ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಂಡೆದೆಯ ಮಾಧುರಿಗೆ 'ರಾಣಾ' ದೈಹಿಕ ಸಂಬಂಧ ಇಲ್ವಂತೆ! (Madhuri Gupta | ISI | Indian diplomat | Pakistani spy)
Bookmark and Share Feedback Print
 
ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತಳಾಗಿರುವ ಮಾಧುರಿ ಗುಪ್ತಾ ಹೇಳಿರುವ ಮಾತಿದು. ಇವಳ ಜತೆ ಮಿಲಿಟರಿ ಮತ್ತು ಗುಪ್ತಚರ ದಳದ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಹುಟ್ಟಿರುವ ಬೆನ್ನಿಗೆ ಜಮ್ಮು-ಕಾಶ್ಮೀರದ ದಂಪತಿ ಜತೆ ನಿಕಟ ಸಂಬಂಧ ಹೊಂದಿರುವುದೂ ಬಯಲಿಗೆ ಬಂದಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಯಾವತ್ತೂ ಮುಖದ ಮೇಲೆ ಭಾರೀ ಪ್ರಮಾಣದ ಬಣ್ಣ ಮೆತ್ತಿಕೊಂಡು ಮೇಕಪ್ ಮಾಡಿಕೊಳ್ಳುತ್ತಿದ್ದ ಮಾಧುರಿ ಗುಪ್ತಾ, ಠಾಕುಠೀಕಾಗಿಯೇ ಕಾಣಿಸಿಕೊಳ್ಳುತ್ತಿದ್ದವಳು. ಯಾರನ್ನೂ, ಯಾವುದೇ ವಿಚಾರವನ್ನೂ ಹೆಚ್ಚು ಹಚ್ಚಿಕೊಳ್ಳದೆ ತಾನು ನಡೆದದ್ದೇ ದಾರಿ ಎಂಬಂತೆ ಹತ್ತಿರದವರಲ್ಲಿ ಪೋಸ್ ಕೊಡುತ್ತಿದ್ದಳು. ಅದು ಎಲ್ಲಿಯವರೆಗೆ ಎಂದರೆ ತಾನು ಇಸ್ಲಾಮಾಬಾದ್‌ನಿಂದ ಕಾಶ್ಮೀರದವರೆಗೂ ಏಕಾಂಗಿಯಾಗಿ ಕಾರು ಚಲಾಯಿಸಿಕೊಂಡು ಹೋಗಬಲ್ಲೆ ಎಂಬುದನ್ನು ತೋರಿಸಿಕೊಡುವವರೆಗೆ.

ರಜೌರಿ ದಂಪತಿ ಜತೆ ಸಂಪರ್ಕ...
ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ದಂಪತಿ ಜತೆ ಮಾಧುರಿ ನಿಕಟ ಸಂಪರ್ಕದಲ್ಲಿರುವುದು ತನಿಖೆಯ ವೇಳೆಯಲ್ಲಿ ತಿಳಿದು ಬಂದಿದೆ. ಇವರ ಜತೆ ಮಾಧುರಿ ಇಮೇಲ್ ಮತ್ತು ದೂರವಾಣಿಯಲ್ಲಿ ನಿರಂತರ ಸಂಪರ್ಕದಲ್ಲಿದ್ದಳು.
Madhuri Gupta
PR

ರಜೌರಿ ಜಿಲ್ಲೆಯ ಸುಂದರಬಾನಿಯಲ್ಲಿನ ಡಾ. ಖೇಮ್ ರಾಜ್ ಶರ್ಮಾ ಮತ್ತು ಅವರ ಪತ್ನಿ ಡಾ. ಚಂಪಾ ಶರ್ಮಾ ಎಂಬವರೇ ಮಾಧುರಿ ಜತೆ ನಿರಂತರ ಸಂಪರ್ಕ ಹೊಂದಿರುವವರು. ಇವರನ್ನು ನಿನ್ನೆ ರಾತ್ರಿ ತನಿಖಾ ದಳಗಳು ವಿಚಾರಣೆಗೊಳಪಡಿಸಿವೆ.

