿಸಿದ್ದು, ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಅತ್ತ ಶೋಯಿಬ್ ಅವರ ಮೊದಲ ಪತ್ನಿ ಎಂದು ಹೇಳಲಾಗುತ್ತಿರುವ ಆಯೇಶಾ ಸಿದ್ಧಿಕಿ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾಳೆ. ತನ್ನ ಕುಟುಂಬಕ್ಕೆ ಶೋಯಿಬ್ ಸಹಿ ಇರುವ ಬ್ಯಾಟ್ ಮತ್ತು ಟ್ರೋಫಿಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ಬಹಿರಂಗಪಡಿಸಲಾಗಿದೆ.
ಸಾನಿಯಾ ಜತೆ ಶೋಯಿಬ್... ನಿನ್ನೆ ರಾತ್ರಿಯೇ ಶೋಯಿಬ್ ದುಬೈಯಿಂದ ಹೈದರಾಬಾದ್‌ಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸಾನಿಯಾ, ಶೋಯಿಬ್ ಮತ್ತು ಸಾನಿಯಾ ತಾಯಿ ಒಟ್ಟಿಗೆ ಮನೆಯ ಹೊರಗಡೆ ನಿಂತಿರುವ ವೀಡಿಯೋವನ್ನು ವಾರ್ತಾವಾಹಿನಿಗಳು ಇದೀಗ ಪ್ರಸಾರ ಮಾಡುತ್ತಿವೆ.
ಈ ದೃಶ್ಯಗಳಲ್ಲಿ ಸಾನಿಯಾ ಮತ್ತು ಶೋಯಿಬ್ ಇಬ್ಬರೂ ತೀರಾ ಚಿಂತಿತರಾಗಿರುವಂತೆ ಕಂಡು ಬರುತ್ತಿದೆ. ಶೋಯಿಬ್ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ, ಸಾನಿಯಾ ತನ್ನ ತಾಯಿಯ ಜತೆ ಬಿಸಿಬಿಸಿ ಚರ್ಚೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಆಯೇಶಾಳಿಂದ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದು ಶೋಯಿಬ್ ಅನಿರೀಕ್ಷಿತ ಭೇಟಿಯ ಹಿಂದಿರುವ ಕಾರಣ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ನಿಕಾಹ್ ಪ್ರಕರಣದ ನಂತರ ಸಾನಿಯಾ ಕುಟುಂಬ ಕೂಡ ತತ್ತರಕ್ಕೊಳಗಾಗಿದ್ದು, ಅವರನ್ನು ಶೋಯಿಬ್ ಸಮಾಧಾನಪಡಿಸಲಿದ್ದಾರೆ. ಜತೆಗೆ ಮದುವೆಯ ಪೂರ್ವ ಸಿದ್ಧತೆಗಳನ್ನು ನಡೆಸುವ ಕುರಿತು ಕೂಡ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಶೋಯಿಬ್ ಬೆನ್ನಿಗೆ ನಿಂತ ಸಾನಿಯಾ... ಹೈದರಾಬಾದ್‌ನ ಹುಡುಗಿಯೊಬ್ಬಳಿಗೆ ಮೋಸ ಮಾಡಿ ಅದೇ ನಗರದ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿರುವ ಶೋಯಿಬ್ ಬೆಂಬಲಕ್ಕೆ ಬಂದಿರುವ ಸಾನಿಯಾ, ನಿಜ ಏನೆಂಬುದು ನನಗೆ ಗೊತ್ತಿದೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
'ಈ ಪ್ರಕರಣದ ಸಂಪೂರ್ಣ ವಿವರಗಳನ್ನು ಶೋಯಿಬ್ ನನಗೆ ನೀಡಿದ್ದಾರೆ. ಹಾಗಾಗಿ ಆ ಸತ್ಯದ ಕುರಿತು ನನಗೆ ಎಲ್ಲವೂ ತಿಳಿದಿದೆ' ಎಂದು ಹೇಳುವ ಮೂಲಕ ತನ್ನ ಭಾವಿ ಪತಿಗೆ ಬೆಂಬಲ ನೀಡಿರುವ ಸಾನಿಯಾ, 'ನನ್ನ ಬಗ್ಗೆ ತೋರಿಸಿರುವ ಪ್ರೀತಿ ಮತ್ತು ನೀಡಿರುವ ಬೆಂಬಲಕ್ಕಾಗಿ ಧನ್ಯವಾದಗಳು. ನನಗೆ ಮತ್ತು ನನ್ನ ಕುಟುಂಬಕ್ಕೆ ನಿಜ ವಿಚಾರ ಏನೆಂಬುದು ಗೊತ್ತಿದೆ. ದೇವರ ನ್ಯಾಯದಲ್ಲಿ ನಮಗೆ ನಂಬಿಕೆಯಿದೆ' ಎಂದಿದ್ದಾರೆ.
ಮದುವೆ ಮುಂದಕ್ಕೆ? ಏಪ್ರಿಲ್ 15ರಂದು ಹೈದರಾಬಾದ್‌ನಲ್ಲಿ ನಡೆಯಬೇಕಾಗಿರುವ ಮದುವೆಯನ್ನು ಶಿವಸೇನೆ ಮತ್ತಿತರ ಸಂಘಟನೆಗಳ ಬೆದರಿಕೆ ಮತ್ತು ಆಯೇಶಾ ಪ್ರಕರಣದ ಕಾರಣದಿಂದಾಗಿ ದುಬೈಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲದೆ ಮದುವೆಯನ್ನು ಮುಂದೂಡುವ ಸಾಧ್ಯತೆಗಳಿವೆ.
