ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂ ಯಾತ್ರಾರ್ಥಿಗಳನ್ನು ಶೋಷಿಸಿದರೆ ಜಾಗ್ರತೆ: ಬಿಜೆಪಿ (Mata Vaishnodevi | Amarnath Yatra | Jammu and Kashmir | India)
Bookmark and Share Feedback Print
 
ಅಮರನಾಥ ಮತ್ತು ಮಾತಾ ವೈಷ್ಣೋದೇವಿ ಪುಣ್ಯಕ್ಷೇತ್ರಗಳ ದರ್ಶನಕ್ಕೆಂದು ತೆರಳುವ ಹಿಂದೂ ಯಾತ್ರಾರ್ಥಿಗಳ ವಾಹನಗಳಿಗೆ ಭಾರೀ ತೆರಿಗೆ ಹೇರುವ ನಿರ್ಧಾರಕ್ಕೆ ಬಂದಿರುವ ಜಮ್ಮು-ಕಾಶ್ಮೀರ ಸರಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ತಕ್ಷಣವೇ 'ಜಜಿಯಾ' ತೆರಿಗೆಯನ್ನು ವಾಪಸ್ ಪಡೆದುಕೊಳ್ಳದಿದ್ದರೆ ರಾಷ್ಟ್ರವ್ಯಾಪಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಸಂಬಂಧಪಟ್ಟ ಸುದ್ದಿ: ಅಮರನಾಥ, ವೈಷ್ಣೋದೇವಿ ಯಾತ್ರೆ ಮಾಡ್ತೀರಾ? ಹಣ ಇದ್ಯಾ?

ಜಮ್ಮು-ಕಾಶ್ಮೀರದಲ್ಲಿರುವ ಅಮರನಾಥ ಮತ್ತು ವೈಷ್ಣೋದೇವಿ ಯಾತ್ರಾರ್ಥಿಗಳ ಬಸ್ ಪ್ರವೇಶಕ್ಕೆ 2,000 ರೂಪಾಯಿ ಪ್ರವೇಶ ಧನ ನೀಡಬೇಕೆಂಬ ನಿಯಮವನ್ನು ಇದೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್ ಗೋಯಲ್ ತಿಳಿಸಿದ್ದಾರೆ.

ಬಾಬಾ ಅಮರನಾಥ ಮತ್ತು ಮಾತಾ ವೈಷ್ಣೋದೇವಿ ದರ್ಶನಕ್ಕೆ ಹೋಗುವ ಲಕ್ಷಾಂತರ ಯಾತ್ರಾರ್ಥಿಗಳ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವ ಜಮ್ಮು-ಕಾಶ್ಮೀರ ಸರಕಾರದ ನಿರ್ಧಾರ ಮೊಘಲ್ ಆಳ್ವಿಕೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ಹೇರಲಾಗುತ್ತಿದ್ದ 'ಜಜಿಯಾ' ತೆರಿಗೆಯನ್ನು ನೆನಪಿಗೆ ತರಿಸುತ್ತಿದೆ ಎಂದು ಗೋಯೆಲ್ ಖಂಡಿಸಿದ್ದಾರೆ.

ಪ್ರವೇಶ ಶುಲ್ಕವನ್ನು ರದ್ದು ಮಾಡದೇ ಇದ್ದಲ್ಲಿ ಅದರ ವಿರುದ್ಧ ಜನ ಅನಿವಾರ್ಯವಾಗಿ ಮುಷ್ಕರ ಆರಂಭಿಸಬೇಕಾಗುತ್ತದೆ. ತಕ್ಷಣವೇ ಈ ವಿಚಾರದಲ್ಲಿ ಕೇಂದ್ರದ ಯುಪಿಎ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಗೋಯೆಲ್ ಎಚ್ಚರಿಕೆ ನೀಡಿದ್ದಾರೆ.