ಪಾಕಿಸ್ತಾನದ ನೋಂದಣಿ ಹೊಂದಿರುವ ಟೊಯೋಟಾ ವಾಹನದಲ್ಲಿ ವಾಘಾ ಗಡಿಯ ಮೂಲಕ ಸುಂದರಬಾನಿಗೆ ಮಾಧುರಿ ಬಂದಿದ್ದಳು. ಅದೇ ದಿನ ಈ ವೈದ್ಯ ದಂಪತಿಯ ಆಪ್ತ ಸ್ನೇಹಿತೆ ಡಾ. ಪ್ರೇಮಲತಾ ಕೂಡ ಮನೆಗೆ ಬಂದಿದ್ದರು. ಇವರು ಒಟ್ಟು ಸೇರಿ ಜಮ್ಮುವಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮರುದಿನ ಮಾಧುರಿ ಪಾಕಿಸ್ತಾನಕ್ಕೆ ಹೋದರೆ, ಪ್ರೇಮಲತಾ ದೆಹಲಿಯ ತನ್ನ ಮನೆಗೆ ಹೊರಟು ಹೋಗಿದ್ದರು ಎಂದು ತನಿಖಾಧಿಕಾರಿಗಳಲ್ಲಿ ವೈದ್ಯ ದಂಪತಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಜಮ್ಮುವಿನ ಮೀರತ್‌ನಲ್ಲಿ ಕಾರ್ಯನಿರತರಾಗಿದ್ದ ಹಿರಿಯ ಸೇನಾಧಿಕಾರಿಯೊಬ್ಬರು ಈ ರಜೌರಿ ದಂಪತಿಯನ್ನು ಆಗಾಗ ಭೇಟಿ ಮಾಡುತ್ತಿದ್ದರು. ರಜೌರಿ ದಂಪತಿಗೆ ಇವರು (ಡಾ. ಚಂಪಾ ಸಹೋದರ) ಸಂಬಂಧಿಕರಾಗಿದ್ದರೂ, ನಿರಂತರ ಸಂಪರ್ಕದ ಕುರಿತು ಶಂಕೆಗಳಿವೆ. ಈ ದಂಪತಿಗೆ ಮಾಧುರಿ ಸಂಬಂಧವಿರುವುದರಿಂದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಮಾಧುರಿ ಮತ್ತು ರಾಜೌರಿ ಮಹಿಳೆಯ ನಡುವೆ ಹಲವು ಪ್ರಮುಖ ದಾಖಲೆಗಳು ಇಮೇಲ್ ಮೂಲಕ ಪರಸ್ಪರ ರವಾನೆಯಾಗಿದೆ ಎಂದೂ ಹೇಳಲಾಗುತ್ತಿದ್ದು, ಈ ಮಹಿಳೆ ಹಲವು ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಳು ಎಂಬ ಮಾಹಿತಿಯೂ ತನಿಖಾ ದಳಗಳ ಮೂಲಗಳಿಂದ ತಿಳಿದು ಬಂದಿದೆ.

ಬೇಹುಗಾರಿಕೆಗೆ ಸಹಕರಿಸಿಲ್ಲ...
ಹೀಗೆಂದು ಸ್ಪಷ್ಟನೆ ನೀಡಿರುವುದು ರಜೌರಿ ವೈದ್ಯ ದಂಪತಿ. ಭಾರತದ ಟಿವಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ತಾವು ಪಾಕಿಸ್ತಾನ ಪರ ಯಾವುದೇ ರೀತಿಯ ಬೇಹುಗಾರಿಕೆಗೆ ಸಹಕರಿಸಿಲ್ಲ ಎಂದು ತಿಳಿಸಿದ್ದಾರೆ.

ನಮಗೆ ಮಾಧುರಿಯ ಪರಿಚಯವಾಗಿದ್ದು ಗೆಳೆಯರೊಬ್ಬರ (ಡಾ. ಪ್ರೇಮಲತಾ) ಮೂಲಕ. ಮಾರ್ಚ್ ತಿಂಗಳಲ್ಲಿ ಎರಡು ದಿನಗಳ ಕಾಲ ಆಕೆ ನಮ್ಮ ಜತೆಗಿದ್ದರು ಎಂಬುದನ್ನು ಹೊರತುಪಡಿಸಿದರೆ ನಮಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಈ ದಂಪತಿ ಹೇಳಿಕೊಂಡಿದ್ದಾರೆ.

