ಲಷ್ಕರ್ ಇ ತೋಯ್ಬಾ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ನೀಡಿದ್ದ ಮಾಹಿತಿಗಳನ್ನು ಭಾರತದ ಅಧಿಕಾರಿಗಳು ಬಹಿರಂಗಪಡಿಸುತ್ತಿರುವುದರ ವಿರುದ್ಧ ಅಮೆರಿಕಾ ತಗಾದೆ ಎತ್ತಿದ್ದೇ ಜಿ.ಕೆ. ಪಿಳ್ಳೈ ವಿರುದ್ಧ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕಿಡಿ ಕಾರಲು ಕಾರಣವಾಯಿತೇ? ಇಂತಹ ಹತ್ತು ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.
ಮುಂಬೈ ದಾಳಿಯ ಹಿಂದೆ ಐಎಸ್ಐ ಕೈವಾಡವಿದೆ ಎಂದು ಹೆಡ್ಲಿ ಹೇಳಿದ್ದಾನೆಂದು ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ನೀಡಿದ್ದ ಹೇಳಿಕೆಗೆ ಪಾಕಿಸ್ತಾನವು ಭಾರತದ ಉಪಸ್ಥಿತಿಯಲ್ಲೇ ತನ್ನ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕುರಿತು ಇತ್ತೀಚಿನವರೆಗೂ ಸುಮ್ಮನಿದ್ದ ಕೃಷ್ಣ, ನಿನ್ನೆಯಷ್ಟೇ ಪಿಳ್ಳೈಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮುಂಬೈ ದಾಳಿಯಲ್ಲಿ ಐಎಸ್ಐ ಕೈವಾಡವಿದೆ ಎಂಬ ಹೇಳಿಕೆಯನ್ನು ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ನೀಡಬಾರದಿತ್ತು. ಒಂದು ವೇಳೆ ನಾನು ಸರಕಾರದ ಗೃಹ ಕಾರ್ಯದರ್ಶಿಯಾಗಿರುತ್ತಿದ್ದರೆ, ಹೆಡ್ಲಿ ವರದಿಯ ಕುರಿತು ನಾನು ಮಾತನಾಡುತ್ತಿರಲಿಲ್ಲ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಾತುಕತೆ ಮುಂದುವರಿಯಬೇಕಾಗಿದೆ, ಇದನ್ನು ಬಿಟ್ಟರೆ ಸಮಸ್ಯೆಗಳನ್ನು ಪರಿಹರಿಸಲು ಬೇರೆ ಮಾರ್ಗಗಳಿಲ್ಲ ಎಂದು ಕೃಷ್ಣ ಹೇಳಿದ್ದರು.
ಇತ್ತೀಚೆಗಷ್ಟೇ ಇಸ್ಲಾಮಾಬಾದ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಿಳ್ಳೈ ಹೇಳಿಕೆ ಕುರಿತು ಪ್ರತಿಕ್ರಿಯಿಸುತ್ತಿದ್ದ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ, 'ಅವರ ಆರೋಪ ಅನುಚಿತವಾದದ್ದು ಎಂದು ನಾನು ಮತ್ತು ಭಾರತದ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದೇವೆ' ಎಂದಿದ್ದರು. ಆದರೆ ಪಕ್ಕದಲ್ಲೇ ಕುಳಿತಿದ್ದ ಸಚಿವ ಕೃಷ್ಣ, ಭಾರತದ ಗೃಹ ಕಾರ್ಯದರ್ಶಿಯನ್ನು ಸಮರ್ಥಿಸಿಕೊಳ್ಳುವ ಅಥವಾ ಪಾಕಿಸ್ತಾನದ ಹೇಳಿಕೆಯನ್ನು ಆಕ್ಷೇಪಿಸುವ ಯಾವುದೇ ನಡೆಗೂ ಮುಂದಾಗದೆ ಅಚ್ಚರಿ ಹುಟ್ಟಿಸಿದ್ದರು.
ಅಮೆರಿಕಾ ಒತ್ತಡ ಕಾರಣವೇ? ಮುಂಬೈ ದಾಳಿ ಕುರಿತ ಪ್ರಕರಣದಲ್ಲಿ ಅಮೆರಿಕಾದಿಂದ ಬಂಧಿಸಲ್ಪಟ್ಟಿರುವ ಪಾಕ್ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿಯನ್ನು ಭಾರತಕ್ಕೆ ಒಪ್ಪಿಸುವ ಬದಲು ಕೇವಲ ವಿಚಾರಣೆಗಷ್ಟೇ ಅವಕಾಶ ನೀಡಿರುವುದನ್ನು ಕೇಂದ್ರ ಸರಕಾರ ಕಣ್ಮುಚ್ಚಿ ಒಪ್ಪಿಕೊಂಡ ಬಳಿಕವೂ ಇದೀಗ ದೊಡ್ಡಣ್ಣನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಒಂದು ಕಡೆಯಿಂದ ಪಾಕಿಸ್ತಾನವನ್ನು ಓಲೈಸುತ್ತಾ ಮಿಲಿಟರಿ ಮತ್ತು ಆರ್ಥಿಕ ಸಹಕಾರ ನೀಡುತ್ತಿರುವ ಅಮೆರಿಕಾ, ಮತ್ತೊಂದು ಕಡೆಯಿಂದ ಭಾರತವನ್ನು ಪರೋಕ್ಷವಾಗಿ ಕಟ್ಟಿ ಹಾಕಲು ಯತ್ನಿಸುತ್ತಿದೆ. ಪಕ್ಕದ ರಾಷ್ಟ್ರವನ್ನು ಪ್ರಬಲಗೊಳಿಸುವ ಮೂಲಕ ಭಾರತದ ಬೆಳವಣಿಗೆಗೆ ಬೆದರಿಕೆ ಹಾಕುವ ಪರೋಕ್ಷ ತಂತ್ರಗಾರಿಕೆಯನ್ನು ಅಮೆರಿಕಾ ನಡೆಸುತ್ತಿರುವುದು ಸ್ಪಷ್ಟವಾಗಿದೆ.