ಅದೇ ಹೊತ್ತಿಗೆ ಅಮರನಾಥ ಯಾತ್ರಾರ್ಥಿಗಳಿಗೆ ಉಚಿತವಾಗಿ ಅನ್ನದಾನ ಮಾಡುವವರಿಂದ ಸರಕಾರವು 25,000 ರೂಪಾಯಿ ಶುಲ್ಕವನ್ನು ಬಯಸಿದೆ ಎಂದೂ ಆರೋಪಿಸಿದ್ದಾರೆ.

ಅಲ್ಲಿನ ಸರಕಾರವು ಹಿಂದೂ ತೀರ್ಥಯಾತ್ರಿಗಳ ಭಾವನೆಗಳ ಜತೆ ಆಟವಾಡುತ್ತಿದೆ. ಯಾತ್ರಿಕರಿಗೆ ಅತ್ಯುತ್ತಮ ವ್ಯವಸ್ಥೆಗಳನ್ನು ಒದಗಿಸುವ ಬದಲಾಗಿ ಅವರ ಯಾತ್ರೆಯನ್ನು ಮೊಟಕುಗೊಳಿಸಲು ತನ್ನಿಂದ ಸಾಧ್ಯವಾಗುವ ಎಲ್ಲಾ ಯತ್ನಗಳನ್ನೂ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹದಿನೈದೇ ದಿನ ಸಾಕು: ಗಿಲಾನಿ
ಈ ನಡುವೆ ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸೈಯದ್ ಆಲಿ ಗಿಲಾನಿ ಅಮರನಾಥ ಯಾತ್ರಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ. ಅಮರನಾಥ ಯಾತ್ರೆಯನ್ನು 15 ದಿನಗಳಲ್ಲಿ ಮುಗಿಸದೇ ಇದ್ದರೆ ಅದರಿಂದ ಎದುರಾಗುವ ಸಮಸ್ಯೆಗಳಿಗೆ ನೀವೇ ಹೊಣೆ ಎಂದು ಅವರು ಹೇಳಿದ್ದಾರೆ.

ಶ್ರೀನಗರದ ಮಸೀದಿಯೊಂದರಲ್ಲಿ ಮಾತನಾಡುತ್ತಿದ್ದ ಹುರಿಯತ್ ಕಾನ್ಫರೆನ್ಸ್ ನಾಯಕ, ನಾವು ಹಿಂದೂಗಳ ಅಮರನಾಥ ಗುಹಾಯಾತ್ರೆಯ ವಿರೋಧಿಗಳಲ್ಲ. ಆದರೆ ಆ ಯಾತ್ರೆಯನ್ನು ಎರಡು ತಿಂಗಳುಗಳ ಬದಲು ಹದಿನೈದು ದಿನಗಳಲ್ಲಿ ಮುಗಿಸಬೇಕು ಎಂದಿದ್ದಾರೆ.

ಯಾತ್ರೆಯನ್ನು ಎರಡು ತಿಂಗಳು ನಡೆಸುವುದರಿಂದ ನಮ್ಮ ಜೀವ ಪರಿಸರ ವಿಜ್ಞಾನ ಮತ್ತು ವಾತಾವರಣಕ್ಕೆ ತೊಂದರೆಯಾಗುತ್ತದೆ. ಗಂಗೋತ್ರಿ ಯಾತ್ರೆಯನ್ನು ಹದಿನೈದು ದಿನಗಳಲ್ಲಿ ಮುಗಿಸಬಹುದಾದರೆ, ಅಮರನಾಥ ಯಾತ್ರೆ ಯಾಕೆ ಸಾಧ್ಯವಿಲ್ಲ. ಸರಕಾರ ಈ ಕುರಿತು ಗಂಭೀರವಾಗಿ ಯೋಚಿಸಲಿ. ತಪ್ಪಿದಲ್ಲಿ ನಾವು ಸುಮ್ಮನಿರಲಾರೆವು ಎಂದು ಗಿಲಾನಿ ಬೆದರಿಕೆ ಹಾಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