ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫೋನ್ ಟ್ಯಾಪ್; 'ಕಾಂ' ತುರ್ತುಪರಿಸ್ಥಿತಿಗೆ ಮರಳುತ್ತಿದೆ: ಬಿಜೆಪಿ (Digvijay Singh | Sharad Pawar | Prakash Karat | Nitish Kumar)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಬೆಲೆಯೇರಿಕೆ, ಶಶಿ ತರೂರ್, ಪ್ರಫುಲ್ ಪಟೇಲ್, ಶರದ್ ಪವಾರ್ ವಿವಾದಗಳ ನಂತರ ಇದೀಗ ದೂರವಾಣಿ ಕದ್ದಾಲಿಕೆ ಕಳಂಕ ಅಂಟಿಕೊಂಡಿದೆ. ಇದು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಎಬ್ಬಿಸುವ ಮುನ್ಸೂಚನೆಗಳೂ ಕಾಣಿಸಿಕೊಂಡಿವೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಎನ್‌ಸಿಪಿ ನಾಯಕ ಹಾಗೂ ಕೇಂದ್ರ ಕೃಷಿ ಮತ್ತು ಆಹಾರ ಖಾತೆ ಸಚಿವ ಶರದ್ ಪವಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ದೂರವಾಣಿಗಳನ್ನು ಕೇಂದ್ರ ಸರಕಾರ ಕದ್ದಾಲಿಕೆ ನಡೆಸಿದೆ ಎಂದು 'ಓಟ್‌ಲುಕ್' ಪತ್ರಿಕೆ ವಿಶೇಷ ತನಿಖಾ ವರದಿಯನ್ನು ಪ್ರಕಟಿಸಿತ್ತು.

ವರದಿಯ ಪ್ರಕಾರ ಫೋನ್ ಕದ್ದಾಲಿಕೆ ನಡೆಸಿರುವುದು ರಾಷ್ಟ್ರೀಯ ತಾಂತ್ರಿಕ ಅಧ್ಯಯನ ಸಂಸ್ಥೆ. ಕಾರ್ಗಿಲ್ ಯುದ್ಧದ ನಂತರ ಈ ಬೇಹುಗಾರಿಕಾ ಸಂಸ್ಥೆಯನ್ನು ಕೇಂದ್ರ ಅಸ್ತಿತ್ವಕ್ಕೆ ತಂದಿತ್ತು.

ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಯುಪಿಎ ಸರಕಾರದ ಚಟುವಟಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಅಲ್ಲದೆ ಸೋಮವಾರ ಇದನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರಸ್ತಾಪಿಸಿ, ಸರಕಾರದಿಂದ ಸ್ಪಷ್ಟನೆ ಬಯಸುವುದಾಗಿ ಪಕ್ಷಗಳು ಹೇಳಿಕೊಂಡಿವೆ.

ಕಾಂಗ್ರೆಸ್ ತುರ್ತು ಪರಿಸ್ಥಿತಿಗೆ ಮರಳುತ್ತಿದೆ: ಬಿಜೆಪಿ
ಹಲವು ರಾಜಕೀಯ ನಾಯಕರ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಪ್ರಮುಖ ವಿರೋಧ ಪಕ್ಷ ಬಿಜೆಪಿ ಪ್ರತಿಕ್ರಿಯಿಸಿರುವುದು ಹೀಗೆ.

ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಯಾವ ರೀತಿಯಲ್ಲೂ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ತನ್ನ ತುರ್ತು ಪರಿಸ್ಥಿತಿಯ ಮನೋಧರ್ಮಕ್ಕೆ ಮರಳುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.

ಭಯೋತ್ಪಾದಕರ ಅಥವಾ ತೆರಿಗೆ ವಂಚಕರ ಅಥವಾ ಪ್ರತ್ಯೇಕತಾವಾದಿಗಳ ದೂರವಾಣಿಗಳನ್ನು ಸರಕಾರ ಕದ್ದಾಲಿಕೆ ನಡೆಸಿದರೆ ಅದನ್ನು ರಾಷ್ಟ್ರೀಯ ಹಿತಾಸಕ್ತಿ ಎಂದುಕೊಳ್ಳಬಹುದು ಮತ್ತು ಇದರಲ್ಲಿ ರಾಷ್ಟ್ರೀಯ ಸುರಕ್ಷತೆ ವಿಚಾರ ಒಳಗೊಂಡಿರುತ್ತದೆ. ಆದರೆ ರಾಜಕಾರಣಿಗಳು ಮತ್ತು ಸಚಿವರುಗಳ ದೂರವಾಣಿ ಕದ್ದಾಲಿಸುವುದು ಖಂಡನೀಯ ಎಂದು ರಾಜ್ಯಸಭೆಯ ಬಿಜೆಪಿ ಉಪನಾಯಕ ಎಸ್.ಎಸ್. ಅಹ್ಲುವಾಲಿಯಾ ತಿಳಿಸಿದ್ದಾರೆ.

ನಾನು ದೇಶಕ್ಕೆ ಬೆದರಿಕೆಯೇ?: ನಿತೀಶ್ ಪ್ರಶ್ನೆ
ಕೇಂದ್ರ ಸರಕಾರವು ತನ್ನ ದೂರವಾಣಿಯನ್ನು ಕದ್ದಾಲಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಇದು ಕಾನೂನು ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಬಣ್ಣಿಸಿದ್ದಾರೆ.