ಮಾಧುರಿ ಇಸ್ಲಾಮಾಬಾದ್‌ನಿಂದ ಕಾರಿನಲ್ಲಿ ಬಂದಿದ್ದಳು. ಆಕೆ ಒಬ್ಬಳೇ ಇಸ್ಲಾಮಾಬಾದ್‌ನಿಂದ ಕಾರನ್ನು ಸ್ವತಃ ಚಲಾಯಿಸಿಕೊಂಡು ಬಂದಿದ್ದನ್ನು ಕಂಡು ನಾನು ಅಚ್ಚರಿಗೊಂಡಿದ್ದೆ. ಆಕೆ ಮಾರ್ಚ್ 29ರಂದು ಇಲ್ಲಿಗೆ ಬಂದಿದ್ದಳು. ಮಾರ್ಚ್ 30ರಂದು ಸೇನೆಯ ಜವಾನನೊಬ್ಬ ಬಂದು ಆಕೆಯ ಕಾರಿನ ಬಗ್ಗೆ ವಿಚಾರಿಸಿದ್ದರು. ಆಕೆ ಇಸ್ಲಾಮಾಬಾದ್‌ನಿಂದ ಈ ಕಾರನ್ನು ಚಾಲನೆ ಮಾಡಿಕೊಂಡು ಬಂದಿದ್ದಾರೆ ಎಂದು ಅವರಿಗೆ ಹೇಳಿದ್ದೆವು. ನಂತರ ಅವರು ಮಾಧುರಿಯನ್ನು ಭೇಟಿಯಾಗಿ, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು ಎಂದು ರಜೌರಿ ದಂಪತಿ ವಿವರಣೆ ನೀಡಿದ್ದಾರೆ.

ರಾಣಾ ಜತೆ ದೈಹಿಕ ಸಂಬಂಧವಿಲ್ಲ...
ಪಾಕಿಸ್ತಾನಿ ಬೇಹುಗಾರಿಕಾ ಸಿಬ್ಬಂದಿ ಎಂದು ಹೇಳಲಾಗಿರುವ ಪತ್ರಕರ್ತ ವೇಷದಲ್ಲಿರುವ 'ಮುದಾಸ್ಸಾರ್ ರಾಣಾ' ಎಂಬ ವ್ಯಕ್ತಿಯ ಜತೆಗಿನ 'ಪ್ರೇಮ' ಸಂಬಂಧದ ಕುರಿತು ತನಿಖಾ ದಳಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಹೀಗೆಂದು ಮಾಧುರಿ ಸ್ಪಷ್ಟಪಡಿಸಿದ್ದಾಳೆ.

53ರ ಹರೆಯದ ಮಾಧುರಿಯ ಪ್ರಕಾರ ರಾಣಾ, ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಸಿಬ್ಬಂದಿಯಲ್ಲ. ಆದರೆ ಐಎಸ್ಐ ಜತೆ ಸಂಬಂಧ ಹೊಂದಿರುವ ಪಾಕಿಸ್ತಾನದ ಮಿಲಿಟರಿ ಕ್ಯಾಪ್ಟನ್ ಜತೆ ರಾಣಾ ಸಂಬಂಧ ಹೊಂದಿದ್ದ ಎಂದು ಆಕೆ ಒಪ್ಪಿಕೊಂಡಿದ್ದು, ರಾಣಾ ಜತೆ ನಾನು ದೈಹಿಕ ಸಂಬಂಧ ಹೊಂದಿರಲಿಲ್ಲ ಎಂದು ತಿಳಿಸಿದ್ದಾಳೆ.

