ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ, ನಮಗೆ ಕರ್ನಾಟಕದ ರೈತರ ಹಿತವೇ ಮುಖ್ಯ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳುತ್ತಿರುವಂತೆಯೇ ಅತ್ತಕಡೆಯಿಂದ ಪಕ್ಕದ ರಾಜ್ಯವು 19,000 ಕ್ಯೂಸೆಕ್ಸ್ ನೀರು ಬಿಟ್ಟಿದೆ ಎಂದು ಸ್ವತಃ ತಮಿಳುನಾಡು ಒಪ್ಪಿಕೊಂಡಿದೆ.
ಬುಧವಾರ ಮಧ್ಯಾಹ್ನದ ಬಳಿಕ ಕರ್ನಾಟಕವು 19,000 ಕ್ಯೂಸೆಕ್ಸ್ ನೀರನ್ನು ಹರಿಸಿದ್ದು, ಇಂದು ರಾತ್ರಿ ಮೆಟ್ಟೂರು ತಲುಪುವ ನಿರೀಕ್ಷೆಯಿದೆ ಎಂದು ಮೆಟ್ಟೂರು ಅಣೆಕಟ್ಟು ಸಮೀಪ ತಮಿಳುನಾಡು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಬಿನಿ ಜಲಾಶಯದಿಂದ 16,000 ಕ್ಯೂಸೆಕ್ಸ್ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟಿನಿಂದ 3,000 ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ ಎಂದು ಕರ್ನಾಟಕದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ ಎಂದು ಸ್ಟಾನ್ಲಿ ಜಲಾಶಯದ (ಮೆಟ್ಟೂರು) ಉಪ ವಿಭಾಗಾಧಿಕಾರಿ ಎಸ್. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕಾವೇರಿ ನದಿಮುಖಜ ಭೂಮಿಯ ತಮಿಳುನಾಡು ರೈತರ ಜೀವರಕ್ಷಕವೆನಿಸಿರುವ ಮೆಟ್ಟೂರು ಜಲಾಶಯಕ್ಕೆ ಜೂನ್ 12ಕ್ಕೂ ಮೊದಲೇ ನೀರು ಬಿಡಬೇಕಾಗಿತ್ತಾದರೂ, ಕಡಿಮೆ ಶೇಖರಣೆ ಹಿನ್ನೆಲೆಯಲ್ಲಿ ಕರ್ನಾಟಕ ಮುಂದೂಡಿತ್ತು.
ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ಅಂತಾರಾಜ್ಯ ಜಲವಿವಾದದ ಕುರಿತು ಮಧ್ಯಂತರ ತೀರ್ಪಿನ ಪ್ರಕಾರ ಕರ್ನಾಟಕವು ವರ್ಷವೊಂದರಲ್ಲಿ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು.
ಕರ್ನಾಟಕದಲ್ಲಿ ಪ್ರತಿಭಟನೆ... ಕರ್ನಾಟಕದ ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ಆರೋಪಿಸಿರುವ ಮಂಡ್ಯ, ಶ್ರೀರಂಗಪಟ್ಟಣ, ರಾಮನಗರಗಳಲ್ಲಿ ಜನ ಭಾರೀ ಪ್ರತಿಭಟನೆಗಳನ್ನು ನಡೆಸಿದ್ದಾರೆ.
ಮಂಡ್ಯದ ಇಂಡುವಾಡುವಿನಲ್ಲಿ ರೈತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿ, ಟೈರುಗಳನ್ನು ಉರಿಸಿ ಪ್ರತಿಭಟನೆ ನಡೆಸಿದ್ದಾರೆ. ಜಲಾಶಯ ಭರ್ತಿಯಾಗುವ ಮೊದಲೇ ತಮಿಳುನಾಡಿಗೆ ನೀರು ಬಿಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ನೀರು ಹರಿಸದೆ ತಮಿಳುನಾಡಿನ ಹಿತವನ್ನು ರಕ್ಷಿಸಲು ಸರಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.