ಶೋಯಿಬ್‌ರಿಂದಾಗಿ ನಾನು ಗರ್ಭಿಣಿಯಾಗಿದ್ದೆ: ಆಯೇಶಾ ಸಿದ್ಧಿಕಿ
ಹೈದರಾಬಾದ್, ಸೋಮವಾರ, 5 ಏಪ್ರಿಲ್ 2010( 10:20 IST )
ಪಾಕಿಸ್ತಾನ ಕ್ರಿಕೆಟ್ ಆಟಗಾರ ಹಾಗೂ ತನ್ನ ಗಂಡ ಶೋಯಿಬ್ ಮಲಿಕ್ ಅವರಿಂದಾಗಿ ತಾನು ಗರ್ಭಿಣಿಯಾಗಿದ್ದೆ, ಆದರೆ ಅಕಾಲ ಪ್ರಸವದಿಂದಾಗಿ ಗರ್ಭಪಾತವಾಗಿತ್ತು. ಈ ಕುರಿತು ನನ್ನಲ್ಲಿ ದಾಖಲೆಗಳಿವೆ ಎಂದು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆಯೇಶಾ ಸಿದ್ಧಿಕಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಆಯೇಶಾ ನಿರಾಕರಿದ್ದಾಳಾದರೂ, ತನಗೆ ಚಿಕಿತ್ಸೆ ನೀಡಿದ್ದು ಹೈದರಾಬಾದ್‌ನ ಡಾ. ಫಾತಿಮಾ ಎಂಬುದನ್ನು ತಿಳಿಸಿದ್ದಾಳೆ. ಆದರೆ ಈ ಹೆಸರಿನ ಹತ್ತಾರು ವೈದ್ಯರು ಅದರಲ್ಲೂ ಸ್ತ್ರೀರೋಗ ತಜ್ಞೆಯರು ನಗರದಲ್ಲಿರುವುದರಿಂದ ಇವರು ಯಾರೆಂದು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ.
ಒಂದೇ ಕೋಣೆಯಲ್ಲಿ ಮಲಗಿದ್ದೆವು... 2002ರಲ್ಲಿ ಶೋಯಿಬ್ ನನ್ನನ್ನು ಮದುವೆಯಾದ ನಂತರ ನಾನು ಮತ್ತು ಅವರು ಒಂದೇ ಕೋಣೆಯಲ್ಲಿ ತಂಗಿರುವುದಕ್ಕೆ ಇಬ್ಬರು ಸಾಕ್ಷಿಗಳಿದ್ದಾರೆ ಎಂದು ಆಯೇಶಾ ಸಿದ್ಧಿಕಿ ಹೇಳಿಕೊಂಡಿದ್ದಾಳೆ.
ಈ ಹಿಂದೆ 'ಹಾಲಿಡೇ ಇನ್' ಎಂದು ಕರೆಸಿಕೊಳ್ಳುತ್ತಿದ್ದ 'ತಾಜ್ ರೆಸಿಡೆನ್ಸಿ'ಯಲ್ಲಿ ನಾವು ಎರಡು ಬಾರಿ ತಂಗಿದ್ದೆವು. ಇದನ್ನು ರುಜುವಾತುಪಡಿಸಲು ನಮ್ಮಲ್ಲಿ ಸಾಕಷ್ಟು ಸಾಕ್ಷಿಗಳಿವೆ. ಆ ಹೊಟೇಲ್‌ನ ಇಬ್ಬರು ಸಿಬ್ಬಂದಿಗಳಿಗೆ ಇದು ಗೊತ್ತು. ಅಗತ್ಯ ಬಿದ್ದಾಗ ಇದನ್ನು ನಾವು ಬಳಸಿಕೊಳ್ಳುತ್ತೇವೆ ಎಂದು ಆಯೇಶಾ ಪಾಕಿಸ್ತಾನದ ಟಿವಿ ಚಾನೆಲ್ ಒಂದಕ್ಕೆ ತಿಳಿಸಿದ್ದಾಳೆ.
PR
ನೀವು ಜತೆಯಾಗಿ ಜೀವನ ಸಾಗಿಸಿದ್ದೀರಾ ಎಂದು ನೀವು ಪ್ರಶ್ನಿಸುವುದಾದರೆ ನಾನು ಹೌದು ಎಂದು ಹೇಳುತ್ತೇನೆ. ಆದರೆ ಇದನ್ನು ರುಜುವಾತುಪಡಿಸಬೇಕಾಗಿ ಬಂದಿರುವುದು ನನ್ನ ದುರದೃಷ್ಟ. ಆದರೆ ನನ್ನಲ್ಲಿ ಅದಕ್ಕೆ ಸಾಕ್ಷಿಗಳಿವೆ. ಶೋಯಿಬ್ ಮತ್ತು ನಾನು ತಂಗಿದ್ದ ಕೊಠಡಿಗೆ ಉಪಹಾರ ಮತ್ತು ಇತರ ಸೇವೆಗಳನ್ನು ಒದಗಿಸಿದ್ದ ಇಬ್ಬರು ಸಿಬ್ಬಂದಿಗಳು ಸಾಕ್ಷಿ ಹೇಳಲು ಸಿದ್ಧರಿದ್ದಾರೆ. ಇದನ್ನು ನ್ಯಾಯಾಲಯದಲ್ಲಿ ನಾವು ಬಳಸಿಕೊಳ್ಳುತ್ತೇವೆ ಎಂದು ಅವರ ಹೆಸರು ಬಹಿರಂಗಪಡಿಸದೆ ಆಯೇಶಾ ವಿವರಣೆ ನೀಡಿದ್ದಾಳೆ.