ಇತ್ತೀಚೆಗಷ್ಟೇ ಅಮೆರಿಕಾಕ್ಕೆ ತೆರಳಿ ಹೆಡ್ಲಿಯನ್ನು ವಿಚಾರಣೆ ನಡೆಸಿದ್ದ ಭಾರತೀಯ ತನಿಖಾ ದಳಗಳಿಗೆ ಆತ ಆಘಾತಕಾರಿ ಮಾಹಿತಿಗಳನ್ನು ನೀಡಿದ್ದ. ಈ ಹೇಳಿಕೆಗಳನ್ನು ಒಂದೊಂದಾಗಿಯೇ ಬಹಿರಂಗಪಡಿಸುತ್ತಾ ಪಾಕಿಸ್ತಾನದ ಕುತಂತ್ರವನ್ನು ಅಧಿಕಾರಿಗಳು ಬಹಿರಂಗಪಡಿಸುತ್ತಿದ್ದಾರೆ. ಆದರೆ ಇದು ಸಲ್ಲದು ಎಂದು ಅಮೆರಿಕಾ ಕ್ಯಾತೆ ತೆಗೆಯುತ್ತಿದೆ. ಇದೇ ಕಾರಣದಿಂದ ಪಿಳ್ಳೈ ಮೇಲೆ ಕೃಷ್ಣ ತಿರುಗಿ ಬಿದ್ದಿದ್ದಾರೆ ಎಂದು ಸಂಶಯಿಸಲಾಗಿದೆ.
ಪಾಕ್ ಸೇನೆ ಕೈವಾಡ.. ಕೃಷ್ಣ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ನಿಗದಿಯಂತೆ ಸಾಗಬೇಕಾಗಿದ್ದ ಮಾತುಕತೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳು ಕಾಣಿಸಿಕೊಂಡಿದ್ದವು. ಇಲ್ಲಿ ಪಾಕಿಸ್ತಾನ ಮಿಲಿಟರಿಯು ಪ್ರಮುಖ ಪಾತ್ರ ವಹಿಸಿತ್ತು ಮತ್ತು ಅದೇ ಕಾರಣದಿಂದ ಭಾರತದ ವಿರುದ್ಧ ಪಾಕ್ ಆಕ್ರಮಣ ನಡೆಸಿತ್ತು ಎಂದು ವರದಿಗಳು ಹೇಳಿವೆ.
ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಮತ್ತು ಸಚಿವ ಕೃಷ್ಣ ನಡುವಿನ ಸುದೀರ್ಘ ಮಾತುಕತೆ ಯಶಸ್ವಿಯಾಗಿದೆ. ನಿಮಗೆ ಶುಭ ಸುದ್ದಿ ಕಾದಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಮೂಲಗಳು ಮಾತುಕತೆಯ ನಂತರ ಜುಲೈ 15ರಂದು ಪ್ರತಿಕ್ರಿಯೆ ನೀಡಿದ್ದವು.
ಇದೇ ನಿಟ್ಟಿನಲ್ಲಿ ಅಂದೇ ಅಪರಾಹ್ನ 3.20ಕ್ಕೆ ಸಚಿವರು ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿಯವರನ್ನು ಭೇಟಿ ಮಾಡಲು ತೆರಳಿ 3.30ಕ್ಕೆ ಮಾತುಕತೆ ನಡೆಸಬೇಕಿತ್ತು. ನಂತರ ಸಂಜೆ 5.30ಕ್ಕೆ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರನ್ನು ಭೇಟಿ ಮಾಡಬೇಕಿತ್ತು.
ಆದರೆ ಕೃಷ್ಣ-ಗಿಲಾನಿ ಭೇಟಿಗಾಗಿ ನಿಗದಿಯಾಗಿದ್ದ ಸಮಯವನ್ನು ಪಾಕಿಸ್ತಾನದ ಪ್ರಭಾವಿ ಮಿಲಿಟರಿ ಮುಖ್ಯಸ್ಥ ಅಶ್ಫಕ್ ಫರ್ವೇಜ್ ಖಯಾನಿಯವರಿಗೆ ನೀಡಲಾಗಿತ್ತು. ಖಯಾನಿಯವರು ಮೊದಲು ಗಿಲಾನಿಯನ್ನು ಮತ್ತು ನಂತರ ಜರ್ದಾರಿಯವರನ್ನು ಕೂಡ ಭೇಟಿಯಾಗಿದ್ದರು.
ಇದಾದ ನಂತರ ಪಾಕಿಸ್ತಾನದ ನಡೆಯೇ ಸಂಪೂರ್ಣವಾಗಿ ಬದಲಾಗಿತ್ತು. ಅದು ತನ್ನ ಮಾತುಕತೆಯಲ್ಲಿನ ಮೃದು ನೀತಿಯ ಬದಲು ಆಕ್ರಮಣಕಾರಿ ನಡೆಗೆ ಹೊಂದಿಕೊಂಡಿತ್ತು. ತಜ್ಞರ ಪ್ರಕಾರ ಈ ನಡುವೆ ಕಾಣಿಸಿಕೊಂಡ ಬದಲಾವಣೆಗಳಿಗೆ ಪಾಕ್ ಮಿಲಿಟರಿಯೇ ಕಾರಣ.