ರಾಷ್ಟ್ರೀಯ ಜನತಾ ದಳ ಮುಖಂಡ ಲಾಲೂ ಪ್ರಸಾದ್ ಯಾವದ್ ವಿರುದ್ಧ ಬಿಜೆಪಿ ಸಂಸದ ಅನಂತ್ ಕುಮಾರ್ ಅಸಂಸದೀಯ ಭಾಷೆಯನ್ನು ಬಳಸಿರುವುದನ್ನು ಒಪ್ಪಿಕೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಇಂದು ಕ್ಷಮೆ ಯಾಚಿಸಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾದಾಗ ಸುಷ್ಮಾ ಅವರನ್ನು ಮಾತನಾಡುವಂತೆ ಸ್ವೀಕರ್ ಮೀರಾ ಕುಮಾರ್ ಸೂಚಿಸಿದ್ದರು.
ಬುಧವಾರ ನಡೆದ ಕಲಾಪದ ಕುರಿತ ವಿವರಗಳನ್ನು ಹೇಳಲು ನಾನು ಬಯಸುವುದಿಲ್ಲ. ನನ್ನ ಸಹೋದ್ಯೋಗಿ ಕೆಲವು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಆ ಶಬ್ಧಗಳಿಗಾಗಿ ನಾನು ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಬುಧವಾರ ಜಾತಿ ಆಧರಿತ ಜನಗಣತಿ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅನಂತ್ ಕುಮಾರ್ ಅವರು ಲಾಲೂ ಪ್ರಸಾದ್ ವಿರುದ್ಧ ಕಿಡಿ ಕಾರುತ್ತಾ, 'ನೀವು ಭಾರತೀಯರೋ ಅಥವಾ ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರೋ?' ಎಂದಿದ್ದರು. ಅಲ್ಲದೆ 'ರಾಷ್ಟ್ರದ್ರೋಹಿ' ಎಂಬ ಪದ ಸೇರಿದಂತೆ ಅವರ ಬಾಯಿಯಿಂದ ಅಸಂಸದೀಯ ಪದಗಳು ಬಂದಿದ್ದವು.
ಅನಂತ್ ಕುಮಾರ್ ಟೀಕೆ ಹಿನ್ನೆಲೆಯಲ್ಲಿ ಆರ್‌ಜೆಡಿ, ಸಮಾಜವಾದಿ ಪಕ್ಷಗಳ ಸಂಸದರು ತೀವ್ರ ಗದ್ದಲ ಎಬ್ಬಿಸಿ ಕಲಾಪವನ್ನು ಹಲವು ಬಾರಿ ಮುಂದೂಡಿಸಿದ್ದರು. ಈ ಸಂದರ್ಭದಲ್ಲಿ ನಾನೇನು ತಪ್ಪು ಮಾತನಾಡಿಲ್ಲ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಅನಂತ್ ಕುಮಾರ್, ಕ್ಷಮೆ ಕೇಳಲು ನಿರಾಕರಿಸಿದ್ದರು.
ಅನಂತ್ ಕುಮಾರ್ ಪರವಾರಿ ಕ್ಷಮೆ ಯಾಚಿಸಿದ ಸುಷ್ಮಾ ಸ್ವರಾಜ್ ಅವರು ಲಾಲೂ ಪ್ರಸಾದ್ ಅವರ ಪರವಾಗಿಯೂ ಕ್ಷಮೆ ಕೇಳಿದ್ದಾರೆ. ಬಿಜೆಪಿ ಸಂಸದರ ಮೇಲೆ ಭೀತಿ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದ್ದ ಲಾಲೂ ಅವರ ಪರವಾಗಿಯೂ ನಾನು ಸಂಸತ್ತಿನ ಕ್ಷಮೆ ಕೇಳುತ್ತಿದ್ದೇನೆ ಎಂದು ಸುಷ್ಮಾ ತಿಳಿಸಿದ್ದಾರೆ.