ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತರೂರ್ ರಾಜೀನಾಮೆ ಯಾಕಿಲ್ಲ?: ಪ್ರಧಾನಿ ಸಿಂಗ್‌ಗೆ ಬಿಜೆಪಿ ಪ್ರಶ್ನೆ (Shashi Tharoor | Manmohan Singh | BJP | IPL)
Bookmark and Share Feedback Print
 
ಕೊಚ್ಚಿ ಐಪಿಎಲ್ ಕುರಿತ ವಿವಾದಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಲೋಕಸಭೆಯಲ್ಲಿ ಶಶಿ ತರೂರ್ ನೀಡಿರುವ ವೈಯಕ್ತಿಕ ವಿವರಣೆಯಿಂದ ತೃಪ್ತವಾಗದ ಬಿಜೆಪಿ ಇದೀಗ ಕೇಂದ್ರ ಸಚಿವರು ರಾಜೀನಾಮೆ ನೀಡದೆ ಇರಲು ಕಾರಣವೇನು ಎಂಬುದನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಸಂಸತ್ತಿಗೆ ವಿವರಿಸಬೇಕು ಎಂದು ಆಗ್ರಹಿಸಿದ್ದು, ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದೆ.

ಇದನ್ನೂ ಓದಿ - ನಾನೇನೂ ತಪ್ಪು ಮಾಡಿಲ್ಲ: ಲೋಕಸಭೆಯಲ್ಲಿ ತರೂರ್ ಸಮರ್ಥನೆ

ವಿದೇಶ ಪ್ರವಾಸವನ್ನು ಮುಗಿಸಿಕೊಂಡು ವಾಪಸಾದ ತಕ್ಷಣ ಪ್ರಧಾನ ಮಂತ್ರಿಯವರು ಶಶಿ ತರೂರ್ ಅವರು ತನ್ನ ಹುದ್ದೆಗೆ ಯಾಕೆ ರಾಜೀನಾಮೆ ನೀಡಿಲ್ಲ ಎಂಬುದನ್ನು ಸಂಸತ್ತಿಗೆ ವಿವರಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ ಎಂದು ಪಕ್ಷದ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿರುವ ತರೂರ್ ಲೋಕಸಭೆಯಲ್ಲಿ ಸಂಸದರಾಗಿ (ಸಚಿವರಾಗಿ ಹೇಳಿಕೆ ನೀಡಿರಲಿಲ್ಲ) ಹೇಳಿಕೆ ನೀಡಿರುವುದನ್ನು ಕೂಡ ಬಿಜೆಪಿ ಆಕ್ಷೇಪಿಸಿದ್ದು, ಈ ಕುರಿತು ಸರಕಾರವು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.

ಅಲ್ಲದೆ ವಿರೋಧ ಪಕ್ಷಗಳನ್ನು ತರೂರ್ ಅವರು ಹೆಚ್ಚೇನೂ ತಿಳಿಯದ ಮೂರ್ಖರು ಅಥವಾ ಮುಗ್ಧರು ಎಂದು ಪರಿಗಣಿಸಿದ್ದಾರೆ ಎಂದೂ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಆರೋಪಿಸಿದೆ.

ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಳ್ಳಬಹುದಾದಂತಹ ವಿಸ್ತೃತ ಚರ್ಚೆ ಸಂಸತ್ತಿನಲ್ಲಿ ನಡೆಯಬೇಕು ಎನ್ನುವುದು ಕೂಡ ಬಿಜೆಪಿ ಬೇಡಿಕೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಪರಿಚ್ಛೇದಗಳಡಿಯಲ್ಲಿ ತನ್ನ ಆಪ್ತ ಸಹಾಯಕರ ಮೂಲಕ ಆರ್ಥಿಕ ಲಾಭವನ್ನು ಸ್ವೀಕರಿಸಿದ ಸಂಬಂಧ ತರೂರ್ ಅಪರಾಧಿಯಾಗಿದ್ದಾರೆ ಎಂದು ವಾದಿಸಿರುವ ಬಿಜೆಪಿ, ಸಚಿವರನ್ನು ವಜಾಗೊಳಿಸಲು ಹಲವು ಕಾರಣಗಳನ್ನು ಮುಂದಿಟ್ಟಿದೆ.

ತಾನು ರೆಂಡೆಜ್ವಾಸ್ ಸ್ಪೋರ್ಟ್ಸ್ ವರ್ಲ್ಡ್ ಸಂಸ್ಥೆಯ ಮಾರ್ಗದರ್ಶಿ ಎಂಬುದನ್ನು ತರೂರ್ ನಿರಾಕರಿಸಿಲ್ಲ. ತನ್ನ ಸಹಾಯಕ ಜೇಕಬ್ ಜೋಸೆಫ್ ಅವರು ಐಪಿಎಲ್‌ನ ಕೊಚ್ಚಿ ಫ್ರಾಂಚೈಸಿ ಹರಾಜಿನ ಸಂದರ್ಭದಲ್ಲಿ ಹಾಜರಿದ್ದುದನ್ನು ಕೂಡ ಅವರು ತಳ್ಳಿ ಹಾಕುತ್ತಿಲ್ಲ. ತರೂರ್ ಅವರ ಆಪ್ತ ಗೆಳತಿ ಎಂದು ಹೇಳಲಾಗುತ್ತಿರುವ ಸುನಂದಾ ಪುಷ್ಕರ್ ಅವರು ಫ್ರಾಂಚೈಸಿ ಅಥವಾ ಕೇರಳ ಅಥವಾ ಕ್ರಿಕೆಟ್‌ಗಾಗಿ ಯಾವತ್ತೂ ಯಾವುದೇ ರೀತಿಯ ಸಹಕಾರ ನೀಡಿಲ್ಲ ಎನ್ನುವುದು ಕೂಡ ಒಂದು ಪ್ರಶ್ನೆಯಾಗಿಯೇ ಉಳಿದಿದೆ ಎಂದು ಪ್ರಸಾದ್ ಹೇಳಿದ್ದಾರೆ.

ತನ್ನ ಮೇಲಿನ ಆರೋಪಗಳಿಗೆ ಇಂದು ಲೋಕಸಭೆಯಲ್ಲಿ ಉತ್ತರಿಸಿದ್ದ ತರೂರ್ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಆರೋಪಗಳು ನಿರಾಧಾರವಾದುವು ಮತ್ತು ದುರುದ್ದೇಶಪೂರ್ವಕವಾದುವು ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