ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಂ ವಿ.ವಿ. ಸಲಿಂಗಕಾಮಿ ಪ್ರೊಫೆಸರ್ ನಿಗೂಢ ಸಾವು
(Aligarh Muslim University | professor | sex with rickshaw-puller | Shrinivas Ramchandra)
ರಿಕ್ಷಾವಾಲಾನೊಬ್ಬನ ಜತೆ ಕಾಲೇಜು ಕ್ಯಾಂಪಸ್ಸಿನಲ್ಲೇ ಸೆಕ್ಸ್ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದು ಅಮಾನತಿಗೊಳಗಾಗಿದ್ದ ಆಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀನಿವಾಸ್ ರಾಮಚಂದ್ರ ಸಿರಸ್ ನಿಗೂಢವಾಗಿ ಸಾವನ್ನಪ್ಪಿದ್ದು, ಕೂಲಂಕಷ ತನಿಖೆ ನಡೆಸಬೇಕೆಂದು ಶಿಕ್ಷಕರ ಸಂಘಟನೆ ಆಗ್ರಹಿಸಿದೆ.
ಆಲಿಘಢದಲ್ಲಿನ ಕ್ವಾರ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಖಾಸಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಒಳಗಿನಿಂದ ಲಾಕ್ ಮಾಡಲ್ಪಟ್ಟಿದ್ದ ಕೊಠಡಿಯ ಬಾಗಿಲನ್ನು ಒಡೆದು ಪೊಲೀಸರು ಒಳ ಪ್ರವೇಶಿಸಿದ್ದರು. ಆದರೂ ಇದರ ಹಿಂದೆ ಅವರ ವಿರೋಧಿ ಶಕ್ತಿಗಳ ಕೈವಾಡವಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಆಲಿಘಢ ಮುಸ್ಲಿಂ ಯುನಿವರ್ಸಿಟಿಯಲ್ಲಿ 'ಭಾರತದ ಆಧುನಿಕ ಭಾಷೆಗಳು' ವಿಭಾಗದ ಅಧ್ಯಕ್ಷ ಹಾಗೂ ರೀಡರ್ ಆಗಿದ್ದ ಡಾ. ಶ್ರೀನಿವಾಸ್ ರಾಮಚಂದ್ರ ಸಿರಸ್ ಅವರು ರಿಕ್ಷಾ ಚಾಲಕನೊಬ್ಬನ ಜತೆ ಕಾಲೇಜು ಆವರಣದಲ್ಲಿ ತನಗೆ ನೀಡಲಾಗಿದ್ದ ಮನೆಯಲ್ಲಿ ಸಲಿಂಗಕಾಮ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಗಳನ್ನು ಕಳ್ಳತನದಿಂದ ವೀಡಿಯೋ ಚಿತ್ರೀಕರಣ ನಡೆಸಿದ್ದರು. ಬಳಿಕ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳಿಗೆ ಇದನ್ನು ಕಳುಹಿಸಿದ್ದರು.
ಈ ಹಿನ್ನೆಲೆಯಲ್ಲಿ ವಿದ್ಯಾಲಯ ಅವರನ್ನು ಕ್ಷಮಿಸುವುದಿಲ್ಲ. ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಫೆಬ್ರವರಿಯಲ್ಲಿ ಆಲಿಘಢ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಕೆ. ಅಬ್ದುಲ್ ಅಜೀಜ್ ತಿಳಿಸಿದ್ದರು.
ಮರುನೇಮಕಗೊಂಡಿದ್ದರು.. ಸಲಿಂಗಕಾಮದ ಕಾರಣಕ್ಕಾಗಿ ಯುನಿವರ್ಸಿಟಿ ಅಮಾನತು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ ಫ್ರೊಫೆಸರ್‌ಗೆ ಜಯ ಸಿಕ್ಕಿತ್ತು. ತಕ್ಷಣವೇ ಅಮಾನತನ್ನು ರದ್ದುಗೊಳಿಸಿ, ಶ್ರೀನಿವಾಸ್ ಅವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವೆಂದು ಪರಿಗಣಿಸಿ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕೆಂದು ಇದೀಗ ಆಲಿಘಢ ಮುಸ್ಲಿಂ ಯುನಿವರ್ಸಿಟಿ ಟೀಚರ್ಸ್ ಅಸೋಸಿಯೇಷನ್ ಆಗ್ರಹಿಸಿದೆ.
ಸಂಪೂರ್ಣ ಪ್ರಕರಣವು ಸೂಕ್ಷ್ಮ ವಿಚಾರವೆಂದು ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಈ ಸಂಘಟನೆಯ ಕಾರ್ಯದರ್ಶಿ ಜೆಮ್‌ಶೆಡ್ ಸಿದ್ಧಿಕಿ ಒತ್ತಾಯಸಿದ್ದಾರೆ.
ಆದರೆ ಪೊಲೀಸರು ತಕ್ಷಣಕ್ಕೆ ಯಾವುದೇ ನಿಲುವನ್ನು ಪ್ರಕಟಿಸಲು ನಿರಾಕರಿಸಿದ್ದಾರೆ. ಪಕ್ಕದ ಮನೆಯವರು ಪ್ರೊಫೆಸರ್ ಕೊಠಡಿಯಿಂದ ವಾಸನೆ ಬರುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅವರ ಶವದ ಬಾಯಿಯಲ್ಲಿ ರಕ್ತ ಬಂದಿರುವ ಕುರುಹುಗಳು ಪತ್ತೆಯಾಗಿದ್ದವು.
ಹಾಗಾಗಿ ಇದು ಆತ್ಮಹತ್ಯೆಯೋ ಅಥವಾ ಹೃದಯಾಘಾತವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಶವಪರೀಕ್ಷೆ ವರದಿ ಮತ್ತು ತನಿಖೆಯ ನಂತರ ಸಾವಿನ ಹಿಂದಿನ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.