ಇದು ಸಂಪೂರ್ಣವಾಗಿ ಅಕ್ರಮ. ಇಂತಹ ಕೃತ್ಯಗಳು ವಿಪತ್ಕಾರಕವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಹೊಡೆತ. ನಾನು ದೇಶಕ್ಕೆ ಯಾವ ರೀತಿಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ್ದೇನೆ ಎಂಬುದು ನನಗೆ ತಿಳಿಯುತ್ತಿಲ್ಲ. ಪ್ರಜಾಪ್ರಭುತ್ವ ನೀತಿಗಳಡಿಯಲ್ಲಿ ಯಾರದ್ದೇ ಆದರೂ ಫೋನ್ ಕದ್ದಾಲಿಸಲು ಅನುಮತಿಯಿಲ್ಲ. ಇದನ್ನು ನಾನು ತೀವ್ರವಾಗಿ ಆಕ್ಷೇಪಿಸುತ್ತೇನೆ ಮತ್ತು ಪ್ರತಿಭಟಿಸುತ್ತೇನೆ ಎಂದು ಜೆಡಿಯು ನಾಯಕ ಹೇಳಿದ್ದಾರೆ.

ಫೋನ್ ಟ್ಯಾಪಿಂಗ್ ಅಸಹನೀಯ: ಕಾರಟ್
ಯುಪಿಎ ಸರಕಾರ ತನ್ನ ದೂರವಾಣಿ ಕದ್ದಾಲಿಕೆ ಮಾಡಿರುವುದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಇದು ಕಾನೂನು ಬಾಹಿರ ಮತ್ತು ಅಸಹನೀಯ ಎಂದು ಪ್ರತಿಕ್ರಿಯಿಸಿದ್ದಾರೆ.

ಇದರ ಸಂಪೂರ್ಣ ಜವಾಬ್ದಾರಿ ಸ್ವತಃ ಯುಪಿಎ ಸರಕಾರದ್ದಾಗಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಮುಂದೆ ಈ ರೀತಿಯಲ್ಲಿ ಭದ್ರತಾ ಸಂಸ್ಥೆಗಳ ದುರುಪಯೋಗವಾಗದಂತೆ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಇನ್ನೂ ಖಚಿತವಾಗಿಲ್ಲ: ಎನ್‌ಸಿಪಿ
ತನ್ನದೇ ಪಕ್ಷದ ಮುಖಂಡ ಹಾಗೂ ಕೇಂದ್ರ ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್ ಹಾಗೂ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ನಡುವಿನ ಮಾತುಕತೆಯನ್ನು ಕದ್ದಾಲಿಸಲಾಗಿದೆ ಎಂಬ ವರದಿಗಳಿಗೆ ತಕ್ಷಣ ಪ್ರತಿಕ್ರಿಯಿಸದೆ ಎನ್‌ಸಿಪಿ ನಿಧಾನಗತಿಯ ಬ್ಯಾಟಿಂಗ್ ಆಯ್ದುಕೊಂಡಿದೆ.

ದೂರವಾಣಿ ಕದ್ದಾಲಿಕೆ ಇನ್ನೂ ಖಚಿತವಾಗಿಲ್ಲ. ಕೆಲವು ಪ್ರಬಲ ಸಾಕ್ಷ್ಯಗಳಿಗಾಗಿ ಕಾಯೋಣ ಎಂದು ಎನ್‌ಸಿಪಿ ನಾಯಕ ತಾರಿಖ್ ಅನ್ವರ್ ತಿಳಿಸಿದ್ದಾರೆ.

ಸರಕಾರ ಉತ್ತರಿಸಲಿ: ಕಾಂಗ್ರೆಸ್
ಅಧಿಕಾರದಲ್ಲಿರುವವರು ಸೇರಿದಂತೆ ಹಲವು ರಾಜಕಾರಣಿಗಳ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಹೆಚ್ಚು ಮಹತ್ವ ಕೊಡದ ಕಾಂಗ್ರೆಸ್, ಈ ಕುರಿತು ವಿವರಣೆ ನೀಡುವುದು ಸರಕಾರದ ಕೆಲಸ ಎಂದಿದೆ.

ಅಕ್ರಮವಾಗಿ ದೂರವಾಣಿ ಕದ್ದಾಲಿಸುವುದು ಸಮರ್ಥನೀಯವಲ್ಲ. ಆದರೆ ಈ ಪ್ರಕರಣದಲ್ಲಿ ಫೋನ್ ಟ್ಯಾಪಿಂಗ್ ಮಾಡಲಾಗಿದೆಯೇ ಅಥವಾ ಇಲ್ಲವೇ, ಇದು ಕಾನೂನು ಬಾಹಿರವೇ ಅಥವಾ ಕಾನೂನಿನ ಪ್ರಕಾರ ನಡೆಸಲಾಗಿದೆಯೇ ಎಂಬುದನ್ನು ಸರಕಾರವೇ ವಿವರಿಸಬೇಕಿದೆ ಎಂದು ಪಕ್ಷದ ವಕ್ತಾರ ಶಕೀಲ್ ಅಹ್ಮದ್ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು:
** ಪವಾರ್, ಕಾರಟ್ ಟೆಲಿಫೋನ್ ಕದ್ದಾಲಿಸಿದ ಕೇಂದ್ರ!
ಸಂಬಂಧಿತ ಮಾಹಿತಿ ಹುಡುಕಿ