ಈ ಸಂಬಂಧ ಶೋಯಿಬ್ ಮತ್ತು ಸಾನಿಯಾ ಕುಟುಂಬ ಚರ್ಚೆ ನಡೆಸುತ್ತಿದೆ. ದುಬೈನಲ್ಲಿ ಮದುವೆ ನಡೆದರೆ ಯಾವುದೇ ಅಹಿತಕರ ಘಟನೆಗಳು ಅಥವಾ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿಲ್ಲ. ಹಾಗಾಗಿ ಅದೇ ಸುರಕ್ಷಿತ ಸ್ಥಳ ಎಂದು ಎರಡೂ ಕುಟುಂಬಗಳು ಹೇಳುತ್ತಿದ್ದು, ಹೈದರಾಬಾದ್‌ನಿಂದ ಮದುವೆಯನ್ನು ಸ್ಥಳಾಂತರಿಸುವ ಚಿಂತನೆ ನಡೆಸುತ್ತಿವೆ ಎಂದು ವರದಿಗಳು ತಿಳಿಸಿವೆ.
ಆಯೇಶಾಳಿಂದ ಮತ್ತಷ್ಟು ದಾಖಲೆ... ನಿನ್ನೆಯಷ್ಟೇ ಮದುವೆಯ ದಾಖಲೆಗಳನ್ನು ಬಿಡುಗಡೆ ಮಾಡಿ ಶೋಯಿಬ್‌ಗೆ ಆಘಾತ ನೀಡಿದ್ದ ಆಯೇಶಾ ಯಾನೆ ಮಹಾ ಸಿದ್ಧಿಕಿ ಕುಟುಂಬ ಇಂದು ಮತ್ತೆರಡು ದಾಖಲೆಗಳನ್ನು ಬಹಿರಂಗಪಡಿಸಿದೆ.
ಆಯೇಶಾ ತಂದೆ ಮೊಹಮ್ಮದ್ ಸಿದ್ಧಿಕಿಯವರ ಹುಟ್ಟುಹಬ್ಬದಂದು (2004ರ ಏಪ್ರಿಲ್ 8) ಶೋಯಿಬ್ ಮಲಿಕ್ ತನ್ನ ಮಾವನಿಗೆ ಬ್ಯಾಟೊಂದನ್ನು ಉಡುಗೊರೆಯಾಗಿ ನೀಡಿದ್ದರು. ಈ ಸಂದರ್ಭದಲ್ಲಿ (2004ರ ಮಾರ್ಚ್-ಏಪ್ರಿಲ್) ಶೋಯಿಬ್ ಅವರು ಭಾರತ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗಾಗಿ ಆಗಮಿಸಿದ್ದರು.
ಆಗಿನ ಪಾಕಿಸ್ತಾನ ತಂಡದಲ್ಲಿದ್ದ ಎಲ್ಲಾ ಆಟಗಾರರು ಕೂಡ ಈ ಉಡುಗೊರೆ ನೀಡಲಾಗಿದ್ದ ಬ್ಯಾಟಿಗೆ ಸಹಿ ಮಾಡಿರುವುದನ್ನು ಮಾಧ್ಯಮಗಳಿಗೆ ಸಿದ್ಧಿಕಿ ಕುಟುಂಬ ತೋರಿಸಿದೆ.
ಈ ನಡುವೆ 2005ರ ಪಂದ್ಯವೊಂದರಲ್ಲಿ ಶೋಯಿಬ್‌ಗೆ ಸಿಕ್ಕಿದ್ದ 'ಪಂದ್ಯ ಪುರುಷೋತ್ತಮ' ಪೆಪ್ಸಿ ಕಪ್ ಪುರಸ್ಕಾರವನ್ನು ಆಯೇಶಾ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಅದನ್ನು ಕೂಡ ಸಿದ್ಧಿಕಿ ಕುಟುಂಬ ಪ್ರದರ್ಶಿಸಿದೆ.
ಕಾನೂನು ಹೋರಾಟ ಆರಂಭ... ತನ್ನ ಪುತ್ರಿಯನ್ನು ಮದುವೆಯಾಗಿರುವ ಶೋಯಿಬ್ ಆಕೆಗೆ ವಿಚ್ಛೇದನ ನೀಡದೆ ಮತ್ತೊಂದು ವಿವಾಹವಾಗುತ್ತಿದ್ದಾರೆ ಎಂದು ಆರೋಪಿಸಿ ಆಯೇಶಾ ತಂದೆ ನ್ಯಾಯಾಲಯವೊಂದರಲ್ಲಿ ಪ್ರಕರಣ ದಾಖಲಿಸಿದ್ದು, ಶೋಯಿಬ್‌ಗೆ ನೊಟೀಸ್ ಜಾರಿಗೊಳಿಸಿದೆ.
ಆಯೇಶಾ ಯಾನೆ ಮಹಾ ಸಿದ್ಧಿಕಿಯನ್ನು 3-6-2002ರಂದು ಪಾಕಿಸ್ತಾನದ ಸಾಯಿಲ್‌ಕೋಟ್‌ನಲ್ಲಿ ಶೋಯಿಬ್ ವಿವಾಹವಾಗಿದ್ದಾರೆ ಎಂದು ಹೇಳಿರುವ ಆಕೆಯ ತಂದೆ ಮೊಹಮ್ಮದ್ ಸಿದ್ಧಿಕಿ, ಈ ಸಂಬಂಧ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ಇತ್ತ ಶೋಯಿಬ್ ಮಲಿಕ್ ಭಾರತದ ನ್ಯಾಯಾಲಯವೊಂದರಲ್ಲಿ ಸಿದ್ಧಿಕಿ ಕುಟುಂಬದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಯೋಚಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅವರ ವಕೀಲ ರಮೇಶ್ ಗುಪ್ತಾ ಮೂಲಕ ಪ್ರಕರಣ ದಾಖಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.