ಅದೇ ಹೊತ್ತಿಗೆ ತನ್ನನ್ನು ಬಂಧಿಸಲು ಇಷ್ಟು ಸಮಯ ಬೇಕಾಯಿತೇ ಎಂದು ತನಿಖಾ ದಳದ ಅಧಿಕಾರಿಗಳನ್ನೇ ಪ್ರಶ್ನಿಸಿರುವ ಆಕೆ, ತನಗೆ ಭಡ್ತಿ ನೀಡದೇ ಇರುವ ವಿದೇಶಾಂಗ ಇಲಾಖೆ ಅಧಿಕಾರಿಗಳ ಮೇಲೆ ಸೇಡಿಗಾಗಿ ತಾನು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾಳೆ ಎಂದು ಮೂಲಗಳು ಹೇಳಿವೆ.

ಇಂಗ್ಲೀಷ್ ಪತ್ರಿಕೆಗಳು ಬೋರೋಬೋರು..
ಅಲ್ಪಾವಧಿಯಲ್ಲಿ ಉರ್ದು ಭಾಷೆಯನ್ನು ಕಲಿತು ಪರಿಣತಿ ಹೊಂದಿದ್ದ ಗುಪ್ತಾ ಮಾಧ್ಯಮ ವಿಭಾಗದಲ್ಲೇ ಕೆಲಸ ಮಾಡುತ್ತಿದ್ದುದರಿಂದ ನಿಧಾನವಾಗಿ ರಾಣಾ ಜತೆ ಸಂಪರ್ಕಕ್ಕೆ ಬಂದಿದ್ದಳು. ಆತ ಕೂಡ ಉರ್ದು ಪತ್ರಿಕೆಯೊಂದಕ್ಕೆ ವರದಿ ಮಾಡುತ್ತಿದ್ದ. ಹೀಗೆ ಇವರಿಬ್ಬರ ನಡುವೆ ಸಂಪರ್ಕವುಂಟಾಗಿ ಅದು ಬೇಹುಗಾರಿಕೆಯತ್ತ ಹೊರಳಿತ್ತು.

ತನ್ನ ಉರ್ದು ಭಾಷಾ ಪಾಂಡಿತ್ಯ, ಹೇರ್ ಸ್ಟೈಲ್ ಮತ್ತು ಉರ್ದು ಪತ್ರಿಕೆಗಳನ್ನು ಗೆಳೆಯರ ಎದುರು ಹೊಗಳಿ, ತನ್ನ ಸ್ಟೇಟಸ್ ಹೆಚ್ಚಿಸಿಕೊಳ್ಳುವುದೆಂದರೆ ಮಾಧುರಿಗೆ ಎಲ್ಲಿಲ್ಲದ ಖುಷಿ. ಈ ಸಂದರ್ಭದಲ್ಲಿ ಆಕೆ ಇಂಗ್ಲೀಷ್ ಪತ್ರಿಕೆಗಳನ್ನು ಹೀಗಳೆಯುತ್ತಿದ್ದಳು.

ಇಂಗ್ಲೀಷ್ ಪತ್ರಿಕೆಗಳು ತುಂಬಾ ಬೋರ್ ಹೊಡೆಸುತ್ತವೆ. ಅವರು ಒಂದು ದಿನ ತಡವಾಗಿ ಸುದ್ದಿಗಳನ್ನು ಪ್ರಕಟಿಸುತ್ತಾರೆ. ನಿಮಗೆ ನಿಜಕ್ಕೂ ನೈಜ ವರದಿ, ನೈಜ ಗಾಸಿಪ್‌ಗಳು ಬೇಕಿದ್ದರೆ ಉರ್ದು ಪತ್ರಿಕೆಗಳನ್ನು ಓದಿ ಎಂದು ಹೇಳುತ್ತಿದ್ದಳಂತೆ.

ಸಂಬಂಧಪಟ್ಟ ಸುದ್ದಿಗಳಿವು:
** ಪಾಕ್ ಪರ ಬೇಹುಗಾರಿಕೆ; ಭಾರತೀಯ ರಾಯಭಾರಿ ಸೆರೆ
** ಮಾಧುರಿ ದೇಶದ್ರೋಹದ ಹಿಂದೆ ಐಎಸ್ಐ ಹಣ ಮತ್ತು ಪ್ರೇಮಿ!
ಸಂಬಂಧಿತ ಮಾಹಿತಿ ಹುಡುಕಿ