ಆಯೇಶಾ ಜತೆಗಿನ ನಿಖಾ ಅಸಿಂಧು... ಹೀಗೆಂದು ಹೇಳಿರುವುದು ಪ್ರಕರಣದ ನಿಜವಾದ ಬಲಿಪಶು ಎಂದು ವಾದಿಸುತ್ತಿರುವ ಕ್ರಿಕೆಟಿಗ ಶೋಯಿಬ್ ಮಲಿಕ್. ಅವರು ಭಾನುವಾರ ಸುಮಾರು ಎರಡು ಪುಟಗಳಷ್ಟು ಸುದೀರ್ಘವಾದ ವಿವರಣೆಗಳುಳ್ಳ ಪತ್ರಿಕಾ ಹೇಳಿಕೆಯನ್ನು ಸಾನಿಯಾ ಮಿರ್ಜಾ ಮನೆಯ ಹೊರಗಡೆ ಪತ್ರಕರ್ತರಿಗೆ ಹಂಚಿದ್ದಾರೆ.
23ರ ಹರೆಯದ ಸಾನಿಯಾ ಜತೆ 28ರ ಹರೆಯದ ಶೋಯಿಬ್ ಏಪ್ರಿಲ್ 15ರಂದು ಹೈದರಾಬಾದ್‌ನಲ್ಲಿ ಮದುವೆಯಾಗಲಿದ್ದಾರೆ. ಅದೇ ದಿನ ತಾಜ್ ಕೃಷ್ಣ ಹೊಟೇಲಿನಲ್ಲಿ ಔತಣ ಕೂಟವನ್ನು ಏರ್ಪಡಿಸಲಾಗುತ್ತದೆ ಎಂದು ಈ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆಯೇಶಾ ಸಿದ್ಧಿಕಿ ಪ್ರಕರಣದ ಕುರಿತಂತೆ ಸುದೀರ್ಘ ವಿವರಣೆ ನೀಡಿರುವ ('ಆಯೇಶಾ ಮೋಸಗಾತಿ, ಸಾನಿಯಾಳೇ ನನ್ನ ಮೊದಲ ಪತ್ನಿ: ಶೋಯಿಬ್
' ವರದಿಯನ್ನು ಓದಿ) ಶೋಯಿಬ್, ಆ ಮದುವೆಯೇ ಅಸಿಂಧುವಾಗಿರುವುದರಿಂದ ವಿಚ್ಚೇದನ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.
ಅವರೀಗ ಡೈವೋರ್ಸ್ ನೀಡಬೇಕೆಂದು ಹೇಳುತ್ತಿದ್ದಾರೆ. ಇಲ್ಲಿ ನಿಖಾವೇ ನಡೆದಿಲ್ಲ. ನನ್ನನ್ನು ಮೋಸ ಮಾಡುವ ಉದ್ದೇಶದಿಂದ ಅದನ್ನು ನಡೆಸಲಾಗಿದೆ. ಇಸ್ಲಾಂನಲ್ಲಿ ನಿಖಾ ಊರ್ಜಿತವಾಗಿದ್ದರೆ ಮಾತ್ರ ವಿಚ್ಛೇದನಕ್ಕೆ ಅವಕಾಶವಿದೆ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನಗಳ ಮಾಧ್ಯಮಗಳಲ್ಲಿ ತರಹೇವಾರಿ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನಾನು ಬಿಡುಗಡೆ ಮಾಡಿದ್ದೇನೆ. ಇಡೀ ಪ್ರಕರಣವನ್ನು ನಾನು ಸಂಪೂರ್ಣವಾಗಿ ಬಿಚ್ಚಿಟ್ಟಿದ್ದೇನೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ನನಗೆ ಸಂಬಂಧವೇ ಇಲ್ಲದ ಭಾವಚಿತ್ರವನ್ನು ತೋರಿಸಿ, ಆಯೇಶಾ ಎನ್ನುವ ಯುವತಿ ಮೋಸ ಮಾಡಿದ್ದಳು. ಹಾಗಾಗಿ ಸಾನಿಯಾಳೇ ನನ್ನ ಮೊದಲ ಪತ್ನಿ ಎಂದು ಶೋಯಿಬ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಿಗೆ ಕುಣಿದು ಕುಪ್ಪಳಿಸಿದ ಭಾವೀ ದಂಪತಿಗಳು.. ಹೈದರಾಬಾದ್‌ನಲ್ಲಿರುವ ಸಾನಿಯಾ ಮನೆಗೆ ಶುಕ್ರವಾರ ರಾತ್ರಿಯೇ ಆಗಮಿಸಿರುವ ಶೋಯಿಬ್, ತನ್ನ ಭಾವೀ ಪತ್ನಿ ಜತೆ ಶನಿವಾರ ರಾತ್ರಿ ಕುಣಿದು ಕುಪ್ಪಳಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇಲ್ಲಿನ ಜುಬಿಲಿ ಹಿಲ್ಸ್‌ನಲ್ಲಿರುವ ಮನೆಯಿಂದ ಶೋಯಿಬ್ ಹೊರಗೆ ಬಂದೇ ಇಲ್ಲ. ಆದರೆ ಸಾನಿಯಾ ಸಂಬಂಧಿಗಳು ಮತ್ತು ಗೆಳೆಯರು ತಡರಾತ್ರಿಯವರೆಗೂ ಭೇಟಿ ನೀಡುತ್ತಿದ್ದರು. ಮೂಲಗಳ ಪ್ರಕಾರ ಈ ಸಂದರ್ಭದಲ್ಲಿ ಮದುವೆ ಸಂಭ್ರಮವನ್ನು ಆಚರಿಸಿಕೊಳ್ಳಲಾಗಿದೆ.
ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ಸ್ನೇಹಿತರೊಂದಿಗೆ ಶೋಯಿಬ್ ಮತ್ತು ಸಾನಿಯಾ ನರ್ತಿಸಿದ್ದರು. ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು ಎಂದು ಕೆಲವು ವಾರ್ತಾವಾಹಿನಿಗಳು ವೀಡಿಯೋ ಸಮೇತ ವರದಿ ಮಾಡಿವೆ.
ಮತ್ತೊಂದು ಮೂಲದ ಪ್ರಕಾರ ಮದುವೆಯನ್ನು ಏಪ್ರಿಲ್ 15ಕ್ಕೂ ಮೊದಲು ನಡೆಸಲಾಗುತ್ತದೆ. ಏಪ್ರಿಲ್ 15ರಂದು ಮದುವೆಯಾಗುತ್ತೇವೆ ಎಂದು ಹೇಳುತ್ತಾ ಅದಕ್ಕೂ ಮೊದಲು ಅನಿರೀಕ್ಷಿತವಾಗಿ ಮದುವೆ ಮಾಡಿಕೊಳ್ಳುವ ಮೂಲಕ ಸಿದ್ಧಿಕಿ ಕುಟುಂಬಕ್ಕೆ ನಿರಾಸೆಯನ್ನುಂಟು ಮಾಡುವುದು ಅವರ ಉದ್ದೇಶ. ಅದಕ್ಕಾಗಿ ಖಾಜಿಯೊಬ್ಬರ ಜತೆ ಸಾನಿಯಾ ಕುಟುಂಬ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದಲ್ಲಿ ಕರುಣೆ ಗಿಟ್ಟಿಸಿದ ಆಯೇಶಾ... ಶೋಯಿಬ್ ಮಲಿಕ್‌ರಿಂದ ವಂಚನೆಗೊಳಗಾಗಿದ್ದಾಳೆ ಎಂಬ ಆರೋಪದಿಂದ ಹೈದರಾಬಾದ್ ಹುಡುಗಿ ಆಯೇಶಾ ಸಿದ್ಧಿಕಿ ಬಲಿಪಶುವಾಗುತ್ತಿದ್ದಾಳೆ ಎಂಬ ವರದಿಗಳಿಂದ ಆಕೆ ಪಾಕಿಸ್ತಾನದಲ್ಲೂ ಕರುಣೆ ಗಿಟ್ಟಿಸಿಕೊಂಡಿದ್ದಾಳೆ.
ಸಾನಿಯಾ ಮತ್ತು ಶೋಯಿಬ್ ಮದುವೆ ಕುರಿತು ನಡೆಯುತ್ತಿದ್ದ ಸಮೀಕ್ಷೆಯೊಂದರಲ್ಲಿ ಶೇ.62ರಷ್ಟು ಮಂದಿ ಶೋಯಿಬ್‌ರನ್ನು ದೂರಿದ್ದರೆ, ಶೇ.38ರಷ್ಟು ಮಂದಿ ಆಯೇಶಾಳದ್ದೇ ತಪ್ಪು ಎಂದು ಮತ ಚಲಾಯಿಸಿದ್ದಾರೆ.
ಶುಕ್ರವಾರ ರಾತ್ರಿ ಆಯೇಶಾ ತಂದೆ ಮತ್ತು ತಾಯಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಪಾಕಿಸ್ತಾನದಲ್ಲಿ ಆಯೇಶಾ ಪರ ವಾದಿಸುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದ್ದು, ಹೆಚ್ಚಿನವರು ಶೋಯಿಬ್ ಮೋಸ ಮಾಡಿದ್ದಾರೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.