ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್‌ಗೆ ಗಲ್ಲು ಶಿಕ್ಷೆ ವಿಧಿಸಲು ಪಕ್ಷದ ಬೆಂಬಲವಿದೆ: ಕಾಂಗ್ರೆಸ್ (Afzal Guru | Supreme Court | Digvijay Singh | Parliament attack case)
ಅಫ್ಜಲ್‌ಗೆ ಗಲ್ಲು ಶಿಕ್ಷೆ ವಿಧಿಸಲು ಪಕ್ಷದ ಬೆಂಬಲವಿದೆ: ಕಾಂಗ್ರೆಸ್
ನವದೆಹಲಿ, ಗುರುವಾರ, 20 ಮೇ 2010( 15:04 IST )
ಸಂಸತ್ ದಾಳಿ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಗುರುವನ್ನು ನಿಗದಿತ ದಿನಾಂಕಕ್ಕೂ ಮುನ್ನವೇ ಗಲ್ಲಿಗೇರಿಸಲು ಕಾಂಗ್ರೆಸ್‌ನ ಸಹಮತ ಇರುವುದಾಗಿ ಬುಧವಾರ ಸ್ಪಷ್ಟಪಡಿಸಿದೆ.
ಸಂಸತ್ ದಾಳಿ ಪ್ರಕರಣದ ಪ್ರಮುಖ ಪಾತ್ರಧಾರಿಯಾಗಿದ್ದ ಅಫ್ಜಲ್ ಗುರು ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಆತನ ಪತ್ನಿ ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾದಾನ ಪತ್ರ ದೆಹಲಿ ಸರ್ಕಾರದಲ್ಲಿ ಕಳೆದ ನಾಲ್ಕುವರೆ ವರ್ಷದಿಂದ ಧೂಳು ಹಿಡಿಯುತ್ತ ಕುಳಿತಿತ್ತು. ಗಲ್ಲು ಶಿಕ್ಷೆ ಕುರಿತು ಕೇಂದ್ರ ಗೃಹಸಚಿವಾಲಯ ದೆಹಲಿ ಸರ್ಕಾರದ ವಿವರಣೆ ಕೇಳಿತ್ತು. ಏತನ್ಮಧ್ಯೆ ಅಫ್ಜಲ್‌ಗೆ ಸುಪ್ರೀಂಕೋರ್ಟ್ ನೀಡಿರುವ ಗಲ್ಲು ಶಿಕ್ಷೆಯನ್ನು ತಾನು ಅನುಮೋದಿಸುವುದಾಗಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಿಳಿಸಿದ್ದರು.
ಅಲ್ಲದೇ ಅಫ್ಜಲ್ ಕ್ಷಮಾದಾನ ಮನವಿಯನ್ನು ಲೆಫ್ಟಿನೆಂಟ್ ಗವರ್ನರ್ ಖನ್ನಾ ಅವರಿಗೆ ಕಳುಹಿಸಿತ್ತು. ಖನ್ನಾ ಅವರು ಪರಿಶೀಲನೆ ನಡೆಸಿದ ನಂತರ ಅದನ್ನು ಮತ್ತೆ ದೆಹಲಿ ಸರ್ಕಾರಕ್ಕೆ ರವಾನಿಸಿದ್ದಾರೆ.
ಆದರೆ ಕಾಂಗ್ರೆಸ್ ಸರ್ಕಾರ ಅಫ್ಜಲ್‌ಗೆ ಗಲ್ಲು ಶಿಕ್ಷೆ ವಿಧಿಸಲು ಮೀನಮೇಷ ಎಣಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಹೆಚ್ಚುತ್ತಿರುವಂತೆಯೇ, ಅಫ್ಜಲ್‌ಗೆ ಗಲ್ಲು ಶಿಕ್ಷೆ ನೀಡಲು ಯಾವುದೇ ಸಮಸ್ಯೆ ಇಲ್ಲ, ಅದಕ್ಕೆ ಕಾಂಗ್ರೆಸ್ ಕೂಡ ಬದ್ಧವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಈ ಮೊದಲು ಅಫ್ಜಲ್ ಗಲ್ಲು ಶಿಕ್ಷೆ ಪ್ರಕರಣ ಕುರಿತಂತೆ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ತಿಳಿಸಿದ್ದರು. ಈ ಹೇಳಿಕೆಗೆ ಸ್ಪಷ್ಟನೆ ಎಂಬಂತೆ ಸಿಂಗ್ ಇದೀಗ ಪಕ್ಷದ ನಿಲುವನ್ನು ಖಚಿತಪಡಿಸಿದ್ದಾರೆ.