ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಧರ್ಮಗುರು ವಿರುದ್ಧ ಬೆಂಗಳೂರು ಹುಡ್ಗೀರಿಂದ್ಲೂ 'ಬೂಬ್‌ಕ್ವೇಕ್'!
(Boobquake | earthquake | Ayatollah Kazem Sedighi | Jennifer McCreight)
ಧರ್ಮಗುರು ವಿರುದ್ಧ ಬೆಂಗಳೂರು ಹುಡ್ಗೀರಿಂದ್ಲೂ 'ಬೂಬ್‌ಕ್ವೇಕ್'!
ನವದೆಹಲಿ, ಸೋಮವಾರ, 26 ಏಪ್ರಿಲ್ 2010( 14:56 IST )
ಸ್ತ್ರೀಯರು ಅಶ್ಲೀಲವಾಗಿ ಬಟ್ಟೆ ಧರಿಸುವುದರಿಂದ ಭೂಕಂಪಗಳು ಸಂಭವಿಸುತ್ತಿವೆ ಇರಾನ್ ಧರ್ಮಗುರು ಮಾಡಿರುವ ಆರೋಪಕ್ಕೆ ಪ್ರತಿಯಾಗಿ ಇಂದು ವಿಶ್ವದಾದ್ಯಂತ ಎದೆಯನ್ನು ಅಲ್ಪಪ್ರಮಾಣದಲ್ಲಿ ತೋರಿಸುವ ಪ್ರತಿಭಟನೆಗಳು ನಡೆಯುತ್ತಿದ್ದು, ಬೆಂಗಳೂರು ಹುಡುಗಿಯರು ಕೂಡ ಬೆಂಬಲ ಸೂಚಿಸಿದ್ದಾರೆ.
ದೈಹಿಕ ಪ್ರದರ್ಶನಕ್ಕೆ ಅನುವಾಗುವಂತಹ ಅನುಚಿತವಾಗಿ ಬಟ್ಟೆ ಧರಿಸಿಕೊಂಡ ಸ್ತ್ರೀಯರಿಂದಾಗಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿದ್ದು, ಇದೇ ಕಾರಣದಿಂದ ದೇಶದಲ್ಲಿ ಭೂಕಂಪಗಳು ಹೆಚ್ಚೆಚ್ಚು ಸಂಭವಿಸುತ್ತಿವೆ ಎಂದು ಇರಾನ್‌ನ ಧಾರ್ಮಿಕ ಮುಖಂಡ ಆಯತೊಲ್ಲಾಹ್ ಕಜೀಮ್ ಸೆಡಿಗೈ ಹೇಳಿಕೆ ನೀಡಿದ್ದರು.
ಇದರ ವಿರುದ್ಧ ಅಮೆರಿಕಾ, ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.
PR
ಅಮೆರಿಕಾದ ಪುರ್ದೇ ಯುನಿವರ್ಸಿಟಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಜೆನ್ನಿಫರ್ ಮೆಕ್‌ರೈಟ್ ಎಂಬಾಕೆ ಸಾಮಾಜಿಕ ಸಂಪರ್ಕ ತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳಲ್ಲಿ 'ಬೂಬ್‌ಕ್ವೇಕ್' ಎಂಬ ಖಾತೆಯನ್ನು ತೆರೆದು, ವಿಶ್ವದಾದ್ಯಂತ ಬೆಂಬಲ ಪಡೆದುಕೊಂಡಿದ್ದಾಳೆ.
ಇರಾನ್ ಧರ್ಮಗುರುವಿನ ಹೇಳಿಕೆಯ ವಿರುದ್ಧ ಇಂದು ನಡೆಸಲಾಗುತ್ತಿರುವ 'ಬೂಬ್‌ಕ್ವೇಕ್' ಚಳವಳಿಗೆ ಭಾರತದಿಂದ ಮಿಶ್ರಫಲ ದೊರೆತಿದೆ. ಆದರೂ ಬೆಂಗಳೂರಿನ ಹುಡುಗಿಯರು ತೀರಾ ಹಿಂದುಳಿಯದೆ, ಇದನ್ನು ಬೆಂಬಲಿಸಿದ್ದಾರೆ ಎಂದು ಪತ್ರಿಕಾ ವರದಿಗಳು ಹೇಳಿವೆ.
ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದರಿಂದ ಭೂಕಂಪಗಳಾಗುತ್ತವೆ ಎಂಬ ಇರಾನ್ ಧಾರ್ಮಿಕ ಗುರುವಿನ ಹೇಳಿಕೆಯನ್ನು ಪ್ರತಿಭಟಿಸುವ ಸಲುವಾಗಿ ಏಪ್ರಿಲ್ 26ರಂದು ಜಗತ್ತಿನ ಎಲ್ಲಾ ಮಹಿಳೆಯರು ತಮ್ಮ ಸ್ತನಗಳ ಸೀಳು ಭಾಗ ಕಾಣುವಂತೆ ಬಟ್ಟೆ ಧರಿಸಬೇಕು ಎಂದು ಮೆಕ್‌ರೈಟ್ ಕರೆ ನೀಡಿದ್ದಳು. ಇದಕ್ಕೆ ಸರಿಸುಮಾರು 50,000ಕ್ಕೂ ಹೆಚ್ಚು ಮಹಿಳೆಯರು ಸ್ಪಂದಿಸಿದ್ದಾರೆ.
ಕೆಲವು ವೆಬ್‌ಸೈಟುಗಳು ಈ ಕುರಿತು ಬರಹ ಹೊಂದಿರುವ ಟಿ-ಶರ್ಟ್‌ಗಳನ್ನು ಕೂಡ ಮಾರಾಟ ಮಾಡುತ್ತಿವೆ.
ನಾವು ಈ ರೀತಿ ನಮ್ಮ ಎದೆಗಳನ್ನು ಅಪಮಾನಕಾರಿಯಾಗಿ ತೋರಿಸುವ ಮೂಲಕ ಭೂಕಂಪ ನಡೆಯುವಂತೆ ಮಾಡಬೇಕು. ಭೂಕಂಪ ನಡೆಯದೇ ಇದ್ದರೆ ಇರಾನ್ ಧರ್ಮಗುರು ಯಾವ ಆಧಾರದಲ್ಲಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಮೆಕ್‌ರೈಟ್ ಹೇಳಿಕೆ ನೀಡಿದ್ದಾಳೆ.
ವ್ಯಾಲೆಂಟೈನ್ಸ್ ಡೇ ಆಚರಣೆಯನ್ನು ವಿರೋಧಿಸಿದ ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಅವರಿಗೆ ಪಿಂಕ್ ಚಡ್ಡಿ ಕಳುಹಿಸಿದ್ದ ಬೃಂದಾ ಆಡಿಗೆ (30) ಸೇರಿದಂತೆ ಹಲವು ಭಾರತೀಯ ಯುವತಿಯರು 'ಬೂಬ್‌ಕ್ವೇಕ್' ಚಳವಳಿಗೆ ಬೆಂಬಲ ಸೂಚಿಸಿದ್ದಾರೆ.