ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಬಿಸಿಯಲ್ಲೇ ಮುಸ್ಲಿಮರಿಗೆ ಮೀಸಲಾತಿ ನೀಡ್ತೇವೆ: ಕೇಂದ್ರ
(Reservation for Muslims | OBC | Salman Khurshid | Ranganath Mishra)
ಮುಸ್ಲಿಮರಿಗೆ ಇತರೆ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಮೀಸಲಾತಿ ಒದಗಿಸುವ ಬಗ್ಗೆ ಸರಕಾರ ಪರಿಗಣನೆ ನಡೆಸುತ್ತಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದು, ರಂಗನಾಥ್ ಮಿಶ್ರಾ ಆಯೋಗದ ವರದಿಯನ್ನು ಜಾರಿಗೆ ತರುವ ಬಗ್ಗೆ ಯಾವುದೇ ಸಂಶಯ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ವಿಚಾರವನ್ನು ನಾವು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದೇವೆ, ಅದರ ಪ್ರಕ್ರಿಯೆ ಸಾಗುತ್ತಿದೆ. ನಾವು (ಕಾಂಗ್ರೆಸ್) ಚುನಾವಣಾ ಪ್ರಣಾಳಿಕೆಗೆ ಬದ್ಧರಾಗಿದ್ದೇವೆ. ಎಲ್ಲಾ ಹಂತಗಳಲ್ಲೂ ನಾನು ಇದನ್ನು ಮುನ್ನಡೆಸಲು ಯತ್ನಿಸುತ್ತಿದ್ದೇನೆ. ಕಾಂಗ್ರೆಸ್ ನಾಯಕತ್ವವು ಈ ಕುರಿತು ಸಂಪೂರ್ಣ ಬದ್ಧವಾಗಿದ್ದು, ಶಿಫಾರಸುಗಳನ್ನು ಜಾರಿಗೊಳಿಸುವ ಬಗ್ಗೆ ಯಾವುದೇ ಸಂಶಯ ಬೇಕಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ಸಚಿವರು ತಿಳಿಸಿದರು.
ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸುವ ರಂಗನಾಥ್ ಮಿಶ್ರಾ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸರಕಾರ ಸಿದ್ಧವಾಗಿದೆಯೇ ಎಂಬ ಪ್ರಶ್ನೆಗೆ ಖುರ್ಷೀದ್ ಉತ್ತರಿಸುತ್ತಿದ್ದರು.
ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಶೇ.10 ಮತ್ತು ಇತರ ಅಲ್ಪಸಂಖ್ಯಾತರಿಗೆ ಶೇ.5ರ ಮೀಸಲಾತಿ ನೀಡಬೇಕೆಂದು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಿದ್ದ ಆಯೋಗದ ವರದಿಯಲ್ಲಿ ಹೇಳಲಾಗಿತ್ತು.
ಅಲ್ಪಸಂಖ್ಯಾತರಿಗೆ ಶೇ.15ರ ಒಟ್ಟು ಮೀಸಲಾತಿ ಶಿಫಾರಸನ್ನು ಯಥಾ ರೀತಿಯಲ್ಲಿ ಜಾರಿಗೊಳಿಸುವುದು ದುಸ್ತರವಾದರೆ, ಬದಲಿ ಹಾದಿಯನ್ನು ಅನುಸರಿಸುವ ಬಗ್ಗೆ ಕೂಡ ಆಯೋಗ ಸಲಹೆ ನೀಡಿತ್ತು.
ಮಂಡಲ್ ಆಯೋಗದ ವರದಿಯ ಪ್ರಕಾರ ಒಟ್ಟು ಹಿಂದುಳಿದ ವರ್ಗಗಳಲ್ಲಿ (ಒಬಿಸಿ) ಶೇ.8.4ರಷ್ಟು ಅಲ್ಪಸಂಖ್ಯಾತರಿದ್ದಾರೆ. ಹಾಗಾಗಿ ಶೇ.27ರ ಒಬಿಸಿ ಮೀಸಲಾತಿ ಹಂಚಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.8.4ರ ಉಪ ಹಂಚಿಕೆ ಮಾಡಬೇಕು ಮತ್ತು ಇದರಲ್ಲಿ ಶೇ.6ನ್ನು ಮುಸ್ಲಿಮರಿಗೆ ಮೀಸಲಾಗಿಡಬೇಕು.
ಒಂದೋ ಶೇ.15ರ ಮೀಸಲಾತಿ ನೀಡಬೇಕು, ಇಲ್ಲವೇ ಶೇ.27ರ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರನ್ನೂ ಸೇರಿಸಬೇಕು ಎಂದು ಮಿಶ್ರಾ ಆಯೋಗ ಹೇಳುತ್ತಿದೆ. ನಾವು ಎರಡನೇ ಆಯ್ಕೆಯತ್ತ ಒಲವು ತೋರಿಸುತ್ತಿದ್ದೇವೆ. ಇದನ್ನು ಸಾಚಾರ್ ಆಯೋಗವೂ ಬೆಂಬಲಿಸಿತ್ತು ಎಂದು ಖುರ್ಷೀದ್ ತಿಳಿಸಿದ್ದಾರೆ.